Mysore
22
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಲಿಂಗಾಂಬುಧಿ ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿ

ಚಿರಂಜೀವಿ ಸಿ ಹುಲ್ಲಹಳ್ಳಿ

ಸೆಪ್ಟೆಂಬರ್ ೧ರಿಂದ ಜಾರಿ; ಮಾಸಿಕ ಪಾಸ್ ಸೌಲಭ್ಯ

ವಾಯುವಿಹಾರಿಗಳ ಅಸಮಾಧಾನ ವಯಸ್ಕರಿಗೆ ೧೦ ರೂ., ಮಕ್ಕಳಿಗೆ ೫ ರೂ. ಶುಲ್ಕ 

ಮೈಸೂರು: ನಗರದ ಪ್ರಮುಖ ಹಸಿರು ತಾಣವಾಗಿರುವ ಲಿಂಗಾಂಬುಧಿ ಕೆರೆ ಪ್ರವೇಶ ಮಾಡುವವರಿಗೆ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕೆರೆಯಲ್ಲಿ ವಾಯುವಿಹಾರ ಮಾಡುವವರು ಇನ್ನು ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ. ಕೆರೆಯ ಆವರಣದಲ್ಲಿರುವ ವೃಕ್ಷೋದ್ಯಾನ ಪ್ರವೇಶಕ್ಕೆ ಸೆಪ್ಟೆಂಬರ್ ೧ರಿಂದ ಶುಲ್ಕ ವಿಧಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಈ ಕ್ರಮಕ್ಕೆ ಅನೇಕ ವಾಯುವಿಹಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ನೈಋತ್ಯ ಭಾಗದಲ್ಲಿರುವ ಲಿಂಗಾಂಬುಧಿ ಕೆರೆ ತನ್ನ ವಿಶಾಲ ಜಲಪ್ರದೇಶ ಹಾಗೂ ಸಮೃದ್ಧ ಜೀವವೈವಿಧ್ಯದಿಂದ ಗಮನ ಸೆಳೆದಿದೆ. ಸುಮಾರು ೨೨ ಚದರ ಕಿಲೋ ಮೀಟರ್ ಜಲಾನಯನ ಪ್ರದೇಶ ಹೊಂದಿರುವ ಕೆರೆಗೆ ಪ್ರತಿದಿನ ನೂರಾರು ಮಂದಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಕ್ರೀಡಾಪಟುಗಳು ಓಟದ ಅಭ್ಯಾಸ ನಡೆಸಿದರೆ, ಹಿರಿಯ ನಾಗರಿಕರು ಹಾಗೂ ಕುಟುಂಬಗಳು ಸಮಯ ಕಳೆಯಲು ಕೆರೆ ಆವರಣವನ್ನು ಬಳಸುತ್ತಾರೆ.

ಲಿಂಗಾಂಬುಧೀ ಕೆರೆಯ ಸುಮಾರು ೮೦ ಎಕರೆ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಿ ‘ಲಿಂಗಾಂಬುಧಿ ಕೆರೆ ವೃಕ್ಷೋದ್ಯಾನ’ ರೂಪಿಸಲಾಗಿದೆ. ಇದುವರೆಗೆ ಅರಣ್ಯ ಇಲಾಖೆಯ ಅನುದಾನದಿಂದ ಉದ್ಯಾನವನದ ನಿರ್ವಹಣೆ ನಡೆಯುತ್ತಿತ್ತು. ಆದರೆ ವೃಕ್ಷೋದ್ಯಾನಗಳಿಗೆ ಪ್ರವೇಶ ಶುಲ್ಕ ವಿಧಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಅನುದಾನದ ಕೊರತೆಯೂ ಎದುರಾಗಿದೆ. ಹೀಗಾಗಿ ಕೆರೆಯ ನಿರ್ವಹಣಾ ವೆಚ್ಚ ಭರಿಸಲು ಶುಲ್ಕ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ

೨೦೨೨ರಲ್ಲಿ ಶುಲ್ಕ ನಿಗದಿ ಪ್ರಯತ್ನ ವಿಫಲ:

ಲಿಂಗಾಂಬುಧಿ ಕೆರೆಗೆ ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾವನೆ ಇದೇ ಮೊದಲಲ್ಲ. ೨೦೨೨ರಲ್ಲಿಯೂ ಅರಣ್ಯ ಇಲಾಖೆ ಇದೇ ರೀತಿಯ ಕ್ರಮಕ್ಕೆ ಮುಂದಾಗಿತ್ತು. ಆಗ ಲಿಂಗಾಂಬುಧಿ ನಗರ ಉದ್ಯಾನ ವಾಯುವಿಹಾರಿಗಳ ಸಮಿತಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿತ್ತು. ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಇಲಾಖೆ ಶುಲ್ಕ ವಿಧಿಸುವ ನಿರ್ಧಾರವನ್ನು ಕೈಬಿಟ್ಟಿತ್ತು. ಇದೀಗ ಮತ್ತೆ ಶುಲ್ಕ ಜಾರಿಗೊಳಿಸಲು ಮುಂದಾಗಿರುವುದು ವಾಯುವಿಹಾರಿಗಳಲ್ಲಿ ಆಕ್ರೋಶ ಮೂಡಿಸಿದೆ.

” ರಾಜ್ಯ ಸರ್ಕಾರದ ಸೂಚನೆಯಂತೆ ಕೆರೆ ನಿರ್ವಹಣೆಗೆ ಶುಲ್ಕ ನಿಗದಿಪಡಿಸಲಾಗಿದೆ. ಸಾರ್ವಜನಿಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.”

 ಪರಮೇಶ್ವರ್, ಡಿಸಿಎಫ್, ಮೈಸೂರು

” ನಿತ್ಯ ವಾಯುವಿಹಾರಕ್ಕೆ ಬರುವ ಜನರಿಂದಲೂ ಶುಲ್ಕ ಪಡೆಯುವುದು ಸರಿಯಲ್ಲ. ಈ ಹಿಂದೆಯೂ ನಮ್ಮ ಬಳಗ ಇದನ್ನು ವಿರೋಧಿಸಿತ್ತು. ಇದೀಗ ಮತ್ತೆ ಅರಣ್ಯ ಇಲಾಖೆಯ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು.”

ನಾಗೇಶ್, ಅಧ್ಯಕ್ಷ, ಲಿಂಗಾಂಬುಧಿ ಮಿತ್ರರ ಬಳಗ 

ಐತಿಹಾಸಿಕ ಹಿನ್ನೆಲೆ:  ಮಹಾರಾಣಿ ಕೃಷ್ಣವಿಲಾಸ ಲಿಂಗರಾಜಮ್ಮಣ್ಣಿಯವರ ಸ್ಮರಣಾರ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ೧೮೨೮ರಲ್ಲಿ ಲಿಂಗಾಂಬುಧಿ ಕೆರೆಯನ್ನು ನಿರ್ಮಿಸಿದರು. ಸುಮಾರು ೨೫೦ ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ೧೫೦ ಎಕರೆ ಪ್ರದೇಶ ಜಲರಾಶಿಯಾಗಿದ್ದರೆ, ಉಳಿದ ಸುಮಾರು ೧೦೦ ಎಕರೆ ಪ್ರದೇಶದಲ್ಲಿ ಮೀಸಲು ಅರಣ್ಯವಿದೆ.

 

 

Tags:
error: Content is protected !!