Mysore
24
haze

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

300 ಸಿಎ ನಿವೇಶನಗಳ ಹಂಚಿಕೆಗೆ ಎಂಡಿಎ ನಿರ್ಧಾರ

ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ 

ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳಿಗೆ ೩೦೦ ನಾಗರಿಕ ನಿವೇಶನಗಳನ್ನು (ಸಿಎ) ಹಂಚಿಕೆ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಎಂಡಿಎ ಸಭಾಂಗಣದಲ್ಲಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಬಳಿಕ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಯಿತು.

ನಾಗರಿಕ ನಿವೇಶನಗಳ ಹಂಚಿಕೆಗೆ ಹಲವಾರು ಅರ್ಜಿಗಳು ಬಂದಿದ್ದರೂ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಸಿಎ ನಿವೇಶನ ಮಂಜೂರು ಮಾಡುವಂತೆ ಅನೇಕ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಸಾರ್ವಜನಿಕ ಸಮಾರಂಭಗಳಲ್ಲಿ ಸಿಎಂ, ಸಚಿವರು ಪಾಲ್ಗೊಳ್ಳುವಾಗಲೂ ಇದೇ ಬೇಡಿಕೆ ಬರುತ್ತಿತ್ತು. ಇದನ್ನು ಮನಗಂಡ ಎಂಡಿಎ ವಿವಿಧ ಬಡಾವಣೆಗಳಲ್ಲಿರುವ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿ ಸಂಘ- ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲು ಬಯಸಿದೆ. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಜತೆಗೆ, ಸಿಎ ನಿವೇಶನ ಮಂಜೂರು ಮಾಡಲು ವಿಧಿಸಲಾಗುವ ಷರತ್ತುಗಳನ್ನು ಪ್ರಕಟಿಸಲಾಗುತ್ತದೆ. ಈಗಾಗಲೇ ಹಲವು ವರ್ಷಗಳಿಂದ ಸಿಎ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಸಂಘ-ಸಂಸ್ಥೆಗಳಿಗೆ ಹಿರಿತನದ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ.

ಕ್ಷಿಪ್ರ ಕಾರ್ಯಪಡೆ ರಚನೆ: ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಕ್ಷಿಪ್ರ ಕಾರ್ಯಪಡೆ ರಚನೆ ಮಾಡಲು ಒಪ್ಪಿಗೆ ನೀಡಲಾಯಿತು. ಎಂಡಿಎ ವ್ಯಾಪ್ತಿಯಲ್ಲಿ ಅನಧಿಕೃತ ಚಟುವಟಿಕೆಗಳು ಹಾಗೂ ಅತಿಕ್ರಮ ಪ್ರವೇಶಗಳನ್ನು ತಡೆಗಟ್ಟಿ ಪ್ರಾಧಿಕಾರದ ಆಸ್ತಿ ಸಂರಕ್ಷಣೆ ಮಾಡುವುದು, ಅನಧಿಕೃತ ಚಟುವಟಿಕೆಗಳು ಹಾಗೂ ಅತಿಕ್ರಮ ಪ್ರವೇಶ ತಡೆಗಳಂತಹ ತುರ್ತು ಪರಿಸ್ಥಿತಿಯಲ್ಲಿ ಪ್ರಾಧಿಕಾರದ ಅಧಿಕಾರಿಗಳು, ನೌಕರರಿಗೆ ಸಹಾಯವಾಗುವಂತೆ ಹೊರಗುತ್ತಿಗೆ ಆಧಾರದ ಮೇಲೆ ಕ್ಷಿಪ್ರ ಕಾರ್ಯಪಡೆ ಕೆಲಸ ಮಾಡಲಿದೆ.

ನಿವೃತ್ತ ಡಿವೈಎಸ್‌ಪಿ ಹಂತದ ನಾಲ್ವರು ಸೇರಿದಂತೆ ನಿವೃತ್ತ ಪೊಲೀಸರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ತಂಡಕ್ಕೆ ಬೇಕಾದ ವೇತನ ಮತ್ತಿತರ ಸೌಲಭ್ಯಗಳನ್ನು ಎಂಡಿಎದಿಂದ ಪಾವತಿಸುವುದಕ್ಕೂ ಒಪ್ಪಿಗೆ ನೀಡಲಾಯಿತು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕಾರ್ಯದರ್ಶಿ ಜಾನ್ಸನ್, ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಸೆಸ್ಕ್ ಮುಖ್ಯ ಅಭಿಯಂತರ ಮೃತ್ಯುಂಜಯಪ್ಪ, ಎಂಡಿಎ ಅಧಿಕ್ಷಕ ಅಭಿಯಂತರರು, ನಗರ ಯೋಜಕ ಸದಸ್ಯರು, ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕ್ಷಕ ಅಭಿಯಂತರರು ಹಾಜರಿದ್ದರು.

ಪ್ಯಾನಲ್ ವಕೀಲರನ್ನು ಬದಲಿಸಲು ನಿರ್ಧಾರ: 

ಮೈಸೂರು: ಎಂಡಿಎ ಆಸ್ತಿ ವಿಚಾರ, ವಿವಾದ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಎಂಡಿಎ ಪರವಾಗಿ ವಾದ ಮಾಡುತ್ತಿರುವ ಪ್ಯಾನಲ್ ವಕೀಲರನ್ನು ಬದಲಿಸಿ ಹೊಸದಾಗಿ ವಕೀಲರನ್ನು ನಿಯೋಜಿಸಲು ಸಭೆಯಲ್ಲಿ ಸಮ್ಮತಿಸಲಾಯಿತು. ಹೈ ಕೋರ್ಟ್, ಸುಪ್ರೀಂ ಕೋಟ್ನಲ್ಲಿರುವಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವುದು, ಎಂಡಿಎ ಪರವಾದ ರೀತಿಯಲ್ಲಿ ತೀರ್ಪು ಬರುವಂತೆ ಸಮರ್ಥವಾಗಿ ವಾದ ಮಂಡಿಸುವಂತಹ ನುರಿತ ಪ್ಯಾನಲ್ ವಕೀಲರನ್ನು ನೇಮಕ ಮಾಡುವುದಕ್ಕೆ ವಿಸ್ತೃತ ಚರ್ಚೆ ನಡೆದ ಬಳಿಕ ಸಭೆ ಒಪ್ಪಿಗೆ ನೀಡಿತು. ಸಭೆಯಲ್ಲಿ ಆಯುಕ್ತ ಕೆ.ಆರ್. ರಕ್ಷಿತ್ ಮಂಡಿಸಿದ ವಿಷಯಗಳಿಗೆ ಒಪ್ಪಿಗೆ ನೀಡಲಾಯಿತು. ಹೊಸ ಖಾಸಗಿ ಬಡಾವಣೆಗಳ ರಚನೆ, ನಕ್ಷೆ ಅನುಮೋದನೆ ಸೇರಿದಂತೆ ಬೇರೆ ಯಾವುದೇ ವಿಷಯಗಳನ್ನು ಸಭೆಯಲ್ಲಿ ಮಂಡಿಸಲಿಲ್ಲ.

Tags:
error: Content is protected !!