Mysore
28
light rain

Social Media

ಶನಿವಾರ, 10 ಅಕ್ಟೋಬರ್ 2026
Light
Dark

ಓದುಗರ ಪತ್ರ: ಕಾವೇರಿ: ರಾಜ್ಯಕ್ಕೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಸಿದೆ. ಅಲ್ಲದೆ ಕಾವೇರಿ ಜಲಾನಯನ ಪ್ರದೇಶದ ೪೭ ತಾಲ್ಲೂಕುಗಳನ್ನು ತೀವ್ರ ಬರ ಪ್ರದೇಶವೆಂದು ಘೋಷಿಸಿ ಪರಿಹಾರ ಪಡೆಯಲು ಯತ್ನಿಸುತ್ತಿದೆ.

ಈ ಬಾರಿ ಕಾವೇರಿ ಕೊಳ್ಳದ ಯಾವುದೇ ಜಲಾಶಯಗಳೂ ಭರ್ತಿ ಆಗಿಲ್ಲ, ಅಲ್ಲದೇ ಕೇಂದ್ರ ಅಧ್ಯಯನ ತಂಡವು ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸುತ್ತಿದೆ. ರಾಜ್ಯ ಭೀಕರ ಬರದಿಂದ ತತ್ತರಿಸುತ್ತಿದ್ದರೂ, ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ ಪ್ರತಿ ದಿನ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ಕಾವೇರಿ ನೀರು ನಿರ್ವಹಣಾ ಮಂಡಳಿ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವುದು ಯಾವ ನ್ಯಾಯ?

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ತಲುಪಬೇಕೆಂದರೆ, ರಾಜ್ಯದ ಜಲಾಶಯಗಳಿಂದ ಕನಿಷ್ಠ ಐದು ಸಾವಿರಕ್ಕೂ ಹೆಚ್ಚು ನೀರನ್ನು ಹರಿಸಬೇಕಾಗುತ್ತದೆ. ಈಗ ಜಲಾಶಯದಲ್ಲಿರುವ ಅರ್ಧದಷ್ಟು ನೀರನ್ನು ಹರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಳೆ ಬರುವಲಕ್ಷಣಗಳು ಇಲ್ಲ ಎಂದು ಹವಾಮಾನ ತಜ್ಞರೇ ಹೇಳುತ್ತಿದ್ದಾರೆ. ಈಗಿನ ಸಿಡಬ್ಲ್ಯುಆರ್‌ಸಿ ಸೂಚನೆಯನ್ನು ಪಾಲಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಸಂಬಂಧ ಇದೇ ತಿಂಗಳ ೧೨ ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವುದರಿಂದ ರಾಜ್ಯದ ವಾಸ್ತವ ಸ್ಥಿತಿಯನ್ನು ನ್ಯಾಯವಾದಿಗಳು ಸುಪ್ರೀಂ ಕೋರ್ಟ್ ಗಮನಕ್ಕೆ ತಂದು, ರಾಜ್ಯಕ್ಕೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು.

 -ಬೂಕನಕೆರೆ ವಿಜೇಂದ್ರ, ಮೈಸೂರು 

 

Tags:
error: Content is protected !!