Mysore
23
overcast clouds

Social Media

ಶನಿವಾರ, 04 ಜುಲೈ 2026
Light
Dark

ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಅನ್ನದಾತರು  

ಎಂ.ನಾರಾಯಣ

ತಿ.ನರಸೀಪುರ ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ; ಒಣಗುತ್ತಿರುವ ಬೆಳೆ

ತಿ.ನರಸೀಪುರ: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಲಾಶಯದ ನೀರನ್ನು ನಂಬಿಕೊಂಡು ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಸೂಚನೆಯನ್ನೂ ನೀಡಿದ್ದಾರೆ. ಇಂತಹ ಸ್ಥಿತಿಯಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ತಿ. ನರಸೀ ಪುರ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ.

ಈ ಭಾಗದ ಜನತೆ ಕೆಆರ್‌ಎಸ್, ಕಬಿನಿ ಜಲಾಶಯಗಳ ನೀರನ್ನೇ ನಂಬಿದ್ದು, ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ಮಳೆಗಾಗಿ ರೈತರು ಆಕಾಶದತ್ತ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಕೃಷಿ, ಕುಡಿಯುವ ನೀರು, ಗ್ರಾಮೀಣ ಉದ್ಯೋಗ, ಜಾನುವಾರುಗಳ ಮೇವು ಮತ್ತು ಗ್ರಾಮೀಣ ಆರ್ಥಿಕತೆಗೆ ತೀವ್ರ ಹೊಡೆತ ಬೀಳಲಿದೆ. ತಿ.ನರಸೀಪುರ ತಾಲ್ಲೂಕಿನ ವರುಣ ಕ್ಷೇತ್ರದ ಶಾಸಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಿ.ನರಸೀಪುರ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಸುನಿಲ್ ಬೋಸ್ ಅವರು ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಮೂಲಕ ಅವರ ಆರ್ಥಿಕ ಸಬಲತೆಗೆ ಯೋಜನೆಗಳನ್ನು ರೂಪಿಸಬೇಕು ಎಂಬುದು ಈ ಭಾಗದ ರೈತರ ಆಶಯವಾಗಿದೆ.

ಮುಂಗಾರು ಮಳೆ ಅಭಾವದಿಂದಾಗಿ ಈ ಭಾಗದಲ್ಲಿ ರೈತರು ಬಿತ್ತನೆ ಕಾರ್ಯವನ್ನು ಮುಂದೂಡಿದ್ದು, ಅಣೆಕಟ್ಟೆ ಗಳಲ್ಲೂ ನೀರಿಲ್ಲದೆ ರೈತರು ಮುಂದೆ ಏನು ಮಾಡ ಬೇಕೆಂಬುದೇ ತಿಳಿಯದೆ ಕಂಗಾಲಾಗಿದ್ದಾರೆ. ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ ಎಂಬ ವರದಿಗಳಿದ್ದು, ಇದರ ಆಧಾರದ ಮೇಲೆ ಸರ್ಕಾರ ಈ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವ ಮೂಲಕ ಈ ಭಾಗದ ರೈತರ ನೆರವಿಗೆ ಮುಂದೆ ಬರಬೇಕು ಎಂದು ರೈತರು, ಸ್ಥಳೀಯರು ಒತ್ತಾಯಿಸಿದ್ದಾರೆ.

” ಮುಂಗಾರಿನಲ್ಲಿ ಭತ್ತ ಬೆಳೆಯುವ ರೈತರು ಈ ಬಾರಿ ಕಡ್ಡಾಯವಾಗಿ ಭತ್ತ ಬೆಳೆಯಬಾರದು. ಮಳೆ ಆಶ್ರಿತ ಬೆಳೆಗಳಾದ ಅಲಸಂದೆ, ಹಸಿರು, ಉದ್ದು, ರಾಗಿ, ಜೋಳ ಮುಂತಾದ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯಬೇಕು. ಒಂದೆರಡು ಬಾರಿ ಮಳೆ ಬಿದ್ದರೆ ಈ ಬೆಳೆಗಳಿಗೆ ಆಸರೆಯಾಗಲಿದೆ.”

-ಎಂ.ರೂಪ, ಸಹಾಯಕ ಕೃಷಿ ನಿರ್ದೇಶಕಿ, ತಿ.ನರಸೀಪುರ

” ವಾಡಿಕೆಗಿಂತ ಕಡಿಮೆ ಮಳೆ ಈ ಬಾರಿ ತಾಲ್ಲೂಕಿನಲ್ಲಿ ಜುಲೈ ತಿಂಗಳ ಒಳಗೆ ೭೨.೦೭ ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಕೇವಲ ೩೫ ಮಿ.ಮೀ. ಮಳೆಯಾಗಿದೆ. ಶೇ.೫೨ರಷ್ಟು ಮಳೆ ಕೊರತೆಯಾಗಿದೆ. ೨೦೨೫ರಲ್ಲಿ ತಾಲ್ಲೂಕಿನಲ್ಲಿ ೭೨.೦೭ ಮಿ.ಮೀ. ವಾಡಿಕೆ ಮಳೆಗೆ ೧೧೭ ಮಿ.ಮೀ. ಮಳೆಯಾಗಿ ವಾಡಿಕೆ ಗಿಂತ ಹೆಚ್ಚು ಮಳೆಯಾಗಿತ್ತು.”

” ಎಸ್.ಎಂ.ಕೃಷ್ಣ, ಬಿ. ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿಯೂ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ರೈತರಿಗೆ ಸ್ಪಂದಿಸಬೇಕು.”

-ಕುಳ್ಳೇಗೌಡ, ರೈತ, ಕುಂತನಹಳ್ಳಿ

” ಮಳೆಯ ಕೊರತೆಯಿಂದ ಬೋರ್‌ವೆಲ್ ಹಾಗೂ ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳಿಗೂ ಸಮರ್ಪಕ ನೀರು ಇಲ್ಲದೆ, ಬೆಳೆಗಳು ಬಾಡುತ್ತಿವೆ.”

-ರಾಜೇಶ್, ರೈತ, ಹ್ಯಾಕನೂರು

 

 

Tags:
error: Content is protected !!