Mysore
21
clear sky

Social Media

ಶನಿವಾರ, 03 ಜನವರಿ 2026
Light
Dark

ಮಡಿಕೇರಿ: ತೂಗು ತೊಟ್ಟಿಲ ಶಾಲೆ; ಗುಹೆಯೊಳಗೆ ಪಾಠ!

ನವೀನ್ ಡಿಸೋಜ

ಮಕ್ಕಳ ಕುತೂಹಲದ ಕೇಂದ್ರವಾದ ಮುಳ್ಳೂರು ಶಾಲೆ ೭೦ ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಮುಖ್ಯ ಶಿಕ್ಷಕ ಸತೀಶ 

ಮಡಿಕೇರಿ: ಶಾಲಾ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಭಯಾನಕ ಗುಹೆಯೊಂದು ಎದುರಾಗುತ್ತದೆ. ಹೆದರಿಕೆಯಿಂದಲೆ ಒಳಗೆ ಹೊಕ್ಕರೆ ಕಾಣಸಿಗುವುದು ಬಾವಲಿಗಳ ಮಾದರಿಗಳು, ಜೇಡರ ಬಲೆಗಳು, ಅಸ್ಥಿ ಪಂಜರಗಳು, ಸ್ಮಾರಕಗಳು, ಇತಿಹಾಸದ ಪಳೆಯುಳಿಕೆಗಳು, ಕೃತಕ ಪ್ರಾಣಿಗಳ ಮಾದರಿಗಳು ಮಕ್ಕಳಿಗೆ ರೋಮಾಂಚನ ಉಂಟು ಮಾಡುತ್ತವೆ.

ಗುಹೆಯು ಕೊನೆಯಾಗುತ್ತಿದಂತೆ ಆಕಾಶಕ್ಕೇರುವಂತೆ ಮೆಟ್ಟಿಲುಗಳು ಗೋಚರಿಸುತ್ತವೆ. ಒಂದೊಂದೇ ಮೆಟ್ಟಿಲೇ ರುತ್ತಾ ಹೋದಂತೆ ಮರದ ಮೇಲಿರುವ ತೂಗು ತೊಟ್ಟಿಲ ಪಾಠಶಾಲೆ ಕಾಣಸಿಗುತ್ತದೆ. ತಂಗಾಳಿಯ ನಡುವೆ ಪ್ರಕೃತಿಯ ಮಡಿಲಲ್ಲೇ ಪುಟ್ಟ ಪುಟ್ಟ ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕರನ್ನು ಸುತ್ತುವರಿದು ಪ್ರಾಣಿ ಪಕ್ಷಿಗಳ ಇಂಚರದೊಂದಿಗೆ ಪ್ರಕೃತಿಯ ಮಡಿಲಲ್ಲೇ ಪಾಠ ಕಲಿಯುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಯೂ ವಿವಿಧ ಕೀಟಗಳ, ಪಕ್ಷಿಗಳ ಗೂಡು ಗಳು, ಹೂವುಗಳು ತೂಗು ತೊಟ್ಟಿಲ ರಮ್ಯತೆಯನ್ನು ಹೆಚ್ಚಿಸಿದೆ.

ಜಿಪ್ ಲೈನ್, ರೋಪ್ ವಾಕ್, ಸ್ವಿಮ್ಮಿಂಗ್ ಪೂಲ್, ಮೃಗಾಲಯ ಹೀಗೆ ವಿಭಿನ್ನತೆಯಿಂದ ಕೂಡಿರುವ ಮುಳ್ಳೂರಿನ ಸರ್ಕಾರಿ ಶಾಲೆ ಇದೀಗ ಎಲ್ಲರ ಗಮನ ತನ್ನತ್ತ ಸೆಳೆದಿದೆ. ಮಕ್ಕಳ ಸಾಹಸ ಮನೋಭಾವವನ್ನು ಉತ್ತೇಜಿಸುವ ಗುಹೆ ಹಾಗೂ ಹೊಂಗೆ ಮರದ ಮೇಲಿರುವ ೨೦ ಅಡಿ ಎತ್ತರದ ತೂಗು ತೊಟ್ಟಿಲ ಪಾಠ ಶಾಲೆ ಈಗ ವಿದ್ಯಾರ್ಥಿಗಳ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ.

ಬೇಸಿಗೆ ಮತ್ತು ಮಳೆಗಾಲದ ರಜೆಯ ಸಮಯದಲ್ಲಿ, ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ ಅವರು ವೈಯಕ್ತಿವಾಗಿ ೭೦ ಸಾವಿರ ರೂ. ವೆಚ್ಚ ಮಾಡಿ ಸ್ವತಃ ಈ ವಿಶಿಷ್ಟ ಆಕರ್ಷಣೆಗಳನ್ನು ನಿರ್ಮಿಸಿದ್ದಾರೆ.ಇಪ್ಪತ್ತು ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ಈ ತೂಗು ತೊಟ್ಟಿಲು, ಇಪ್ಪತ್ತು ಅಡಿ ಉದ್ದ ಹಾಗೂ ಹತ್ತು ಅಡಿ ಅಗಲವಿದೆ. ಏಕಕಾಲದಲ್ಲಿ ೩೦ ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಗುಹೆ ಕೂಡ ೨೦ ಅಡಿ ಉದ್ದ, ೩ ಅಡಿ ಅಗಲ, ೬ ಅಡಿ ಎತ್ತರ ಇದೆ.

ಶಿಕ್ಷಕನ ಕ್ರಿಯಾಶೀಲತೆ ಬಗ್ಗೆ ಮೆಚ್ಚುಗೆ: ಮತ್ತೊಂದು ವಿಶೇಷವೆಂದರೆ ಇದನ್ನು ನಿರ್ಮಿಸಿದವರು ಯಾರೋಗಾರೆಯವರೋ, ವೆಲ್ಡರೋ, ಇಂಜಿನಿಯರೋ ಅಲ್ಲ. ಮುಖ್ಯ ಶಿಕ್ಷಕ ಸತೀಶ್ ಸ್ವತಃ ವೆಲ್ಡಿಂಗ್, ಗಾರೆ, ಪೇಂಟಿಂಗ್ ಎಲ್ಲವನ್ನೂ ಮಾಡಿದ್ದಾರೆ. ಬೇಸಿಗೆ ಮತ್ತು ಮಳೆಗಾಲದ ರಜೆಯ ಸಮಯವನ್ನು ಬಳಸಿಕೊಂಡು ಹಗಲು ರಾತ್ರಿ ಎಂಬ ಸಮಯದಪರಿವೇ ಇಲ್ಲದೆ ಗುಹೆ ಮತ್ತು ತೂಗು ತೊಟ್ಟಿಲ ಪಾಠಶಾಲೆ ಕಟ್ಟಿದ್ದಾರೆ. ಈ ಪುಟ್ಟ ಶಾಲೆಯಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಪ್ರಯೋಗಾಲಯ, ಮಕ್ಕಳ ಮನೋಮಟ್ಟಕ್ಕೆ ನಿಲುಕುವ ಗ್ರಂಥಾಲಯ, ತರಗತಿ ಕೋಣೆಗಳು ಕಲಿಕೋಪಕರಣಗಳಿಂದ ಸಂಪತ್‌ದ್ಭರಿತವಾಗಿ ಕಲಿಕೆಗೆ ಸಹಾಯಕವಾಗಿವೆ. ಪೋಷಕರು ಹಾಗೂ ಗ್ರಾಮಸ್ಥರು ಕೂಡ ಈ ಪ್ರಯತ್ನವನ್ನು ಮೆಚ್ಚಿ, ಶಿಕ್ಷಕರ ಶ್ರಮವನ್ನು ಶ್ಲಾಘಿಸಿದ್ದಾರೆ.

” ಇಂತಹ ಪ್ರಯೋಗಗಳು ಮಕ್ಕಳ ಸೃಜನಾತ್ಮಕತೆ, ಧೈರ್ಯ ಮತ್ತು ಪ್ರಕೃತಿ ಪ್ರೇಮವನ್ನು ಬೆಳೆಸುತ್ತವೆ. ನನ್ನ ಸಹೋದ್ಯೋಗಿ ಶಿಕ್ಷಕರಾದ ಜಾನ್ ಪಾವ್ಲ್ ಡಿ’ಸೋಜ ಮತ್ತು ಶಿಕ್ಷಕಿ ಶೀಲಾರವರ ಸಹಕಾರದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ.”

-ಸಿ.ಎಸ್. ಸತೀಶ್, ಮುಖ್ಯ ಶಿಕ್ಷಕ, ಸರ್ಕಾರಿ ಪ್ರಾಥಮಿಕ ಶಾಲೆ, ಮುಳ್ಳೂರು

Tags:
error: Content is protected !!