ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಹೊಟ್ಟೆ ತುಂಬಿರುವವರಿಗೇ ಹೆಚ್ಚೆಚ್ಚು ಆಹಾರ ಸಿಕ್ಕರೆ ಹೇಗೆ? ಈ ಪ್ರಶ್ನೆ ಮೂಡಲು ಬುಧವಾರ ಯುವ ಸಂಭ್ರಮದಲ್ಲಿ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ತಂಡಕ್ಕೆ ಹೆಚ್ಚಿನ ಸಮಯಾವಕಾಶ ದೊರೆತು ಉತ್ಸಾಹದಿಂದ ಹಲವಾರು ದಿನಗಳಿಂದ ಅಭ್ಯಾಸ ನಡೆಸಿದ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ಸಿಗದ ಕಾರಣಕ್ಕಾಗಿ.
ಯುವ ಸಂಭ್ರಮದ ಕೊನೆಯ ದಿನವಾದ ಹತ್ತನೇ ದಿನದ ಕಾರ್ಯಕ್ರಮಕ್ಕೆಂದು ವಿದ್ಯಾರ್ಥಿಗಳು , ಯುವ ಸಂಭ್ರಮದ ನೃತ್ಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅಭ್ಯಾಸ ಮಾಡಿರುತ್ತಾರೆ. ಆದರೆ ಅಂದು ವಿಜಯ್ ಪ್ರಕಾಶ್ ತಂಡಕ್ಕೆ ಯುವ ಸಂಭ್ರಮದ ವೇದಿಕೆಯಲ್ಲಿ ಹೆಚ್ಚು ಸಮಯ ನೀಡಲಾಯಿತು. ಸಭಿಕರನ್ನು ಈ ತಂಡ ರಂಜಿಸಿದ್ದು ಸರಿ.ಆದರೆ ಪ್ರತಿಭೆಯ ಪ್ರದರ್ಶನಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಸಮಯಾವಕಾಶ ನೀಡದಿದ್ದದ್ದು ಬೇಸರ ಮೂಡಿಸುತ್ತದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯಾವಕಾಶ ನೀಡುವುದಕ್ಕೆ ಆಯೋಜಕರು ಯೋಚಿಸಲಿ.
ಹಾಗೆಯೇ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳಿಗೆ ಊಟ- ತಿಂಡಿ ಮಾಡಲು ನಿಗದಿತ ಸ್ಥಳವನ್ನು ಗುರುತಿಸಿಬೇಕಾಗಿದೆ. ಏಕೆಂದರೆ ರಸ್ತೆಯಲ್ಲಿ ಕುಳಿತು ಊಟ ತಿಂಡಿ ಮಾಡುವ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಮುಜುಗರ ತರುವಂತಹದ್ದಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು




