ಮಂಡ್ಯ: ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಕೆಆರ್‌ಎಸ್ ಜಲಾಶಯ ತುಂಬಿದ್ದರೂ ಮಳವಳ್ಳಿ ತಾಲ್ಲೂಕಿನ ಶೇ. ೬೦ರಷ್ಟು ಪ್ರದೇಶದ ನಾಲೆ ಹಾಗೂ ಕೆರೆ-ಕಟ್ಟೆಗಳಿಗೆ ನೀರು ಹರಿಯದೆ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ.
ತಾಲ್ಲೂಕಿನ ತಳಗವಾದಿ, ಕಿರು ಗಾವಲು, ಹೂವಿನ ಕೊಪ್ಪಲು, ರಾಗಿಬೊಮ್ಮನಹಳ್ಳಿ, ಮಾರೇಹಳ್ಳಿ, ಹೊಸಹಳ್ಳಿ, ಕಂದೇಗಾಲ, ಮಿಕ್ಕೆರೆ, ಸರಗೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆರೆ-ಕಟ್ಟೆಗಳು ಸಂಪೂರ್ಣ ಬರಿದಾಗಿದ್ದು, ಭತ್ತ ಹಾಗೂ ಕಬ್ಬು ನಾಟಿ ಮಾಡಲು ರೈತರಿಗೆ ನೀರಿನ ಸಮಸ್ಯೆ ಉದ್ಭವವಾಗಿದೆ. ಮಳವಳ್ಳಿ ತಾಲ್ಲೂಕಿನಲ್ಲಿ ಶೇ. ೩೦ರಷ್ಟು ಮಾತ್ರ ಭತ್ತದ ನಾಟಿಯಾಗಿದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿ zರೆ. ಕೊಳವೆ ಬಾವಿ ಹೊಂದಿರುವ ಶೇ. ೩೦ ರಿಂದ ೩೫ರಷ್ಟು ರೈತರು ಮಾತ್ರ ನಾಟಿ ಮಾಡಿದ್ದಾರೆ.
ಇನ್ನುಳಿದ ರೈತರು ನಾಲೆಗಳ ನೀರನ್ನೇ ಅವಲಂಬಿಸಿದ್ದಾರೆ. ನಾಲೆಗಳಲ್ಲಿ ಗಿಡಗಂಟಿಗಳನ್ನು ತೆಗೆಯುವುದು ಹಾಗೂ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಅಽಕಾರಿಗಳು ವಿಫಲರಾಗಿದ್ದಾರೆ. ಯಾವುದೇ ಇಂಜಿನಿಯರ್‌ಗಳು ನಾಲೆಗಳ ಪರಿಶೀಲನೆಗೆ ಬರುವುದಿಲ್ಲ, ಎಲ್ಲರೂ ಬೆಂಗಳೂರು ಮತ್ತು ಮೈಸೂರಿನಲ್ಲಿ ವಾಸವಿದ್ದು, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಂದ ರೈತ ಪರ ಕೆಲಸ ಮಾಡಲು ಸಾಧ್ಯವೇ ಎನ್ನುವುದು ರೈತರು ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ.
ಕೃಷ್ಣರಾಜ ಸಾಗರ ಜಲಾಶಯ ತುಂಬಿ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದ್ದರೂ ತಾಲ್ಲೂಕಿನ ನಾಲೆಗಳಿಗೆ ನೀರು ಬಂದಿಲ್ಲ, ಈ ಬಗ್ಗೆ ಇಲ್ಲಿನ ರೈತರು ಪ್ರಶ್ನೆ ಮಾಡಿದರೆ ಇಂಜಿನಿಯರ್‌ಗಳು ಉಡಾಫೆ ಉತ್ತರ ನೀಡುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ೯ ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ಕೃಷ್ಣರಾಜ ಸಾಗರ ಜಲಾಶಯದಿಂದ ವಿಶ್ವೇಶ್ವರಯ್ಯ, ಮಾಧವಮಂತ್ರಿ ಸೇರಿದಂತೆ ಹಲವು ಉಪ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಕೃಷ್ಣರಾಜ ಸಾಗರದಿಂದ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಮಳವಳ್ಳಿ ಕೊನೆಯ ಭಾಗಕ್ಕೆ ನೀರು ಹರಿಯುತ್ತದೆ. ಆದರೆ, ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ ತಾಲ್ಲೂಕುಗಳ ರೈತರು ಸುಮಾರು ೯ ಸಾವಿರ ಪಂಪ್‌ಸೆಟ್‌ಗಳನ್ನು ನಾಲೆಗೇ ಅಳವಡಿಸಿ ನೀರನ್ನು ತಮ್ಮ ತಮ್ಮ ಜಮೀನುಗಳಿಗೆ ಹರಿಸುತ್ತಿರುವುದರಿಂದ ಮಳವಳ್ಳಿ ಹಾಗೂ ಮದ್ದೂರು ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ಆರೋಪವಿದೆ.
ಮಳವಳ್ಳಿ ತಾಲ್ಲೂಕಿನ ನಾಲೆಗಳಿಗೆ ನೀರು ಹರಿದಿಲ್ಲ. ಇಲ್ಲಿಯ ರೈತರು ಅನುಭವಿಸುತ್ತಿರುವ ಕಷ್ಟವನ್ನು ಜಿಲ್ಲೆಯ ಯಾವ ತಾಲ್ಲೂಕಿನವರೂ ಅನುಭವಿಸುತ್ತಿಲ್ಲ. ಮಾಧವ ಮಂತ್ರಿ, ರಾಮಸ್ವಾಮಿ, ಹೆಬ್ಬಕವಾಡಿ, ವಿಶ್ವೇಶ್ವರಯ್ಯ, ಹೆಬ್ಬಳ್ಳ ಚೆನ್ನಯ್ಯ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಮಾರೇಹಳ್ಳಿ ಹಾಗೂ ಮಳವಳ್ಳಿ ಕೆರೆಗಳು ಭರ್ತಿಯಾಗದೆ ಸಂಪರ್ಕ ಕೆರೆಗಳಿಗೂ ನೀರು ಹರಿದಿಲ್ಲ. – ಡಾ. ಕೆ. ಅನ್ನದಾನಿ, ಮಾಜಿ ಶಾಸಕರು.
ಕೆಆರ್‌ಎಸ್ ಭರ್ತಿಯಾಗಿ ಎಲ್ಲ ನಾಲೆಗಳಿಗೂ ನೀರು ಹರಿಸುತ್ತಿದ್ದರೂ ಮಳವಳ್ಳಿ ತಾಲ್ಲೂಕಿನ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಯದೆ ಬಿತ್ತನೆ ಕಾರ್ಯವೂ ವಿಳಂಬವಾಯಿತು. ಪ್ರಸ್ತುತ ನಾಟಿ ಮಾಡಲೂ ವಿಳಂಬವಾಗಿದೆ. ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. – ಎಂ. ಎ. ಚಿಕ್ಕರಾಜು, ಮಳವಳ್ಳಿ.
ನಾಲೆಯ ಮೇಲ್ಭಾಗದ ರೈತರು ಮಿತವಾಗಿ ನೀರು ಬಳಸಿ ಕೊಂಡರೆ ಕೊನೆಯ ಭಾಗಕ್ಕೂ ನೀರು ಹರಿದು ಬರುತ್ತದೆ. ಇದಕ್ಕಾಗಿ ಯಾವ ರೈತರನ್ನೂ ದೂರುವು ದಿಲ್ಲ. ಕಾವೇರಿ ಎಲ್ಲರ ಆಸ್ತಿ. ಆದರೆ ಕೊನೆಯ ಭಾಗದ ಮಳವಳ್ಳಿ ಹಾಗೂ ಮದ್ದೂರು ವ್ಯಾಪ್ತಿಯ ರೈತರಿಗೂ ಸಮರ್ಪಕವಾಗಿ ನೀರು ದೊರೆಯಬೇಕೆಂಬುದು ನನ್ನ ಉದ್ದೇಶ. ಆನ್ ಅಂಡ್ ಆಫ್ ಸಿಸ್ಟಮ್‌ನಲ್ಲಿ ನೀರು ಸರಬರಾಜು ಮಾಡುವುದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗುವುದರೊಂದಿಗೆ ಮಾರ್ಪಾಡು ಮಾಡಿಕೊಳ್ಳುವಂತೆ ತಿಳಿಸಿದ್ದೇನೆ. – ಪಿ. ಎಂ. ನರೇಂದ್ರಸ್ವಾಮಿ, ಶಾಸಕರು, ಮಳವಳ್ಳಿ