ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ ಪ್ರತಿ ಮಳೆಗಾಲದ ಕೊನೆಯಲ್ಲೂ ಎರಡೂ ರಾಜ್ಯಗಳ ನಡುವೆ ಮನಸ್ತಾಪ ಉಂಟಾಗುವುದು ಕಹಿ ಸತ್ಯವಾಗಿದೆ.
ಕೇವಲ ಕಾವೇರಿ ಮಾತ್ರವಲ್ಲದೆ ಕೃಷ್ಣಾ, ಗೋದಾವರಿ, ಮಹಾದಾಯಿ ಸೇರಿದಂತೆ ದಕ್ಷಿಣ ಭಾರತದ ಹಲವು ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಗಳ ನಡುವೆ ವಿವಾದಗಳು ಜೀವಂತವಾಗಿಯೇ ಇವೆ. ಈ ಸಮಸ್ಯೆಗೆ ಪ್ರತಿವರ್ಷ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಬದಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಹೆಜ್ಜೆ ಇಡಬೇಕಾಗಿದೆ.
ದಕ್ಷಿಣ ಭಾರತದ ನದಿಗಳನ್ನು ಒಂದಕ್ಕೊಂದು ಜೋಡಿಸುವುದು ಹಾಗೂ ಉತ್ತರ ಭಾರತದ ಹೆಚ್ಚುವರಿ ನೀರಿರುವ ಜೀವ ನದಿಗಳನ್ನು ದಕ್ಷಿಣದ ನದಿಗಳೊಂದಿಗೆ ಜೋಡಣೆ ಮಾಡುವುದು ಈ ಜಲ ವಿವಾದಕ್ಕೆ ಅತ್ಯಂತ ಸೂಕ್ತ ಮತ್ತು ದೀರ್ಘಕಾಲೀನ ಪರಿಹಾರವಾಗಲಿದೆ.
ರಾಷ್ಟ್ರೀಯ ಮಟ್ಟದಲ್ಲಿ ನದಿ ಜೋಡಣೆ ಯೋಜನೆಯನ್ನು ಜರಿಗೊಳಿಸಿದರೆ ಉತ್ತರ ಭಾರತದಲ್ಲಿ ಪ್ರವಾಹ ನಿಯಂತ್ರಣಕ್ಕೆ ಬರುವುದರ ಜೊತೆಗೆ ದಕ್ಷಿಣ ಭಾರತದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ನೀರಿನ ಅಭಾವ ಕಡಿಮೆಯಾಗುವುದರಿಂದ ರಾಜ್ಯಗಳ ನಡುವಿನ ಜಲ ವಿವಾದಗಳು ಹಾಗೂ ನ್ಯಾಯಾಲಯದ ಅಲೆದಾಟಗಳು ತಾನಾಗಿಯೇ ಹಂತ ಹಂತವಾಗಿ ಮುಕ್ತಾಯಗೊಳ್ಳುತ್ತವೆ.
ಈ ಬೃಹತ್ ಯೋಜನೆಯು ಸಾಕಾರಗೊಳ್ಳಬೇಕಾದರೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳನ್ನು, ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಕ್ತವಾಗಿ ಸಮಾಲೋಚಿಸಿ, ಒಂದು ಸ್ಪಷ್ಟ ಕಾರ್ಯಾಚರಣೆ ನಕ್ಷೆಯನ್ನು ರೂಪಿಸಬೇಕಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ



