‘ಆಂದೋಲನ’ ವರದಿಯಿಂದ ಎಚ್ಚೆತ್ತು ಡಿಡಿಪಿಐ ಕ್ರಮ
ಮಂಜು ಕೋಟೆ
ಎಚ್. ಡಿ. ಕೋಟೆ: ಸರ್ಕಾರಿ ಶಾಲೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಇಬ್ಬರು ಮುಖ್ಯ ಶಿಕ್ಷಕರುಗಳನ್ನು ಅಮಾನತ್ತುಗೊಳಿಸಲಾಗಿದೆ.
ಆರೋಪ ಎದುರಿಸುತ್ತಿರುವ ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ ಅಧಿಕಾರಿಗಳು ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಮೇಲೆ ಎಚ್ಚೆತ್ತುಕೊಂಡು ೨ ಶಾಲೆಗಳ ಮುಖ್ಯ ಶಿಕ್ಷಕರುಗಳನ್ನು ಅಮಾನತ್ತುಗೊಳಿಸಿದ್ದಾರೆ. ತಾಲ್ಲೂಕಿನ ಅಂತರಸಂತೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸುನೀತಾ ವಿಲಿಯಂ, ಹ್ಯಾಂಡ್ ಪೋಸ್ಟ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದದ ನೂರಿ ಇಮ್ರಾನ್ ಕರ್ತವ್ಯದಿಂದ ಅಮಾನತ್ತುಗೊಂಡವರು.
ಅಂತರಸಂತೆಯ ಸರ್ಕಾರಿ ಶಾಲೆಯಲ್ಲಿ ವಾರದ ಹಿಂದೆ ಬಿಸಿಯೂಟದ ಆಹಾರ ಪದಾರ್ಥ ಸಮರ್ಪಕವಾಗಿ ಸದ್ಬಳಕೆ ಮಾಡದೆ ಹುಳು ಹಿಡಿದಿದ್ದ ನಾಲ್ಕೈದು ಮೂಟೆ ಗೋಧಿಯನ್ನು ಸುಟ್ಟು ಹಾಕಿದ್ದರು. ಶಿಕ್ಷಣ ಇಲಾಖೆಯವರಿಗೆ ಈ ವಿಚಾರ ತಿಳಿದಿದ್ದರೂ ಕ್ರಮ ಕೈಗೊಳ್ಳುವಲ್ಲಿ ಮೀನಮೇಷ ಎಣಿಸುತ್ತಿದ್ದರು. ಈ ಸಂಬಂಧ ‘ಆಂದೋಲನ’ ದಿನ ಪತ್ರಿಕೆಯಲ್ಲಿ ನ. ೨೭ರಂದು ‘ಮಕ್ಕಳ ಬಿಸಿಯೂಟದ ಗೋಧಿಗೆ ಬೆಂಕಿ ಹಚ್ಚಿ ನಾಶ’ ಎಂಬ ಶೀರ್ಷಿಕೆ ಯಡಿ ವರದಿ ಪ್ರಕಟವಾಗಿತ್ತು.
ಇದನ್ನು ಗಮನಿಸಿದ ಡಿಡಿಪಿಐ ಜವರೇಗೌಡ, ತಾಲ್ಲೂಕು ಶಿಕ್ಷಣ ಇಲಾಖೆಯಿಂದ ಮತ್ತಷ್ಟು ಸಮಗ್ರ ವರದಿ ಪಡೆದುಕೊಂಡು ಕರ್ತವ್ಯ ಲೋಪ ಎಸಗಿರುವ ಮುಖ್ಯ ಶಿಕ್ಷಕಿಯಾದ ಸುನಿತಾ ವಿಲಿಯಂ ಅವರನ್ನು ಅಮಾನತ್ತುಗೊಳಿಸಿ ಕ್ರಮ ಕೈಗೊಂಡಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿರುವ ಹ್ಯಾಂಡ್ ಪೋಸ್ಟ್‌ನ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನ. ೧ರ ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಧ್ವಜ ಹಾರಿಸಿ ರಾತ್ರಿ ೧೦ ಗಂಟೆಯಾದರೂ ಧ್ವಜವನ್ನು ಕೆಳಗಿಳಿಸುವ ಕೆಲಸಕ್ಕೆ ಮುಖ್ಯ ಶಿಕ್ಷಕರು ಮುಂದಾಗಿರಲಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಗಣ್ಯರು ಕ್ಷೇತ್ರ ಶಿಕ್ಷಣಾಽಕಾರಿ ಕಾಂತರಾಜ್ ಅವರಿಗೆ ವಿಚಾರ ತಿಳಿಸಿದ್ದರು. ಮುಖ್ಯ ಶಿಕ್ಷಕರಾದ ನೂರು ಇಮ್ರಾನ್ ದೂರವಾಣಿ ಕರೆ ಮಾಡಿ ಧ್ವಜವನ್ನು ನಿಯಮದ ಪ್ರಕಾರ ಇಳಿಸದೆ ಅವಮಾನ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಎಸ್‌ಡಿಎಂಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದರು.
ನಂತರ ತಹಸಿಲ್ದಾರ್ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಶಿಕ್ಷಣ ಇಲಾಖೆಯ ಇಸಿಒ ನಂಜಯ್ಯ ಅವರನ್ನು ಕರೆಸಿ ಗೌರವದಿಂದ ಧ್ವಜವನ್ನು ಕೆಳಗಿಳಿಸಿ ತಪ್ಪಿಸಸ್ಥರಿಗೆ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಪತ್ರ ಬರೆದಿದ್ದರು. ಈ ಪ್ರಕರಣ ನಡೆದು ೧೦ ದಿನಗಳಾದರೂ ಶಿಕ್ಷಣ ಇಲಾಖೆಯವರು ಕ್ರಮ ಕೈಗೊಳ್ಳುವಲ್ಲಿ ಮುಂದಾಗಿರಲಿಲ್ಲ. ಈ ವಿಚಾರವಾಗಿ ‘ಆಂದೋಲನ’ ದಿನಪತ್ರಿಕೆಯಲ್ಲಿ ನ. ೧೧ರಂದು ‘ಶಾಲೆಯಲ್ಲಿ ರಾತ್ರಿಯಲ್ಲೂ ಹಾರಾಡಿದ ರಾಷ್ಟ್ರಧ್ವಜ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯವರು ತಪ್ಪಿತಸ್ಥರ ವಿರುದ್ಧ ಕ್ಷೇತ್ರ ಶಿಕ್ಷಣಾಽಕಾರಿ ಕಾಂತರಾಜು ಮತ್ತು ಕೃಷ್ಣಯ್ಯ ಅವರು ವರದಿ ತಯಾರಿಸಿ ಡಿಡಿಪಿಐ ಕಚೇರಿಗೆ ಕಳುಹಿಸಿದ್ದರಿಂದ ಅಂದೇ ಮುಖ್ಯ ಶಿಕ್ಷಕರಾದ ನೂರ್ ಇಮ್ರಾನ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಡಿಡಿಪಿಐ ಜವರೇಗೌಡ ಕ್ರಮ ಕೈಗೊಂಡಿದ್ದಾರೆ.
ಹ್ಯಾಂಡ್‌ಪೋಸ್ಟ್ ಮತ್ತು ಅಂತರಸಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರನ್ನು ಕರ್ತವ್ಯಲೋಪದ ಹಿನ್ನೆಲೆ ಯಲ್ಲಿ ಅಮಾನತ್ತುಗೊಳಿಸಲಾಗಿದೆ. ತಾಲ್ಲೂಕಿನ ಬಿಇಒ, ಬಿಆರ್‌ಸಿ ತಕ್ಷಣ ವರದಿ ಕಳುಹಿಸಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ಅಮಾನತ್ತುಗೊಳಿಸಿದ್ದೇನೆ. -ಜವರೇಗೌಡ, ಡಿಡಿಪಿಐ, ಮೈಸೂರು