Mysore
22
overcast clouds
Light
Dark

ಸೋರುತಿಹುದು ಮೈಸೂರು ನಗರಪಾಲಿಕೆ ಕಟ್ಟಡ!

ಎಂ.ಎಸ್.ಕಾಶಿನಾಥ್

ಮೈಸೂರು: ಸಾಂಸ್ಕೃತಿಕ ನಗರಿಯ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಹಾಗೂ ಶತಮಾನದ ಇತಿಹಾಸ ಕಂಡಿರುವ ಮೈಸೂರು ಮಹಾನಗರಪಾಲಿಕೆ ಕಟ್ಟಡ ಸೋರುತ್ತಿದೆ. ಕಟ್ಟಡದ ಮುಂಭಾಗ ಉತ್ತಮ ವಿನ್ಯಾಸದಿಂದ ಲ್ಯಾನ್ಸ್ ಡೌನ್ ಸ್ಥಿತಿ ಕೂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆಯಾದರೂ ಇನ್ನೊಂದೆಡೆ ವರ್ಷಾನುಗಟ್ಟಲೆಯಿಂದ ನಿರಂತರವಾಗಿ ಮಳೆ, ಬಿಸಿಲಿನ ಹೊಡೆತವನ್ನು ತಾಳಲಾರದೆ ಕಟ್ಟಡದ ಚಾವಣಿ ಶಿಥಿಲಗೊಂಡು ದುಸ್ಥಿತಿಯತ್ತ ಸಾಗಿದೆ. ಒಂದಂತಸ್ತಿನ ಕಟ್ಟಡದ ಚಾವಣಿ ಸುಣ್ಣದ ಗಾರೆಯಿಂದ ನಿರ್ಮಿಸಲಾಗಿದ್ದು, ಆಂಗ್ಲ ಭಾಷೆಯ ವೇರ್ ಅಂಡ್ ಟೇರ್‌ಗೆ ಸಿಕ್ಕಿದಂತಾಗಿದೆ. ಆದರೆ, ಬಹಳಷ್ಟು ಬಿರುಕುಗಳಿಂದ ಚಾವಣಿಯು ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಮಹಾನಗರಪಾಲಿಕೆ ಆಡಳಿತ ಸದ್ಯಕ್ಕಂತೂ ತಲೆಕೆಡಿಸಿಕೊಂಡಿಲ್ಲ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಗೆ ಚಾವಣಿಯ ಬಿರುಕುಗಳಿಂದ ನೀರು ಸೋರುತ್ತಿದ್ದು, ಮಹಡಿಯಲ್ಲಿರುವ ಬಹುತೇಕ ಎಲ್ಲ ಕಚೇರಿ ಕೊಠಡಿಗಳ ಸೀಲಿಂಗ್‌ ನಿಂದ ನೀರು ಜಿನುಗುತ್ತಿದೆ. ವಿಶೇಷವೆಂದರೆ ಮಹಾನಗರಪಾಲಿಕೆಯ ಮೇಲಂತಸ್ತಿನಲ್ಲಿರುವ ಪಾಲಿಕೆ ಆಯುಕ್ತರ ಕಚೇರಿಯಲ್ಲೇ ಹೆಚ್ಚು ನೀರು ಜಿನುಗುತ್ತಿರುವುದು ದುರಂತ. ಬಿರುಕು ಬಿಟ್ಟಿರುವ ಜಾಗಗಳಲ್ಲಿ ಕಾಲಕಾಲಕ್ಕೆ ಸಿಮೆಂಟ್, ಗಾರೆಯಿಂದ ಮುಚ್ಚುವ ಕೆಲಸ ನಡೆಸಲಾಗುತ್ತಿದ್ದರೂ ಸಕಾಲಿಕ ನಿರ್ವಹಣೆಯಿಲ್ಲದೇ ಅದೇ ಬಿರುಕುಗಳು ಮತ್ತಷ್ಟು ದೊಡ್ಡದಾಗಿ ಸೀಳು ಸೀಳಾಗಿ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಸುಣ್ಣದ ಗಾರೆ ಕಿತ್ತು ಎದ್ದು ಬಂದಿರುವ ಕಡೆ ಚೌಕಾಕಾರದಲ್ಲಿ ಟೈಲ್ಸ್‌ಗಳಿಂದ ಮುಚ್ಚಲಾಗಿದೆ. ಆದರೂ ಅವೆಲ್ಲವೂ ಸುಭದ್ರತೆಯಿಂದ ಹೊರತಾಗಿದೆ.

ಅಚಾನಕ್ಕಾಗಿ ತಲೆದೋರಿದ ಈ ಸಮಸ್ಯೆಯ ನಿವಾರಣೆಗೆ ಮಹಾನಗರಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ತಾತ್ಕಾಲಿಕ ಅಥವಾ ತತಕ್ಷಣದ ಕ್ರಮವಾಗಿ ಇಡೀ ಚಾವಣಿಗೆ ಕಪ್ಪು ಪ್ಲಾಸ್ಟಿಕ್ ಟಾರ್ಪಲ್ ಹೊದಿಕೆಯನ್ನು ಹಾಕಿದ್ದಾರೆ. ಆದರೆ, ಬೀಸುವ ಗಾಳಿಯ ರಭಸಕ್ಕೆ ಟಾರ್ಪಲ್ ಹೊದಿಕೆ ಕೆಲವೊಂದು ಕಡೆ ಚೆಲ್ಲಾಪಿಲ್ಲಿಯಾಗಿ ಮಡಿಚಿಕೊಂಡಿವೆ. ಹಾಗೆಯೇ ಸೂರಿನಿಂದ ನೀರು ಜಿನುಗುವಿಕೆಯನ್ನು ನೋಡಿ ಸಿಬ್ಬಂದಿಯ ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ತನ್ನದೇ ಸ್ವಂತ ಸ್ವಂತ ಕಟ್ಟಡವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಪರದಾಡುವ ಸ್ಥಿತಿಗೆ ತಲುಪಿರುವ ನಗರಪಾಲಿಕೆ ಆಡಳಿತ ವೈಖರಿಗೆ ತೆರಿಗೆ ಕಟ್ಟುವ ನಾಗರಿಕರಿಗೆ ಅಚ್ಚರಿ ಉಂಟುಮಾಡಿದೆ. ವಿವಿಧ ತೆರಿಗೆಗಳ ರೂಪದಲ್ಲಿ ಕೋಟ್ಯಂತರ ರೂ. ಗಳನ್ನು ಸಂಗ್ರಹಿಸುವ ಮಹಾನಗರಪಾಲಿಕೆ ಆಡಳಿತಕ್ಕೆ ಸ್ವಂತ ಕಟ್ಟಡದ ದುರಸ್ತಿ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದು ಅರ್ಥವಾಗದ ಸಂಗತಿಯೇ ಸರಿ.

ನಗರದ ಹೃದಯ ಭಾಗದಲ್ಲಿ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿ ನೋಡುಗರ ಕಣ್ಮನ ಸೆಳೆಯುತ್ತಿದ್ದ ಲ್ಯಾನ್ಸ್ ಡನ್ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೇ ಕುಸಿದು ಬಿದ್ದ ರೀತಿಯಲ್ಲೇ ಮಹಾನಗರಪಾಲಿಕೆ ಕಟ್ಟಡವೂ ಅದೇ ಸ್ಥಿತಿ ತಲುಪುವ ಮುನ್ನ ಪಾಲಿಕೆ ಆಡಳಿತ ಎಚ್ಚೆತ್ತುಕೊಂಡು ಕಟ್ಟಡದ ಸುಭದ್ರತೆಗೆ ಕ್ರಮ ವಹಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ತಾರಸಿ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆ ಕ್ರಮ ಸರಿ ಇಲ್ಲ

ತಾರಸಿ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿರುವ ಕ್ರಮ ಸರಿಯಲ್ಲ. ಇದು ಚುರ್ಕಿ ಗಾರೆಯಿಂದ ಮಾಡಿರುವ ತಾರಸಿಯಾಗಿದ್ದು, ಇದಕ್ಕೆ ಅಷ್ಟೊಂದು ಭಾರ ಹೊರುವ ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಈ ಸೋಲಾರ್ ಪ್ಯಾನೆಲ್‌ಗಳನ್ನು ಮೊದಲು ತೆಗೆಸಿ ಹಾಗೂ ತಾರಸಿ ಮೇಲಿರುವ ನೀರಿನ ಔಟ್‌ ಲೆಟ್‌ಗಳು ಕಟ್ಟಿಕೊಂಡಿದ್ದು, ಅದನ್ನು ಸ್ವಚ್ಛಗೊಳಿಸಿ ಎಂದು ಕಳೆದ ವರ್ಷ ನಮ್ಮ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದೆವು ಎಂದು ಪಾರಂಪರಿಕ ತಜ್ಞ ಪ್ರೊ.ಎನ್‌.ಎಸ್. ರಂಗರಾಜು ಹೇಳಿದರು. ತಾರಸಿಗೆ ಹಾಕಿರುವ ಹಳೆಯ ಚುರ್ಕಿ ಗಾರೆಯನ್ನು ತೆಗೆದು ಮತ್ತೆ ಹೊಸದಾಗಿ ಕಪಿಚೂರಿನೊಂದಿಗೆ ಚುರ್ಕಿ ಗಾರೆಯನ್ನು ಹಾಕುವುದೇ ಸರಿಯಾದ ಕ್ರಮ. ಹಾಗಾಗಿ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ನಮ್ಮ ತಂಡ ಸಲಹೆ ನೀಡಿದ್ದರ ಮೇರೆಗೆ, ಅದಕ್ಕೆ ಬೇಕಾದ ಡಿಪಿಆರ್ ಅನ್ನು ಕೂಡಲೇ ತಯಾರಿಸಬೇಕೆಂದು ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಪಾಲಿಕೆಯ ಶಿಥಿಲವಾಗಿರುವ ತಾರಸಿಗೆ ಶೀಘ್ರದಲ್ಲೇ ಕಾಯಕಲ್ಪ ದೊರಕುವ ಭರವಸೆ ಕಾಣುತ್ತಿದೆ ಎಂದು ಹೇಳಿದರು.