‘ಆಂದೋಲನ’ ಸಂದರ್ಶನದಲ್ಲಿ ನಗರಪಾಲಿಕೆ ಎಸ್ ಇ ಕೆ. ಜಿ. ಸಿಂಧು ಹೇಳಿಕೆ
ಸಾಲೋಮನ್
ಮೈಸೂರು: ನಗರದ ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ವಹಣೆಗೆ ಕ್ರಮವಹಿಸ ಲಾಗುತ್ತದೆ. ಜಾಹೀರಾತುದಾರರ ಕೋರಿಕೆ ಮೇರೆಗೆ ನಿಗದಿತ ಸ್ಥಳಗಳಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಅಧೀಕ್ಷಕ ಇಂಜಿನಿಯರ್ (ಎಸ್‌ಇ) ಕೆ. ಜಿ. ಸಿಂಧು ಹೇಳಿದ್ದಾರೆ.
‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದ ರ್ಶನದಲ್ಲಿ ಅವರು ಪ್ರಯಾಣಿಕರ ತಂಗುದಾಣ ಗಳ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ.
ಆಂದೋಲನ: ನಗರದಲ್ಲಿ ಬಸ್ ಪ್ರಯಾ ಣಿಕರ ತಂಗುದಾಣಗಳಲ್ಲಿ ಅವ್ಯವಸ್ಥೆ ತುಂಬಿ ತುಳುಕುತ್ತಿರುವ ಬಗ್ಗೆ ಏನು ಹೇಳುತ್ತೀರಿ?
ಸಿಂಧು: ಮಹಾನಗರ ಪಾಲಿಕೆ ಪ್ರಯಾಣಿ ಕರ ತಂಗುದಾಣಗಳನ್ನು ನಿರ್ವಹಣೆ ಮಾಡು ತ್ತದೆ. ಆದರೆ, ಬಹುತೇಕ ತಂಗುದಾಣಗಳನ್ನು ಜಾಹೀರಾತುದಾರರು ಅಥವಾ ಅವುಗಳನ್ನು ನಿರ್ಮಾಣ ಮಾಡಿದವರೇ ನಿರ್ವಹಣೆ ಮಾಡುತ್ತಾರೆ.
ಆಂದೋಲನ: ಹೊಸದಾಗಿ ನಿರ್ಮಿಸಿದ ತಂಗುದಾಣಗಳನ್ನು ಕೆಲ ತಿಂಗಳು ನಿರ್ವಹಣೆ ಮಾಡಲಾಗುತ್ತದೆ. ನಂತರ ಅವುಗಳನ್ನು ನಿರ್ಲಕ್ಷಿಸ ಲಾಗುತ್ತದೆ ಎಂದು ಸಾರ್ವಜನಿಕರ ಆರೋಪ ಇದೆಯಲ್ಲ?
ಸಿಂಧು: ನಗರಪಾಲಿಕೆಯ ಕಂದಾಯ ವಿಭಾಗದವರು ಜಾಹೀರಾತುದಾರರ ಕೋರಿಕೆ ಮೇರೆಗೆ ಎಲ್ಲಿ ನಿರ್ಮಿಸಬೇಕೆಂದು ತಿಳಿಸುತ್ತಾರೆ. ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ವತಿಯಿಂದ ತಂಗುದಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಸಾಮಾನ್ಯವಾಗಿ ಜಾಹೀರಾತುದಾರರು ಅದರ ನಿರ್ವಹಣೆ ಮಾಡುತ್ತಾರೆ.
ಆಂದೋಲನ: ಸ್ವಯಂ ಸೇವಾ ಸಂಸ್ಥೆಗಳು ನಿರ್ಮಿಸಿರುವ ತಂಗುದಾಣಗಳ ನಿರ್ವಹಣೆ ಯಾರ ಹೊಣೆ?
ಸಿಂಧು: ಅದನ್ನು ನಾವೂ ಗುರುತಿಸಿದ್ದೇವೆ. ಖಾಸಗಿಯವರು ಹಾಗೂ ಸಂಘ ಸಂಸ್ಥೆಯವರು ತಂಗು ದಾಣಗಳನ್ನು ಕಟ್ಟುವ ಮೊದಲು ಅನುಮತಿ ಪಡೆಯುತ್ತಾರೆ. ಆ ಪೈಕಿ ಬಹಳಷ್ಟು ಮಂದಿ ಪೂರ್ಣಗೊಳಿಸಿದ ನಂತರ ನಮ್ಮ ಗಮನಕ್ಕೆ ತರುವುದಿಲ್ಲ. ಆದರೂ ಅಂತಹ ತಂಗುದಾಣಗಳನ್ನು ಪಾಲಿಕೆ ವತಿಯಿಂದಲೇ ನಿರ್ವಹಿಸಲಾಗುವುದು. ಕೆಲವೊಮ್ಮೆ ತಂಗು ದಾಣ ನಿರ್ಮಿಸಿದ ಖಾಸಗಿ ಸಂಸ್ಥೆ ಗಳೊಂದಿಗೆ ಜೊತೆ ಚರ್ಚಿಸಿ ಸ್ವಚ್ಛತೆ ಕಾಪಾಡಲು ಹಾಗೂ ನಿರ್ವಹಣೆ ಮಾಡಲು ಸೂಚಿಸಲಾಗುವುದು.
ಆಂದೋಲನ: ಸಿಐಐಎಲ್ ಸೇರಿದಂತೆ ಕೆಲ ಸ್ಥಳಗಳಲ್ಲಿ ಸಾಲು ಸಾಲಾಗಿ ತಂಗುದಾಣಗಳನ್ನು ನಿರ್ಮಿಸಿರುವುದಕ್ಕೆ ಕಾರಣವೇನು?
ಸಿಂಧು: ಆ ರೀತಿ ಸಾಲಾಗಿ ನಿರ್ಮಾಣ ಮಾಡಲು ಜಾಹೀರಾತುದಾರರು ಕಾರಣ. ನಮಗೆ ಇಂಥ ಸ್ಥಳದಲ್ಲೇ ಬಸ್ ನಿಲ್ದಾಣ ಬೇಕು ಎಂದು ಕೇಳಿ ಕೊಂಡಿರುತ್ತಾರೆ. ಇದರಿಂದ ಪಾಲಿಕೆಗೂ ಆದಾಯ ಬರುವು ದರಿಂದ ಅವಕಾಶ ನೀಡಲಾಗು ತ್ತದೆ. ನಿರ್ವಹಣೆ ಮಾಡದಿದ್ದರೆ ಜಾಹೀರಾತುದಾರರನ್ನು ಬದಲಾಯಿಸುತ್ತೇವೆ.
ಆಂದೋಲನ: ಒಂದು ತಂಗುದಾಣ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತದೆ? ಇದಕ್ಕೆ ಎನ್‌ಜಿಒಗಳು ಕೈಜೋಡಿಸಬಹುದಾ?
ಸಿಂಧು: ಅಂದಾಜು ೫ ಲಕ್ಷ ರೂ. ವೆಚ್ಚದಲ್ಲಿ ಸಾಧಾರಣ ತಂಗುದಾಣ ನಿರ್ಮಾಣ ಮಾಡ ಬಹುದು. ೧೦ರಿಂದ ೧೫ ಲಕ್ಷ ರೂ. ಗಳಾದರೆ ಉತ್ತಮ ಸುಸಜ್ಜಿತ ತಂಗುದಾಣ ಕಟ್ಟಬಹುದು. ಬಸ್ ನಿಲ್ದಾಣ ಒಂದು ಸಾಮಾಜಿಕ ಕಾಳಜಿ, ಯಾರು ಬೇಕಾದರೂ ಕೈ ಜೋಡಿಸಬಹುದು. ನಿರ್ಮಾಣ ಮಾಡಲು ಬಯಸುವವರು ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯ.
ಆಂದೋಲನ: ತಂಗುದಾಣವನ್ನು ಸರಿಯಾಗಿ ನಿರ್ವಹಿಸದಿದ್ದರೆ ಇದಕ್ಕೆ ಯಾರು ಹೊಣೆ? ಅಂಥವರ ವಿರುದ್ದ ಕ್ರಮ ಏನು?
ಸಿಂಧು: ನಿರ್ವಹಣೆ ಜವಾಬ್ದಾರಿ ಹೊತ್ತಿರು ವವರು ನಿರ್ವಹಿಸದಿದ್ದರೆ ಪಾಲಿಕೆ ಅವರಿಗೆ ನೋಟಿಸ್ ನೀಡಿ ಖಂಡಿತ ಕ್ರಮ ಜರುಗಿಸುತ್ತದೆ. ಏನು ಕ್ರಮ ಎನ್ನುವುದನ್ನು ಆಯುಕ್ತರು ತೀರ್ಮಾನಿಸುತ್ತಾರೆ.
ಆಂದೋಲನ: ಮೈಸೂರಿನಲ್ಲಿ ಇನ್ನೂ ಎಷ್ಟು ತಂಗುದಾಣಗಳ ಅಗತ್ಯವಿದೆ?
ಸಿಂಧು: ಎಷ್ಟು ತಂಗುದಾಣಗಳು ಎನ್ನುವ ಬಗ್ಗೆ ಸರ್ವೆ ಆಗಬೇಕಿದೆ. ಅದರ ನಂತರ ನಾವು ಪಟ್ಟಿ ಮಾಡಬಹುದು. ಸರ್ವೆ ಮಾಡುವ ಚಿಂತನೆ ಇದೆ. ಸದ್ಯಕ್ಕೆ ೧೯ರಿಂದ ೨೦ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಆರಂಭಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಪಾಲಿಕೆಯ ರೆವಿನ್ಯೂ ಇಲಾಖೆ ಜಾಹೀರಾತುದಾರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿದೆ.