Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಮುಂಗಾರು ಮಳೆ: ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸಿದ್ಧತೆ

ಹೇಮಂತ್‌ಕುಮಾರ್

ಕೆರೆಯಂತಾಗುವ ಕೆ.ಆರ್.ಪೇಟೆ ಬಸ್‌ ನಿಲ್ದಾಣ: ಅಗತ್ಯ ಕ್ರಮಕ್ಕೆಸಾರ್ವಜನಿಕರ ಒತ್ತಾಯ 

ಮಂಡ್ಯ: ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದು ರೈತಸಮೂಹ ಹಾಗೂ ಸಾರ್ವಜನಿಕರಲ್ಲಿ ಸಮಾಧಾನ ತರಿಸಿದೆ.

ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಪರಿಹಾರ ಮಾರ್ಗೋಪಾಯಗಳ ಕುರಿತು ಸಲಹೆ ಸೂಚನೆಗಳನ್ನು ನಿಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಳೆದ ವರ್ಷ ಮುಂಗಾರು ಮಳೆ ಸಾಕಷ್ಟು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟುಮಾಡಿತ್ತು. ಮಳೆಗೂ ಮುನ್ನ ಬೀಸಿದ ಬಿರುಗಾಳಿಗೆ ಸಿಲುಕಿ ಸಾಕಷ್ಟು ಬೆಳೆ ನಷ್ಟವಾಗಿದ್ದನ್ನು ಸ್ಮರಿಸಬಹುದು. ಇದಲ್ಲದೆ, ಬಿರುಗಾಳಿ ಸಹಿತ ಮಳೆಯ ಆರ್ಭಟ ತಾಳಲಾರದ ಸಾಕಷ್ಟು ಮರಗಳು, ವಿದ್ಯುತ್ ಕಂಬಗಳು ಹಾಗೂ ಜಾಹೀರಾತು ಬೋರ್ಡ್‌ಗಳು ಉರುಳಿ ಬಿದ್ದಿದ್ದವು. ಜಿಲ್ಲೆಯಾದ್ಯಂತ ಬಿರುಗಾಳಿ ಮಳೆಯಿಂದ ಕಲ್ನಾರ್ ಶೀಟಿನ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿದ್ದವು. ಅನೇಕ ಮನೆಗಳ ಗೋಡೆ ಕುಸಿದು ಬಿದ್ದು ಜನತೆ ತೀವ್ರ ಸಮಸ್ಯೆಗೆ ಸಿಲುಕಿದ್ದರು.

ವಿಪತ್ತು ನಿರ್ವಹಣಾ ಸಮಿತಿ ಕೂಡ ಹೆಚ್ಚು ಮಳೆಯಾಗಿ ನೆರೆ, ಪ್ರವಾಹ ಉಂಟಾದ ಸಂದರ್ಭಗಳಲ್ಲಿ ಶ್ರಮಿಸಿದೆ. ಅದರಂತೆ ಈ ಮುಂಗಾರು ಹಂಗಾಮಿಗೂ ಜಿಲ್ಲಾಡಳಿತದ ಆದೇಶದಂತೆ ವಿವಿಧ ಇಲಾಖೆಗಳ ತಂಡದೊಂದಿಗೆ ಯಾವುದೇ ಸಮಸ್ಯೆ ಉಂಟಾದರೂ ಸುರಕ್ಷತೆಗೆ ಆದ್ಯತೆ ನೀಡಿ ಕಾರ್ಯೋನ್ಮುಖವಾಗಿದೆ.

ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಮಳೆ ಬಿದ್ದ ಸಂದರ್ಭದಲ್ಲಿ ಮಂಡಿ ಉದ್ದ ನೀರು ನಿಲ್ಲುತ್ತದೆ. ಈಗಾಗಲೇ ಈ ಸಮಸ್ಯೆ ಬಗೆಹರಿಸಲು ಸಾಕಷ್ಟು ಹಣವನ್ನು ವೆಚ್ಚಮಾಡಿ ಕಾಮಗಾರಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಮಂಡಿಯುದ್ದದ ನೀರಿನಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

ಕೆ.ಆರ್.ಪೇಟೆ ಪಟ್ಟಣ ಬಸ್ ನಿಲ್ದಾಣ ಮಳೆ ಬಂದಾಗ ಕೆರೆಯಂತಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಪರಿಣಾಮ ಕನಿಷ್ಠ ಎರಡು ಮೂರು ದಿನಗಳ ಕಾಲ ಬಸ್ ನಿಲ್ದಾಣದೊಳಕ್ಕೆ ಯಾರೂ ಕಾಲಿಡಲಾಗದಂತಹ ಪರಿಸ್ಥಿತಿಯನ್ನು ಈಗಲೂ ಕಾಣಬಹುದು.

ಶ್ರೀರಂಗಪಟ್ಟಣವು ದ್ವೀಪ ಪಟ್ಟಣವಾಗಿದ್ದು, ಎಲ್ಲೇ ಮಳೆ ಬಿದ್ದರೂ ಸುತ್ತಲೂ ಕಾವೇರಿ ನದಿ ಇರುವುದರಿಂದ ಟೌನ್‌ನಲ್ಲಿ ಮಳೆ ನೀರಿನಿಂದ ಯಾವುದೇ ಸಮಸ್ಯೆ ಇಲ್ಲ. ಚರಂಡಿಗಳು ಹಾಗೂ ಒಳಚರಂಡಿಗಳು ಸುಸ್ಥಿತಿಯಲ್ಲಿವೆ ಎನ್ನುತ್ತಾರೆ ಪುರಸಭೆ ಇಒ ರಾಜಣ್ಣ. ನಾಗಮಂಗಲ ಪಟ್ಟಣದ ಕೆರೆ ಏರಿ ಕೆಳ ಭಾಗದಲ್ಲಿರುವ ಕೆ.ಎಸ್.ಆರ್.ಟಿಸಿ. ಬಸ್ ನಿಲ್ದಾಣವು ಮಳೆ ಬಂದಾಗ ಕೆರೆಯಂತಾಗುತ್ತದೆ.

ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುವಂತಾಗುತ್ತದೆ. ಇದರಿಂದಾಗಿ ಕಳೆದ ಬಾರಿ ಮಳೆಯಾದ ಸಂದರ್ಭದಲ್ಲಿ ಬೋಟ್ ಬಳಸಿ ಒಳಗಿದ್ದ ಪ್ರಯಾಣಿಕರನ್ನು ಹೊರಗೆ ಕರೆತರಲಾಗಿತ್ತು.

” ಕೆ.ಆರ್.ಪೇಟೆ ಬಸ್ ನಿಲ್ದಾಣದ ಸಮಸ್ಯೆಗೆ ಸರ್ಕಾರದ ಹಂತದಲ್ಲಿ ಪರಿಹಾರ ದೊರಕಬೇಕಿದೆ. ಪಟ್ಟಣದ ಬಸ್ ನಿಲ್ದಾಣ ರಸ್ತೆ ಮಟ್ಟಕ್ಕಿಂತ ಕೆಳಹಂತದಲ್ಲಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಒಂದೆಡೆ ನಿಲ್ಲುವುದರಿಂದ ಸಮಸ್ಯೆಯಾಗುತ್ತಿದೆ. ಪುರಸಭೆಯಿಂದ ತಾತ್ಕಾಲಿಕವಾಗಿ ಏನು ಮಾಡಬಹುದೋ ಅದನ್ನು ಮಾಡಲು ಸಾಧ್ಯ. ಆದರೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯಲಾಗಿದೆ.”

 – ನಟರಾಜು, ಮುಖ್ಯಾಧಿಕಾರಿ, ಪುರಸಭೆ, ಕೆ.ಆರ್.ಪೇಟೆ

” ಮಂಡ್ಯ ಜಿಲ್ಲೆಯಲ್ಲಿ ಈಗ ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಅಂತಹ ಸಮಸ್ಯೆಯಾಗಿಲ್ಲ. ಆದರೂ ಮಳೆಯಾಗಿ ಕೆಲವು ಕಡೆಗಳಲ್ಲಿ ನೀರು ನಿಂತಿರಬಹುದು. ಅಂತಹ ಕಡೆ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗ್ಯು ಹರಡಬಹುದು. ಮತ್ತೆ ಇಲಿ ಜ್ವರವೂ ಕಾಡಬಹುದು. ಆದ್ದರಿಂದ ಎಲ್ಲೆಲ್ಲಿ ಇಂತಹ ಸನ್ನಿವೇಶಗಳಿವೆಯೋ ಅಂತಹ ಕಡೆಗಳಲ್ಲಿ ಎಚ್ಚರಿಕೆ ವಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.”

 -ಡಾ.ಮೋಹನ್, ಡಿಎಚ್‌ಒ, ಮಂಡ್ಯ.

” ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಈಗಾಗಲೇ ಸಲಹೆ ಸೂಚನೆಗಳನ್ನು ನಿಡಲಾಗಿದೆ. ತಂಡಗಳನ್ನು ರಚಿಸಿ ಕಾರ್ಯೋನ್ಮುಖರಾಗುವಂತೆ ಸೂಚಿಸಲಾಗಿದೆ.”

 -ಡಾ.ಕುಮಾರ, ಜಿಲ್ಲಾಧಿಕಾರಿಗಳು, ಮಂಡ್ಯ

” ಮಂಡ್ಯ ನಗರದ ಎಲ್ಲ ವಾಡ್ ಗಳಲ್ಲಿಯೂ ಹೆಚ್ಚು ಮಳೆಯಾದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿ ನಿಲ್ಲುತ್ತಿದ್ದ ಸನ್ನಿವೇಶ ಈಗಿಲ್ಲ. ಈಗಾಗಲೇ ಮೋರಿಗಳ ಶೀಲ್ಟ್ ತೆಗೆಸಿ ಗಿಡ ಗಂಟಿಗಳನ್ನು ತೆಗೆಯಲಾಗಿದೆ. ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಇನ್ನೂ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.”

 -ಪಂಪಾಶ್ರೀ, ಆಯುಕ್ತರು, ಮಂಡ್ಯ ನಗರಸಭೆ

Tags:
error: Content is protected !!