Mysore
20
broken clouds

Social Media

ಶುಕ್ರವಾರ, 01 ನವೆಂಬರ್ 2024
Light
Dark

‘ಬನ್ನಿಮಂಟಪದಲ್ಲಿರುವ ಕೆಎಸ್‌ಆರ್‌ಟಿಸಿ ಜಾಗದಲ್ಲೇ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಿ’

ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಒತ್ತಡ ತಗ್ಗಿಸಲು ಸಾರಿಗೆ ಇಲಾಖೆಯು ಪೀಪಲ್ಸ್ ಪಾರ್ಕ್ ನ ೩. ೫ ಎಕರೆ ಜಾಗ ಪಡೆದು ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಈ ಯೋಜನೆಯ ಆಗುಹೋಗುಗಳು ಮತ್ತು ಪರ್ಯಾಯ ಚಿಂತನೆಗಳ ಬಗ್ಗೆ ವಿಚಾರವಂತರ ಸಲಹೆ ಇಲ್ಲಿದೆ.

ಸಿ. ನಾರಾಯಣ ಗೌಡ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ, ಮೈಸೂರು
ಮೈಸೂರು: ಜನರಿಗೆ ಸುಗಮ ಸಾರಿಗೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಬಸ್ ನಿಲ್ದಾಣಗಳು ನಗರದ ಮಧ್ಯೆಯೇ ಇರಬೇಕು. ನಗರದ ಹೊರ ವಲಯಕ್ಕೆ ಬಸ್ ನಿಲ್ದಾಣ ಸ್ಥಳಾಂತರಿಸಿದರೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುತ್ತಿದೆ.

ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜಧಾನಿ ಬೆಂಗಳೂರಿನ ಸನ್ನಿವೇಶವೇ ಬೇರೆ. ಅಲ್ಲಿಗೆ ಬೇರೆ ಬೇರೆ ಕೆಲಸ ಕಾರ್ಯಗಳಿಗಾಗಿ ನಿತ್ಯ ಲಕ್ಷಾಂತರ ಜನರು ಬಂದು ಹೋಗುತ್ತಾರೆ. ಕೇವಲ ೧೨ ಲಕ್ಷ ಜನಸಂಖ್ಯೆ ಹೊಂದಿರುವ ಮೈಸೂರನ್ನು ಈಗಲೇ ಬೆಂಗಳೂರಿನ ಜತೆಗೆ ಹೋಲಿಸಲು ಹೋಗಿ ಸ್ಯಾಟಲೈಟ್ ಬಸ್ ನಿಲ್ದಾಣದ ಕಲ್ಪನೆ ಮಾಡುವುದು ಸದ್ಯ ಮೈಸೂರಿಗೆ ಹೊಂದಾಣಿಕೆ ಆಗುವುದಿಲ್ಲ.

ಸಮರ್ಪಕ ಬಳಕೆ ಆಗಬೇಕಿತ್ತು: ಜೆಎನ್- ನರ್ಮ್ ಹಣದಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣ ವನ್ನು ನವೀಕರಿಸಿದಾಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಾಧುನಿಕ ಸೌಕರ್ಯ ಗಳೊಂದಿಗೆ ಬಹುಮಹಡಿ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರೆ ಇಂದು ಸಮಸ್ಯೆ ಆಗುತ್ತಲೇ ಇರಲಿಲ್ಲ. ಬಸ್ ನಿಲ್ದಾಣ ನವೀಕರಣದ ಸಂದರ್ಭದಲ್ಲಿ ದೂರದೃಷ್ಟಿಯ ಯೋಜನೆ ರೂಪಿಸದೆ, ಸಾರಿಗೆ ಸೇವೆಗೆ ಆದ್ಯತೆ ನೀಡಿದ್ದಕ್ಕಿಂತ ವಾಣಿಜ್ಯ ಚಟುವಟಿಕೆಗಳಿಗೆ ಅಲ್ಲಿ ಹೆಚ್ಚು ಆದ್ಯತೆ ನೀಡಲಾಯಿತು. ಕೊಲ್ಕತ್ತಾದಲ್ಲಿ ೬೫ ಅಡಿ ಆಳದಲ್ಲಿ ಮೆಟ್ರೋ ನಿಲ್ದಾಣ ಮಾಡಿದ್ದಾರೆ. ಸಬ್ ಅರ್ಬನ್ ಬಸ್ ನಿಲ್ದಾಣ ನವೀಕರಣ ಸಂದರ್ಭದಲ್ಲಿ ಇಡೀ ಬಸ್ ನಿಲ್ದಾಣವನ್ನು ಸೆಲ್ಲಾರ್ ಮಾಡಿ, ಬಹು ಮಹಡಿ ನಿಲ್ದಾಣ ನಿರ್ಮಿಸಬೇಕಿತ್ತು. ಈಗ ಅಲ್ಲಿ ಪ್ರಯಾಣಿಕರು ತರುವ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವೇ ಸಿಗದಂತಹ ಪರಿಸ್ಥಿತಿ ಇದೆ.

ಬನ್ನಿಮಂಟಪ ಜಾಗ ಬಳಸಲಿ: ಸಬ್ ಅರ್ಬನ್ ಬಸ್ ನಿಲ್ದಾಣದ ಮೇಲೆ ಒತ್ತಡ ಇದೆ ಎಂದು ನಿಲ್ದಾಣದ ವಿಸ್ತರಣೆಗಾಗಿ ಪೀಪಲ್ಸ್ ಪಾರ್ಕ್ ಜಾಗ ಕೇಳುವುದು ಸರಿಯಲ್ಲ. ಈಗಾಗಲೇ ಅಲ್ಲಿರುವ ಕಾಲೇಜು ಮತ್ತು ಗ್ರಂಥಾಲಯಗಳಿಗೆ ಇದರಿಂದ ಸಮಸ್ಯೆಯಾಗಿ, ಅವುಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಇನ್ನು ನಗರದ ಸಾತಗಳ್ಳಿ, ವಿಜಯನಗರ ನಾಲ್ಕನೇ ಹಂತದ ಬಸ್ ಘಟಕ ಮೊದಲಾದ ನಗರದ ಹೊರ ವಲಯದ ಜಾಗಗಳಲ್ಲಿರುವ ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳಬಹುದು ಎನ್ನುವ ವಾದವೂ ಸರಿಯಲ್ಲ. ಎಸ್. ಎಂ. ಕೃಷ್ಣ ಅವರ ಸರ್ಕಾರ ಇದ್ದಾಗಲೂ ರೈಲು ನಿಲ್ದಾಣಕ್ಕೆ ಸಮೀಪದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎನ್ನುವ ಕಾರಣಕ್ಕೆ ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿದ ಜೆ. ಕೆ. ಗ್ರೌಂಡ್ ಜಾಗವನ್ನು ಬಳಸಿಕೊಳ್ಳಲು ಕೆಎಸ್‌ಆರ್‌ಟಿಸಿ ಪ್ರಸ್ತಾವನೆ ಇಟ್ಟಿತ್ತಾದರೂ ಅದು ಸಾಧ್ಯವಾಗಲಿಲ್ಲ. ನಂತರದ ವರ್ಷಗಳಲ್ಲಿ ಬಂದ ಜೆಎನ್-ನರ್ಮ್ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಬಹುದಿತ್ತು. ಅದರ ಬದಲಿಗೆ ದುಂದುವೆಚ್ಚ ಮಾಡಲಾಯಿತು. ಪರಿಸ್ಥಿತಿ ಹೀಗಿರುವಾಗ ಕೆಎಸ್‌ಆರ್ ಟಿಸಿಯವರು ಎಲ್ಲೆಲ್ಲೋ ಜಾಗ ಹುಡುಕುವ ಬದಲಿಗೆ ಬನ್ನಿಮಂಟಪದಲ್ಲಿ ತಮ್ಮದೇ ಆದ ನೂರಾರು ಎಕರೆ ಜಾಗವಿದ್ದು, ಆ ಜಾಗವನ್ನು ಬಳಸಿಕೊಂಡು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಿ, ಇದರಿಂದ ಬಸ್ ನಿಲ್ದಾಣ ನಗರದಿಂದ ತೀರಾ ಹೊರವಲಯಕ್ಕೆ ಹೋದಂತಾಗುವುದಿಲ್ಲ.

ಬೇಕಾಬಿಟ್ಟಿ ಬಸ್ ನಿಲುಗಡೆ: ಸಬ್ ಅರ್ಬನ್ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆಗೆ ಕೆಎಸ್‌ಆರ್‌ಟಿಸಿಯವರ ಕೊಡುಗೆ ಸಾಕಷ್ಟಿದೆ. ರಾತ್ರಿ ವೇಳೆಯಲ್ಲಂತೂ ಅಂತಾರಾಜ್ಯ ಸಾರಿಗೆ ಬಸ್‌ಗಳು, ಇಲ್ಲಿಂದ ದೂರದ ಜಿಲ್ಲೆಗಳಿಗೆ ಹೋಗುವ, ಅಲ್ಲಿಂದ ಬಂದ ಬಸ್‌ಗಳನ್ನು ಡಿಪೋಗೆ ಹಾಕುವ ಬದಲು ಸಬ್ ಅರ್ಬನ್ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳ ಬದಿಯಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಂಚಾರದಟ್ಟಣೆ ಉಂಟಾಗಿ ಜನರಿಗೆ ಕಿರಿಕಿರಿಯಾಗುತ್ತಿದೆ. ಇದರ ನಿವಾರಣೆಯತ್ತ ಪೊಲೀಸರು ಗಮನಹರಿಬೇಕು.

ದಸರಾ ಸಂದರ್ಭ ಬಿಟ್ಟರೆ ಮೈಸೂರಿಗೆ ನಿತ್ಯ ಬಂದು ಹೋಗುವವರ ಸಂಖ್ಯೆ ಅಂದಾಜು ೨೦ರಿಂದ ೨೫ ಸಾವಿರ ತಲುಪಬಹುದು ಅಷ್ಟೆ. ಲಾಂಗ್ ವೀಕೆಂಡ್, ಹಬ್ಬ-ಹರಿದಿನಗಳ ಸರ್ಕಾರಿ ರಜಾ ದಿನಗಳ ಸಂದರ್ಭದಲ್ಲಿ ಮಾತ್ರ ದಿನಕ್ಕೆ ೭೫ರಿಂದ ಲಕ್ಷ ಜನರು ಮೈಸೂರಿಗೆ ಬಂದು ಹೋಗುತ್ತಾರೆ. ಸಬ್ ಅರ್ಬನ್ ಬಸ್ ನಿಲ್ದಾಣದ ಅವೈಜ್ಞಾನಿಕ ನಿರ್ಮಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಗಳನ್ನು ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಒತ್ತಡ ಹೆಚ್ಚಿರುವಂತೆ ಕಾಣುತ್ತದೆ. -ಸಿ. ನಾರಾಯಣಗೌಡ

‘ಕನೆಕ್ಟಿವಿಟಿ ಉತ್ತಮವಾಗಿದ್ದರೆ ಉದ್ಯಮ, ಉದ್ಯೋಗಳೂ ಸೃಷ್ಟಿಯಾಗುತ್ತವೆ’
ಬಿ. ಎಸ್. ಪ್ರಶಾಂತ್, ಅಧ್ಯಕ್ಷ, ಟ್ರಾವೆಲ್ಸ್ ಅಸೋಸಿಯೇಷನ್ , ಮೈಸೂರು
ಮೈಸೂರು: ಕನೆಕ್ಟಿವಿಟಿ ಉತ್ತಮವಾಗಿದ್ದರೆ ಮಾತ್ರ ಯಾವುದೇ ಉದ್ಯಮ ಬೆಳೆಯಲು ಸಾಧ್ಯ. ಉದ್ಯಮಗಳು ಬೆಳೆದಾಗ ಸ್ಥಳೀಯರಿಗೆ ಉದ್ಯೋಗ ದೊರಕುವಂತಾಗುತ್ತದೆ. ಹೀಗಾಗಿ ರಸ್ತೆ ಸಾರಿಗೆ, ರೈಲು, ವಿಮಾನಯಾನ ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಸರ್ಕಾರ ಮುಂದಾಗಬೇಕು.

ಸಬ್ ಅರ್ಬನ್ ಬಸ್ ನಿಲ್ದಾಣದ ಮೇಲೆ ಒತ್ತಡ ಇದೆ ಎನ್ನುವ ಕಾರಣಕ್ಕೆ ಬಸ್ ನಿಲ್ದಾಣ ವನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವ ಯೋಚನೆ ಮಾಡಿದರೆ ಜನರಿಗೆ ಅನುಕೂಲದ ಬದಲಿಗೆ ಅನನುಕೂಲವೇ ಹೆಚ್ಚಾಗುತ್ತದೆ. ಜನರಿಗೆ ಸುಗಮ ಸಾರಿಗೆ ಸೇವೆ ಒದಗಿಸುವಂತಿದ್ದರೆ ಬೆಂಗಳೂರಿನಲ್ಲಿ ಮೆಜೆಸ್ಟಿಕ್‌ನ ಒಂದೇ ಕ್ಯಾಂಪಸ್ ನಲ್ಲಿ ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ ಇರುವಂತೆ ಎಲ್ಲಕಡೆಗಳಲ್ಲಿಯೂ ನಿಲ್ದಾಣಗಳು ಒಂದೇ ಕಡೆ ಇದ್ದಾಗ ಮಾತ್ರ ಯಾವುದೇ ಪ್ರವಾಸಿಗರಿರಲಿ, ಸ್ಥಳೀಯ ಪ್ರಯಾಣಿಕರಿಗೂ ಅನುಕೂಲ. ಹಾಗೆ ನೋಡಿದರೆ ಮೈಸೂರು ನಗರದಲ್ಲಿ ರೈಲು ನಿಲ್ದಾಣ ಒಂದು ಕಡೆ, ಸಬ್ ಅರ್ಬನ್ ಬಸ್ ನಿಲ್ದಾಣ ಮತ್ತು ನಗರ ಸಾರಿಗೆ ಬಸ್ ನಿಲ್ದಾಣಗಳು ಒಂದೊಂದು ಕಡೆಗಳಲ್ಲಿವೆ, ರೈಲಿನಲ್ಲಿ ಬಂದವರು ಆಟೋ, ಮತ್ತೊಂದು ಹಿಡಿದು ಅವರು ತಲುಪಬೇಕಾದ ಸ್ಥಳವನ್ನು ತಲುಪಬೇಕಾಗಿದೆ. ಇದರಿಂದ ಪ್ರಯಾಣಿಕರ ಜೇಬಿಗೆ ಹೆಚ್ಚು ಹೊರೆ ಬೀಳುತ್ತಿದೆ. ಹೀಗಾಗಿ ಸಬ್ ಅರ್ಬನ್ ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಯೋಜನೆ ರೂಪಿಸುವಾಗಲೇ ಅದೇ ಆವರಣದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ಇರುವಂತೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ನಗರದ ಮಧ್ಯೆ ಅಷ್ಟು ವಿಸ್ತೀರ್ಣವಾದ ಜಾಗವಿಲ್ಲ. ಹೀಗಾಗಿ ಬನ್ನಿ ಮಂಟಪದ ಕೆಎಸ್‌ಆರ್‌ಟಿಸಿ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸುವಾಗಲೇ ಒಂದೇ ಆವರಣದಲ್ಲಿ ಕೇಂದ್ರೀಯ ಬಸ್ ನಿಲ್ದಾಣ ಮತ್ತು ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಬೇಕು.

ವಿಮಾನ ನಿಲ್ದಾಣ ಸ್ತಬ್ಧ: ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಾಗ ಮೈಸೂರಿನ ವಿಮಾನ ನಿಲ್ದಾಣ ಚಟುವಟಿಕೆಯಿಂದ ಕೂಡಿತ್ತು. ಇಲ್ಲಿಂದ ಹಲವು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ, ಕಳೆದ ಒಂದು ವರ್ಷ ದಿಂದ ಮೈಸೂರು-ಚೆನ್ನೈ, ಮೈಸೂರು – ಹೈದರಾಬಾದ್ ನಡುವೆ ವಿಮಾನಯಾನ ಸೇವೆ ಬಿಟ್ಟರೆ, ಬೇರೆ ಯಾವ ಮಾರ್ಗಗಳಿಗೂ ವಿಮಾನಯಾನ ಸೇವೆ ಇಲ್ಲ. ಮೈಸೂರು-ಗೋವಾ, ಮೈಸೂರು-ಕೊಚ್ಚಿನ್ ನಡುವೆ ವಿಮಾನಯಾನ ಸೇವೆಗೆ ಬೇಡಿಕೆ ಇದೆ. ಹೀಗಾಗಿ ಈ ಮಾರ್ಗದ ಕಾರ್ಯಾಚರಣೆ ಮರು ನಿಗದಿಪಡಿಸಬೇಕು.

ಮೈಸೂರು-ಶಿರಡಿ-ತಿರುಪತಿ ನಡುವೆ ವಿಮಾನ ಯಾನ ಸೇವೆ ಒದಗಿಸಲು ಸರ್ವೇ ನಡೆಯಿತಾದರೂ ಕಾರ್ಯರೂಪಕ್ಕೆ ಬಂದಿಲ್ಲ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಕಾರ್ಯಗತ ಆಗುತ್ತಿಲ್ಲ. ಹೀಗಾಗಿ ಪ್ರವಾಸೋದ್ಯಮ ಮತ್ತು ಕೈಗಾರಿಕೋದ್ಯಮಕ್ಕೆ ಹೊಡೆತ ಬೀಳುತ್ತಿದೆ. ಸದ್ಯ ಮೈಸೂರಿಗೆ ಬರುವ ಪ್ರವಾಸಿಗರು ರೈಲುಗಳನ್ನೇ ಅವಲಂಬಿಸುವಂತಾಗಿದೆ. ಮೈಸೂರಿನಲ್ಲಿ ಸಾಕಷ್ಟು ಇಂಜಿನಿಯರಿಂಗ್ ಕಾಲೇಜುಗಳಿವೆ. ಅಲ್ಲಿಂದ ಪದವಿಪಡೆದು ಹೊರ ಬಂದವರು ಉದ್ಯೋಗ ಅರಸಿ ಬೇರೆಡೆಗೆ ಹೋಗಬೇಕಾದ ಸ್ಥಿತಿ ಇದೆ. ಬದಲಿಗೆ ಮೈಸೂರಿ ನಲ್ಲಿ ಕನೆಕ್ಟಿವಿಟಿ ಉತ್ತಮಪಡಿಸಿದರೆ ಸ್ಥಳೀಯವಾಗಿ ಉದ್ಯಮಗಳೂ ಬೆಳೆಯುತ್ತವೆ ಜತೆಗೆ ಇಲ್ಲಿನ ಜನರಿಗೆ ಉದ್ಯೋಗವೂ ದೊರೆಯುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಗಮನಹರಿಸುವಂತಾಗಬೇಕು.

ಮೈಸೂರು ನಗರದಲ್ಲಿ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸರಿ ಇಲ್ಲದಿರುವುದರಿಂದ ಹೆಚ್ಚು ಸಂಚಾರ ದಟ್ಟಣೆ ಇರುವಂತೆ ಕಾಣುತ್ತದೆ. ಆದರೆ, ಸಂಚಾರ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರನ್ನು ಸೇರಿಸಿಕೊಂಡು ಟ್ರಾಫಿಕ್ ಮ್ಯಾನೇಜ್ ಮೆಂಟ್ ಕಮಿಟಿ ರಚಿಸಿ, ಅವರ ಸಲಹೆ ಪಡೆದು ಕಾರ್ಯಗತಗೊಳಿಸಿದರೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. –ಬಿ. ಎಸ್. ಪ್ರಶಾಂತ್

 

 

Tags: