Mysore
25
haze

Social Media

ಗುರುವಾರ, 01 ಜನವರಿ 2026
Light
Dark

ಮೈಸೂರು ದಸರಾ ಮತ್ತು ಡೆಲ್ಲಿ ಹಪ್ಪಳ

ಭಯಂಕರ ತಿಂಡಿಪೋತಿಯಾದ ನನಗೆ ದಸರಾ ರಜೆ ಬಂತು ಅಂದರೆ ವಿಶ್ವವಿಖ್ಯಾತ ದಸರಾ ಮೆರವಣಿಗೆ, ಅರಮನೆ, ದೀಪದ ಅಲಂಕಾರ ಇವು ಯಾವುದೂ ಲೆಕ್ಕಕ್ಕಿರಲಿಲ್ಲ. ಲಕ್ವ ಇದ್ದದ್ದು ಎಕ್ಸಿಬಿಷನ್‌ನ ಡೆಲ್ಲಿ ಹಪ್ಪಳದತ್ತ

• ಬಿ.ವಿ.ಭಾರತಿ

ನಾವು ಚಿಕ್ಕವರಿರುವಾಗ ನಾವಿದ್ದ ಹಳ್ಳಿ ಸರಗೂರಿನಲ್ಲಿ ಹೊರಗಿನದ್ದು ತಿನ್ನಲು ಏನೇನೂ ಸಿಗುತ್ತಿರಲಿಲ್ಲ. ಮೈಸೂರಿಗೆ ಬಂದಾಗಲೇ ಸ್ವರ್ಗಸಮಾನವಾದ ಹೋಟೆಲ್ ತಿಂಡಿ ಸಿಗುತ್ತಿದ್ದುದು. ಹಾಗಾಗಿ ನನಗೆ ಮೈಸೂರಿಗೆ ಹೋಗುವುದು ಅಂದರೆ ತಿನ್ನಲು ಸಿಗುತ್ತದೆ ಅನ್ನುವುದೇ ಒಂದು ಸ್ಪೆಷಲ್ ಆಕರ್ಷಣೆ.
ಇಂಥ ತಿಂಡಿಪೋತಿಯಾದ ನನಗೆ ದಸರಾ ರಜೆ ಬಂತು ಅಂದರೆ ವಿಶ್ವವಿಖ್ಯಾತ ದಸರಾ ಮೆರವಣಿಗೆ, ಅರಮನೆ, ದೀಪದ ಅಲಂಕಾರ… ಉಹು ಯಾವುದೆಂದರೆ ಯಾವುದೂ ಲೆಕ್ಕಕ್ಕಿಲ್ಲ. ನನ್ನ ದೃಷ್ಟಿಯೆಲ್ಲ ಎಕ್ಸಿಬಿಷನ್ ಎನ್ನುವ ಮಾಯಾ ಲೋಕದತ್ತ ಮಾತ್ರ! ಸಾಧಾರಣವಾಗಿ ಜನ ಸೇರುವ ಸ್ಥಳವನ್ನು ಕಂಡರೆ ಹಿಂಜರಿಯುತ್ತಿದ್ದ ನನಗೆ ದಸರಾ ಎಕ್ಸಿಬಿಷನ್ ಅಂದರೆ ಮಾತ್ರ ಇಷ್ಟವಾಗುತ್ತಿದ್ದುದು ಅಲ್ಲಿ ಸಿಗುತ್ತಿದ್ದ ಡೆಲ್ಲಿ ಹಪ್ಪಳದ ಕಾರಣದಿಂದ!
ನಮ್ಮ ಮನೆಯ ಹಪ್ಪಳಗಳು ಅಬ್ಬಬ್ಬಾ ಎಂದರೆ ಅಂಗೈಯಗಲ ಇರುತ್ತಿದ್ದವು. ಆದರೆ ರಾಕ್ಷಸಾಕಾರದ ಬಾಣಲೆಯಲ್ಲಿ ಎರಡು ಮೂರು ಲೀಟರ್ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಕರಿಯುವ ಹಗೂರ ಡೆಲ್ಲಿ ಹಪ್ಪಳ ಬಾಲ್ಯದ ನನ್ನ ಪುಟ್ಟ ಕೈಗಳಿಗೆ ಮಾಯಾ ಕಂಬಳಿಯಷ್ಟು ದೊಡ್ಡದಾಗಿರುವಂತೆ ಭಾಸವಾಗುತ್ತಿತ್ತು! ಅದರ ಮೇಲಿಷ್ಟು ಖಾರಾಪುಡಿ, ಮತ್ತೆಂಥದ್ದೋ ಮಸಾಲಾ ಪುಡಿ ಉದುರಿಸಿ ಎದುರಿಗಿಟ್ಟರೆ ಸಾಗರ್ ಸಿನಿಮಾ ದಲ್ಲಿ ‘ಸಾಗರ್ ಜೈಸೆ ಆಂಖೋವಾಲಿ’ ಹಾಡಿನಲ್ಲಿ ಸುತ್ತಲಿನ ಜಗತ್ತೆಲ್ಲ ಮಸುಕಾಗಿ ರಿಷಿ ಕಪೂರ್‌ಗೆ ಡಿಂಪಲ್ ಮಾತ್ರ ಉಳಿಯುತ್ತಾಳಲ್ಲ.. ಹಾಗೆ ನನ್ನ ಜಗತ್ತಿನಲ್ಲಿ ಉಳಿದಿದ್ದೆಲ್ಲ ಮಸುಕಾಗಿ ಡೆಲ್ಲಿ ಹಪಳ ಮಾತ್ರ ಉಳಿಯುತ್ತಿತ್ತು!

ಆದರೆ ಒಂದೇ ಸಂಕಟವೆಂದರೆ ಆಗೆಲ್ಲ ನಾವು ನಾವೇ ಹೋಗುವ ಪರಿಪಾಠವೇ ಇರಲಿಲ್ಲ. ಮೈಸೂರಿನಲ್ಲಿದ್ದ ನೆಂಟರೆಲ್ಲ ಒಟ್ಟಾಗಿ ಹೋಗುತ್ತಿದ್ದೆವು. ಆಗ ಯಾರ ಬಳಿಯೂ ಹೆಚ್ಚಿನ ದುಡ್ಡು ಅನ್ನುವುದು ಇರುತ್ತಿರಲಿಲ್ಲ. ಜೊತೆಗೆ ಒಬ್ಬರಿಗೆ ಒಂದು ಅನ್ನುವ ಛಾಟಿಛಿಜಠಿಣ ಏ ಇರಲಿಲ್ಲ. ಏನೇ ಕೊಂಡರೂ ಹಂಚಿ ತಿನ್ನಬೇಕು. ಹೀಗಿರುವಾಗ ಅಷ್ಟಗಲ ಡೆಲ್ಲಿ ಹಪ್ಪಳ ಒಬ್ಬರಿಗೆ ಒಂದು ಅಂತ ಕೊಡಿಸಿಬಿಡುತ್ತಾರಾ… ಅಸಾಧ್ಯ. ಹಾಗಾಗಿ ಒಂದು ಹಪ್ಪಳಕ್ಕೆ ಇಬ್ಬರು ಮೂವರು ವಾರಸುದಾರರು. ಹಂಚಿಕೊಂಡು ತಿನ್ನುವ ಆ ಗಡಿಬಿಡಿ ಯಲ್ಲಿ ದೊಡ್ಡ ಮಕ್ಕಳು ಗಬಗಬ ಕಬಳಿಸಿ ಮುಗಿಸಿ, ಕೊನೆಗೆ ನನ್ನಂಥ ಚಿಕ್ಕವರಿಗೆ ಸಣ್ಣದಿಷ್ಟು ತುಂಡು ಮಾತ್ರ. ನಾನು ಗೋಳಾಡಿಕೊಂಡು, ಗೊಣಗಾಡಿಕೊಂಡು ತಿನ್ನುವುದರಲ್ಲಿ ಕಾಲು ಭಾಗವೂ ಸಿಗದೇ ಹೋಗಿ, ಡೆಲ್ಲಿ ಹಪ್ಪಳವೆಂಬ ಮಾಯಾಜಿಂಕೆ ನನ್ನ ಪಾಲಿಗೆ ಎಂದೂ ಪೂರ್ತಿಯಾಗಿ ದಕ್ಕದೆ, ಅದೊಂದು ಅತೃಪ್ತಿ ಉಳಿದೇ ಬಿಡುತ್ತಿತ್ತು. ಇನ್ನೂ ಬೇಕಿತ್ತು ಸಾಲಲಿಲ್ಲ ಅಂತ ಗೋಳಾಡಿದರೆ ಅದ್ಯಾಕೆ ಕಂಗಾಳಿ ಹಾಗಾಡ್ತಿ’ ಎಂಬ ಬಯ್ಯುಳ, ಹಿಂದೆಯೇ ‘ಇದೇ ಕೊನೆ ಸಲಾನಾ ತಿನ್ನೋದು? ಮತ್ತೆ ಬರ್ತೀವಲ್ಲ’ ಅನ್ನುವ ಆಶ್ವಾಸನೆ. ಒಂದು ಸಲ ಒಂದೆರಡು ಡೆಲ್ಲಿ ಹಪ್ಪಳ ಇಡಿಯಾಗಿ ಒಬ್ಬಳೇ ತಿನ್ನಬೇಕು’ ಅಂತ ಬಾಲ್ಯದುದ್ದಕ್ಕೂ ಕನಸು ಕಂಡಿದ್ದೇ ಬಂತು. ಕೊನೆಗೂ ಕೈಗೂಡಲೇ ಇಲ್ಲ.

ಈಗ ಮನೆ ತುಂಬ ಹಪ್ಪಳದ ರಾಶಿ. ಆದರೆ ಆರೋಗ್ಯದ ಕಾರಣಕ್ಕೆ ಅಂತ ಮೊನ್ನೆ ಮೈಕ್ರೋವೇವ್‌ನಲ್ಲಿ ಹಪ್ಪಳ ಸುಟ್ಟು ತಿನ್ನುವಾಗ ಇದೆಲ್ಲ ನೆನಪಾಯಿತು.

Tags:
error: Content is protected !!