Mysore
23
scattered clouds
Light
Dark

ನಂ.ಗೂಡು ನಗರಸಭೆ ಚುನಾವಣೆ: ಬಿಜೆಪಿಯ ನಾಲ್ವರು ಸದಸ್ಯರಿಗೆ ಉಚ್ಚಾಟನೆ ಶಿಕ್ಷೆ

ಮೈಸೂರು: ನಂಜನಗೂಡು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ, ಕಾಂಗ್ರೆಸ್‌ಗೆ ಬೆಂಬಲಿಸುವ ಮೂಲಕ ಆ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವುದಕ್ಕೆ ಕಾರಣ ರಾದ ಅಲ್ಲಿನ ನಗರ ಸಭೆಯ ನಾಲ್ವರು ಸದಸ್ಯರನ್ನು ಇದೀಗ ಬಿಜೆಪಿಯಿಂದಲೇ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಶಿಕ್ಷೆ ವಿಧಿಸಲಾಗಿದೆ.

ಅಲ್ಲದೇ ಈ ನಾಲ್ವರ ನಗರಸಭಾ ಸದಸ್ಯ ಸ್ಥಾನವನ್ನು ರದ್ದುಗೊಳಿಸುವಂತೆ ಕೋರಿ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸುವುದಲ್ಲದೆ, ನ್ಯಾಯಾಲಯದ ಮೆಟ್ಟಿ ಲನ್ನೂ ಹತ್ತಲು ಬಿಜೆಪಿ ನಿರ್ಧರಿಸಿದೆ.

ನಂಜನಗೂಡು ನಗರಸಭೆಯ ವಾರ್ಡ್ ನಂ.1ರ ಸದಸ್ಯ ಗಿರೀಶ್ ಕುಮಾರ್, ವಾರ್ಡ್ ನಂ.22ರ ಸದಸ್ಯೆ ಆ‌ರ್.ಮೀನಾಕ್ಷಿ, ವಾರ್ಡ್ ನಂ.27ರ ಸದಸ್ಯೆ ವಿಜಯಲಕ್ಷಿ ಹಾಗೂ ವಾರ್ಡ್ ನಂ.12ರ ಸದಸ್ಯೆ ಗಾಯತ್ರಿ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ.

ಇವರನ್ನು ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ, ಪ್ರಾದೇಶಿಕ ಆಯುಕ್ತರಿಗೆ ಗುರುವಾರ ದೂರು ಸಲ್ಲಿಸಲಾಗು ವುದು, ಅಲ್ಲದೇ ಶೀಘ್ರದಲ್ಲೇ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಈ ನಾಲ್ವರ ಸದಸ್ಯತ್ವವನ್ನು ರದ್ದುಗೊಳಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮೈಸೂರು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂಜನಗೂಡು ನಗರಸಭೆಯ ಈ ನಾಲ್ವರು ಸದಸ್ಯರು ಸೇರಿದಂತೆ ಪಕ್ಷದ ಎಲ್ಲಾ ಸದಸ್ಯರ ಸಭೆಯನ್ನು ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಎಲ್ಲರಿಂದ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಅಲ್ಲದೇ ಪ್ರತಿಯೊಬ್ಬರಿಂದಲೂ ಪ್ರತ್ಯೇಕವಾಗಿ ಲಿಖಿತ ವಾಗಿ ಅಭಿಪ್ರಾಯವನ್ನು ಪಡೆಯಲಾಗಿತ್ತು. ಎಲ್ಲರೂ ಕೂಡ ಪೌರಕಾರ್ಮಿಕ ಸಮುದಾಯಕ್ಕೆ ಸೇರಿದ ಸದಸ್ಯ ದೇವು ಅವರು ಅಧ್ಯಕ್ಷರಾಗ ಬೇಕೆಂದು ಒಮ್ಮತದ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಜಾ.ದಳ ಸದಸ್ಯರು ಕೂಡ ಸಹಮತ ವ್ಯಕ್ತಪಡಿಸಿದ್ದರು. ಹಾಗಾಗಿ ಬಹುಮತವನ್ನು ಹೊಂದಿರುವ ಎನ್‌ಡಿಎ ಮೈತ್ರಿ ಕೂಟ ನಂಜನಗೂಡು ನಗರಸಭೆಯ ಆಡಳಿತವನ್ನು ಹಿಡಿಯುವುದು ನಿಶ್ಚಿತವಾಗಿತ್ತು. ಆದರೆ ನಮ್ಮ ಸಭೆಯಲ್ಲಿ ಭಾಗವಹಿಸಿ, ಊಟ ಮಾಡಿ ರಾತ್ರಿ ತನಕ ಇದ್ದರು. ಪಕ್ಷದ ಎಲ್ಲಾ ಸದಸ್ಯರಿಗೂ ವಿಪ್ ಜಾರಿಗೊಳಿಸಲಾಗಿತ್ತು. ಅವರ ಮೊಬೈಲ್ ನಂಬರ್‌ಗಳಿಗೆ ವಿಪ್ ಜಾರಿಯ ಆದೇಶವನ್ನು ಕಳುಹಿಸಲಾಗಿತ್ತು. ಅಲ್ಲದೇ ಅವರ ಮನೆಗಳಿಗೆ ಹೋಗಿ ನೀಡಲಾಗಿತ್ತು.

ಹೀಗಿದ್ದರೂ ಕೂಡ ಈ ನಾಲ್ವರು ಸದಸ್ಯರು ನಾಪತ್ತೆಯಾಗಿದ್ದರು. ಈ ನಾಲ್ವರು ಸದಸ್ಯರನ್ನು ಹುಡುಕಿದಾಗ, ಆಸ್ಪತ್ರೆಯಲ್ಲಿದ್ದೇವೆ ಎಂದು ಹೇಳಿದ್ದರು. ಆದರೆ ಎಲ್ಲ ಕಡೆ ಹುಡುಕಿ ದರೂ ಸಿಗಲಿಲ್ಲ. ಕೊನೆಗೆ ನಮಗೆ ಕೈಕೊಟ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈ ನಾಲ್ವರೊಂದಿಗೆ ಜಾದಳದ ಮೂವರು ಸದಸ್ಯರು ಕೂಡ ಕೈಜೋಡಿಸಿದ್ದಾರೆ. ಇದರಿಂ ದಾಗಿ ಬಹುಮತದ ಸದಸ್ಯರನ್ನು ಬಿಜೆಪಿ ಹೊಂದಿದ್ದರೂ ಕೂಡ ಈ ನಾಲ್ವರು ಮಾಡಿದ ಪಕ್ಷ ದ್ರೋಹದ ಕೆಲಸದಿಂದ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗದೆ, ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಿದೆ.

ಜಾದಳದ ಮೂವರು ಸದಸ್ಯರು ಕೂಡ ಪಕ್ಷದ ವಿಪ್ ಉಲ್ಲಂಘಿಸಿ, ಕಾಂಗ್ರೆಸ್ ಬೆಂಬಲಿಸಿರುವ ಬಗ್ಗೆ ಆ ಪಕ್ಷದ ಶಾಸಕರಾದ ಜಿ.ಟಿ.ದೇವೇಗೌಡರು, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಯವರೊಂದಿಗೆ ಮಾತನಾಡಿದ್ದೇವೆ. ಅವರನ್ನು ಕೂಡ ಪಕ್ಷದಿಂದ ಉಚ್ಚಾಟಿಸಲು ಕ್ರಮ ಕೈಗೊಳ್ಳು ವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಹೆಚ್. ಡಿ.ಕೋಟೆ, ಪಿರಿಯಾಪಟ್ಟಣ, ಸರಗೂರು, ಬನ್ನೂರಿನ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ನಾವು ಹಿಡಿಯುತ್ತೇವೆ ಎಂದು ತಿಳಿಸಿದರು.

ಇಂತಹ ಪಕ್ಷ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಲು, ಮುಂದೆ ಪಕ್ಷದ ಯಾವ ಸದಸ್ಯರೂ ಈ ರೀತಿ ಪಕ್ಷಕ್ಕೆ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಬಗೆಯದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲು, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಈ ನಾಲ್ವರು ಸದಸ್ಯರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಆ ಮೂಲಕ ಇವರಿಗೆ ಸರಿಯಾದ ಪಾಠ ಕಲಿಸಲಿದ್ದೇವೆ.
-ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರು.

Tags: