Mysore
36
scattered clouds

Social Media

ಸೋಮವಾರ, 04 ಮೇ 2026
Light
Dark

ಸೊಳ್ಳೆಗಳ ಕಾಟ; ಸಾಂಕ್ರಾಮಿಕ ರೋಗದ ಭೀತಿ

ಪ್ರಶಾಂತ್ ಎಸ್.

ಮನೆಗಳ ಮುಂದೆ ನಿಲ್ಲುವ ಚರಂಡಿ ನೀರು! ವಾರ್ಡ್ ಸಂಖ್ಯೆ ೬೫ರ ನಿವಾಸಿಗಳಿಗೆ ತಪ್ಪದ ಸಂಕಷ್ಟ 

ಮೈಸೂರು: ಸಣ್ಣ ಮಳೆ ಬಂದರೂ ಸಾಕು ಶ್ರೀರಾಂಪುರ ಮೂರನೇ ಹಂತದಲ್ಲಿರುವ ಶಿವಪುರ ಸ್ಮಶಾನದ ಸಮೀಪವಿರುವ ನಗರಪಾಲಿಕೆ ವಾರ್ಡ್ ಸಂಖ್ಯೆ ೬೫ರ ನಿವಾಸಿಗಳು ಆತಂಕಕ್ಕೆ ಒಳಗಾಗುತ್ತಾರೆ. ಮ್ಯಾನ್ ಹೋಲ್‌ಗಳಿಂದ ಚರಂಡಿ ನೀರು ಉಕ್ಕಿ ಮನೆಗಳ ಮುಂದೆಯೇ ನಿಲ್ಲುತ್ತದೆ. ಇದರಿಂದ ಸೊಳ್ಳೆಗಳ ಕಾಟ, ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಏನು ಸಮಸ್ಯೆ?: ಯುಜಿಡಿಯ ಕೊಳಚೆ ನೀರು ಒಳ ಚರಂಡಿ ಸೇರುವ ಬದಲು ತೆರೆದ ಚರಂಡಿಗೆ ಸೇರುತ್ತಿದೆ. ಅಲ್ಲದೆ ನಡುರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ಚರಂಡಿ ಕಟ್ಟಿಕೊಳ್ಳುತ್ತಿದೆ. ಚರಂಡಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳ ಮುಂದೆ ನಿಲ್ಲುತ್ತದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಸ-ಕಡ್ಡಿ, ಪ್ಲಾಸ್ಟಿಕ್‌ಗಳಿಂದ ಕಟ್ಟಿಕೊಂಡಿರುವ ತೆರೆದ ಚರಂಡಿಗಳಿಂದ ಹೂಳು ತೆಗೆಸಲು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹ: ಶ್ರೀರಾಂಪುರ ೩ನೇ ಹಂತದ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಅವೈಜ್ಞಾನಿಕವಾಗಿದ್ದು, ಹೋಟೆಲ್‌ಗಳ ತ್ಯಾಜ್ಯ ಹಾಗೂ ಮನೆಗಳ ತ್ಯಾಜ್ಯಗಳೆಲ್ಲವೂ ಚರಂಡಿ ಸೇರುತ್ತಿವೆ. ಇದರಿಂದಾಗಿ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳೇ ಹೆಚ್ಚಿರುತ್ತವೆ.

ವಾಟ್ಸಾಪ್ ಮೊರೆ ಹೋದ ನಿವಾಸಿಗಳು: ಸಮಸ್ಯೆಯ ಬಗ್ಗೆ ನಿವಾಸಿಗಳು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಮತ್ತೊಂದೆಡೆ ಅವರ ವಾಟ್ಸಾಪ್‌ಗೆ ಮಾಹಿತಿ ನೀಡಿದ್ದರೂ ಆಯುಕ್ತರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಯುಜಿಡಿ ಸಮಸ್ಯೆ ಪರಿಹಾರಕ್ಕೆ ಮೀನ-ಮೇಷ ಎಣಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಸಮಸ್ಯೆ ಪರಿಹರಿಸಲು ಅಧಿಕಾರಿಗಳ ನಿರ್ಲಕ್ಷ್ಯ: ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಅನೈರ್ಮಲ್ಯ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ನಗರಪಾಲಿಕೆ ಅಽಕಾರಿಗಳು ಸಾರ್ವ ಜನಿಕರ ಅಹವಾಲು ಕಡೆಗಣಿಸಿ, ಸ್ವಚ್ಛ ಭಾರತ್ ಅಭಿಯಾನ ಪ್ರಚಾರದಲ್ಲಿ ಮುಳುಗಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

” ಯುಜಿಡಿ ಅವ್ಯವಸ್ಥೆಯಿಂದ ಇಡೀ ಬಡಾವಣೆ ಕೊಳಗೇರಿಯಂತಾಗಿದೆ. ಮ್ಯಾನ್‌ಹೋಲ್‌ಗಳು ಉಕ್ಕಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಬಡಾವಣೆಯಲ್ಲಿ ದುರ್ನಾತ ಬೀರುತ್ತಿದೆ. ರಸ್ತೆಗಳಲ್ಲಿ ಓಡಾಡಲು ತೀವ್ರ ಸಮಸ್ಯೆಯಾಗಿದೆ.”

-ಶೋಭಾ, ಸ್ಥಳೀಯ ನಿವಾಸಿ

” ಯುಜಿಡಿ ಸಮಸ್ಯೆ ಯಾವ ಭಾಗದಲ್ಲಿ ಹೆಚ್ಚಾಗಿದೆಯೋ ಅಲ್ಲಿಗೆ ಸಂಬಂಧಪಟ್ಟ ಇಂಜಿನಿಯರ್‌ಗಳು ಬಂದು ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು. ಆದರೆ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯಿಂದ ಬೇಗ ಪರಿಹಾರ ಕಂಡುಕೊಂಡರೆ ಒಳ್ಳೆಯದು.”

-ಬಾಲಗಣಪತಿ ಭಟ್, ಸ್ಥಳೀಯ ನಿವಾಸಿ

” ಯುಜಿಡಿ ಸಮಸ್ಯೆ ಕುರಿತು ನಗರಪಾಲಿಕೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿನ ಸಮಸ್ಯೆ ಯಾವ ಕಡೆಯಿಂದ ಆಗಿದೆ? ಅದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.”

 -ಶೇಖ್ ತನ್ವೀರ್ ಆಸಿ-, ಆಯುಕ್ತರು, ನಗರಪಾಲಿಕೆ 

 

 

 

Tags:
error: Content is protected !!