Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಕಲಾಮಂದಿರದಲ್ಲಿ ಭರ್ಜರಿ ಬಾಡೂಟಕ್ಕೆ ಆಕ್ಷೇಪ

ಮೈಸೂರು: ನಗರದ ಕಲಾಮಂದಿರ ಆವರಣದಲ್ಲಿ ಬಾಡೂಟ ಸೇವನೆಗೆ ನಿರ್ಬಂಧವಿದ್ದರೂ ದಸರಾ ಸಾಂಸ್ಕೃತಿಕ ಉಪ ಸಮಿತಿ ಸದಸ್ಯರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಅರಮನೆ, ಕಲಾಮಂದಿರ ಸೇರಿದಂತೆ ಎಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಸಮಿತಿ ಅಧಿಕಾರೇತರ ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಗುರುವಾರ ಸಮಿತಿಯ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಸಮಿತಿ ಸದಸ್ಯರಿಗೆ ಕಲಾಮಂದಿರದ ಎಡ ಭಾಗದಲ್ಲಿರುವ ಕಿರುರಂಗದ ಮಂದಿರದ ಎದುರು ಗುರುವಾರ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಸಮಿತಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ಅಽಕಾರಿಗಳು ಆಯೋಜಿಸಿದ್ದರು. ಬಳಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಿರುರಂಗಮಂದಿರ ಎದುರಿನ ಮೈದಾನದಲ್ಲಿ ಪೆಂಡಾಲ್ ಹಾಕಿ ೧೦೦ಕ್ಕೂ ಹೆಚ್ಚು ಮಂದಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. ಇದರ ವಿರುದ್ಧ ಇದೀಗ ಆಕ್ಷೇಪ ವ್ಯಕ್ತವಾಗಿದೆ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರಿಗೆ ಅಭಿನಂದನಾ ಸಮಾರಂಭದೊಂದಿಗೆ ಔತಣಕೂಟ ಏರ್ಪಡಿಸಿದ್ದು, ಎಲ್ಲರಿಗೂ ಸಸ್ಯಾಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು.
-ಜವರಪ್ಪ, ಅಧ್ಯಕ್ಷರು, ಸಾಂಸ್ಕೃತಿಕ ಉಪ ಸಮಿತಿ

ಕಲಾಮಂದಿರದ ಆವರಣದಲ್ಲಿ ಬಾಡೂಟ: ಕ್ರಮಕ್ಕೆ ವಿಶ್ವನಾಥ್ ಆಗ್ರಹ ಮೈಸೂರು: ಕಲಾಮಂದಿರದ ಆವರಣದಲ್ಲಿ ಬಾಡೂಟ ಮಾಡಿದವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡು, ತಪ್ಪಿತಸ್ಥ ಅಽಕಾರಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎ. ಎಚ್. ವಿಶ್ವನಾಥ್ ಆಗ್ರಹಿಸಿದರು. ನಗರದಲ್ಲಿ ಗುರುವಾರ ದಸರಾ ಸಾಂಸ್ಕೃತಿಕ ಸಮಿತಿಯ ಸದಸ್ಯರು, ಅಧಿಕಾರಿಗಳು ಕಲಾಮಂದಿರದ ಆವರಣದಲ್ಲಿ ಬಾಡೂಟ ಮಾಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದವರಿಗೂ, ಅಽಕಾರಿಗಳಿಗೂ ಬುದ್ಧಿಯಿಲ್ಲ. ಯಾರ‍್ಯಾದರೂ ಕಲಾಮಂದಿರದ ಆವರಣದಲ್ಲಿ ಬಾಡೂಟ ಮಾಡುತ್ತಾರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದರು. ಮೈಸೂರು ಅಂದರೇನೇ ಸಂಸ್ಕೃತಿಗೆ ಹೆಸರುವಾಸಿ. ಅಂತಹ ನಾಗರಿಕ ಸಂಸ್ಕೃತಿಯ ಜನ ಇರುವ ಸಾಂಸ್ಕೃತಿಕ ನಗರಿಯ ಕಲಾಮಂದಿರದ ಆವರಣದಲ್ಲಿ ಬಾಡೂಟ ತಿಂದಿದ್ದೀರಾ? ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ ಎಂದು ವಾಗ್ದಾಳಿ ನಡೆಸಿದರು.

 

 

Tags: