9 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಕಡೆಗೂ ಪೂರ್ಣ; ಐದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡ
ಮಡಿಕೇರಿ: 9 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಕಂದಾಯ ಇಲಾಖೆಯ ವಿವಿಧ ಕಚೇರಿಗಳನ್ನು ಒಳಗೊಂಡಿರುವ ತಾಲ್ಲೂಕು ಆಡಳಿತ ಸೌಧ (ತಾಲ್ಲೂಕು ಕಚೇರಿ ಸಂಕೀರ್ಣ) ಕಟ್ಟಡ ಕಾಮಗಾರಿ ಭರದಿದ್ದ ಸಾಗಿದ್ದು, ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.
ನಗರದ ಕೋಟೆ ಬಳಿಯಿರುವ ತಾಲ್ಲೂಕು ಕಚೇರಿ ಯನ್ನು ತೆರವುಗೊಳಿಸಬೇಕೆಂದು ಪ್ರಾಚ್ಯವಸ್ತು ಇಲಾಖೆ ಯಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕಾನ್ವೆಂಟ್ ಜಂಕ್ಷನ್ ಬಳಿ ಇರುವ ಖಾಲಿ ಜಾಗವನ್ನು ಗುರುತಿಸಿ ಅಲ್ಲಿ ಆಡಳಿತ ಸೌಧ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಅಲ್ಲದೇ, ತಾಲ್ಲೂಕು ಆಡಳಿತ ಒಂದೇ ಸೂರಿನಡಿ ದೊರೆಯಲು ಸರ್ಕಾರ ಯೋಜನೆ ರೂಪಿಸಿ ಪ್ರತಿ ತಾಲ್ಲೂಕಿನಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿತ್ತು.
ಮೊದಲ ಹಂತದ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಂಡಿತ್ತಾದರೂ ಮೇಲಂತಸ್ತಿನ ಕಾಮಗಾರಿಗೆ ಎದುರಾದ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅನುದಾನದ ಭರವಸೆ ದೊರೆತ ಮೇರೆಗೆ ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿರುವ ಗೃಹನಿರ್ಮಾಣ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆಯಾದರೂ ಕಚೇರಿಗಳ ಒಳವಿನ್ಯಾಸ ಗುತ್ತಿಗೆಯ ಕರಾರಿನಲ್ಲಿ ಒಳಪಡದೇ ಇರುವುದರಿಂದ ಆ ಕೆಲಸ ಕಾರ್ಯಗಳನ್ನು ಸಂಬಂಧಿಸಿದ ಇಲಾಖೆ ಮಾಡಿಕೊಳ್ಳಬೇಕಾಗಿದೆ. ಕಿಟಕಿ, ಬಾಗಿಲು, ಮೆಟ್ಟಿಲುಗಳಿಗೆ ರೈಲಿಂಗ್ಸ್‌ಗಳನ್ನು ಗುತ್ತಿಗೆ ದಾರರು ಅಳವಡಿಸಿದ್ದಾರೆ. ಇದೇ ತಿಂಗಳಲ್ಲಿ ಉದ್ಘಾಟನೆ ಗೊಳಿಸಲು ನಿರ್ಧರಿಸಲಾಗಿದೆ.
ಕಟ್ಟಡದ ಮುಂಭಾಗದಲ್ಲಿ ಮುಖ್ಯರಸ್ತೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದಂತೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ದಾಣಕ್ಕೆ ಮೀಸಲಿಟ್ಟಿರುವ ಜಾಗ ದೂಳುಮಯವಾಗಿದ್ದು, ಇದಕ್ಕೂ ಡಾಂಬಾರ್ ಅಥವಾ ಕಾಂಕ್ರಿಟ್ ಅನ್ನು ಕಂದಾಯ ಇಲಾಖೆಯೇ ಹಾಕಬೇಕಿದೆ.
ತಾಲ್ಲೂಕು ಆಡಳಿತ ಸೌಧ ನಿರ್ಮಾಣವಾಗಿರುವ ಮುಂಭಾಗದಲ್ಲಿನ ರಸ್ತೆ ಬದಿಯಲ್ಲಿ ಹಲವಾರು ವರ್ಷಗಳಿಂದ ಕೆಲವು ಸಣ್ಣ ಸಣ್ಣ ಅಂಗಡಿ, ಹೋಟೆಲ್, ವರ್ಕ್‌ಶಾಪ್, ಹಾಲಿನ ಮಳಿಗೆಗಳು ಕಾರ್ಯನಿರ್ವಹಿಸು ತ್ತಿದ್ದವು. ಇದೀಗ ಆಡಳಿತ ಸೌಧ ನಿರ್ಮಾಣ ಕಾರ್ಯ ಪೂರ್ಣಗೊಂಡು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರವಾಗುತ್ತಿರುವುದರಿಂದ ಅಲ್ಲಿದ್ದ ಎಲ್ಲ ಅಂಗಡಿ ಮಳಿಗೆಗಳನ್ನೂ ತೆರವುಗೊಳಿಸಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಸರ್ಕಾರಿ ಜಾಗದಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡಿರುವುದರಿಂದ ಸಂಬಂಧಿಸಿದ ಮಾಲೀಕರುಗಳು ಅನಿವಾರ್ಯವಾಗಿ ತೆರವುಗೊಳಿಸಲೇ ಬೇಕಾಯಿತು. ಇದರ ವ್ಯಾಪ್ತಿಗೆ ಬಾರದ ೨ ಅಂಗಡಿಗಳು ಮಾತ್ರ ತೆರವುಗೊಂಡಿಲ್ಲ.
ಕಂದಾಯ, ಸರ್ವೆ ಹಾಗೂ ಉಪ ನೋಂದಾಣಾಧಿಕಾರಿ ಗಳ ಕಚೇರಿಗಳನ್ನೊಳಗೊಂಡು ಕಾರ್ಯನಿರ್ವಹಿಸಲಿರುವ ಸುಸಜ್ಜಿತ ಆಡಳಿತ ಸೌಧ ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗುತ್ತಿಗೆಯನ್ನು ಆಂಧ್ರ ಮೂಲದ ನಿರಂಜನ್ ಎಂಬವರು ಪಡೆದುಕೊಂಡಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಗುತ್ತಿಗೆದಾರರಿಗೆ ರೂ. ಮೂರು ಕೋಟಿ ಮಾತ್ರ ಹಣ ಬಿಡುಗಡೆಯಾಗಿದ್ದು, ಇನ್ನೂ ಎರಡು ಕೋಟಿ ರೂ. ಬಾಕಿ ಇರುವುದಾಗಿ ನಿರಂಜನ್ ತಿಳಿಸಿದ್ದಾರೆ.
ಆಡಳಿತ ಸೌಧದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಜ. ೨೬ರಂದು ಉದ್ಘಾಟನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ, ಕಂದಾಯ ಸಚಿವರು ಫೆ. ೨ನೇ ವಾರದಲ್ಲಿ ಆಗಮಿಸುವುದಾಗಿ ತಿಳಿಸಿದ ಮೇರೆಗೆ ಉದ್ಘಾಟನಾ ಕಾರ್ಯ ಫೆ. ೨ನೇ ವಾರದಲ್ಲಿ ನಡೆಯಲಿದೆ ಎಂದು ಮಡಿಕೇರಿ ತಾಲ್ಲೂಕು ತಹಸಿಲ್ದಾರ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.