Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಕೊಡಗು ಜಿಲ್ಲೆಯಲ್ಲಿ ಕಾಡುತ್ತಿದೆ ರಕ್ತದ ಅಭಾವ

ನವೀನ್ ಡಿಸೋಜ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರಕ್ತದ ಅಭಾವ ತೀವ್ರವಾಗಿ ಕಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಬದಲಾದ ಜೀವನ ಶೈಲಿಯಿಂದ ಕಾಡುತ್ತಿರುವ ಕಾಯಿಲೆಗಳು, ಅಪಘಾತದಂತಹ ಪ್ರಕರಣಗಳು ಕೊಡಗಿನಲ್ಲಿ ಏರಿಕೆಯಾಗುತ್ತಿದ್ದು, ಅಗತ್ಯಕ್ಕೆ ತಕ್ಕ ರಕ್ತ ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹವಾಗದೆ ಸಮಸ್ಯೆ ಸೃಷ್ಟಿಯಾಗಿದೆ.

ವೈಜ್ಞಾನಿಕತೆ, ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದರೂ ರಕ್ತಕ್ಕೆ ಪರ್ಯಾಯ ಅಂಶ ಕಂಡುಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ. ಆಸ್ಪತ್ರೆಗಳಲ್ಲಿ ರಕ್ತದ ಶೇಖರಣೆಯಿಂದ ಜೀವ ಗಳನ್ನು ಉಳಿಸಲು ಸಾಧ್ಯವಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ.

ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆ ಹೆಚ್ಚಾಗಿತ್ತು. ಲಾಕ್‌ಡೌನ್, ಸಾಂಕ್ರಾಮಿಕ ರೋಗ ಭೀತಿ ಇವೆಲ್ಲಾ ಅಂಶಗಳು ಇದಕ್ಕೆ ಕಾರಣವಾಗಿದ್ದವು. ಆನಂತರ ದಾನಿಗಳು ಮುಂದೆ ಬಂದು ರಕ್ತ ನೀಡಿ ಸಹಕರಿಸಿದ್ದರು. ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳ ಆಯೋಜನೆಯೂ ಹೆಚ್ಚಾದವು. ಆ ಬಳಿಕ ರಕ್ತದ ಕೊರತೆ ಕೆಲವೊಮ್ಮೆ ಕಾಡಿದರೂ ಅಷ್ಟಾಗಿ ಸಮಸ್ಯೆಯಾಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಸಂಖ್ಯೆ ಕಡಿಮೆಯಾಗಿದ್ದು, ಜತೆಗೆ ರಕ್ತದ ಅವಶ್ಯಕತೆ ಇರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ದಿನಕ್ಕೆ ೨೦ ರಿಂದ ೨೫ ಮಂದಿಗೆ ರಕ್ತ ಅವಶ್ಯಕತೆ ಇರುವ ಪ್ರಕರಣಗಳು ವರದಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ದಿನಕ್ಕೆ ೧೦೦ ಯೂನಿಟ್ ರಕ್ತ ಅತ್ಯವಶ್ಯಕವಾಗಿದೆ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಏಕೈಕ ರಕ್ತನಿಽ ಕೇಂದ್ರವಿದ್ದು, ಇಲ್ಲಿ ಮಾತ್ರ ರಕ್ತ ಸಂಗ್ರಹಿಸಲು ಪೂರಕ ತಂತ್ರಜ್ಞಾನಗಳಿವೆ.

ಲಭ್ಯವಾದ ರಕ್ತದ ಪೈಕಿ ಹೆಚ್ಚಾಗಿ ಹೆರಿಗೆ, ಮಹಿಳೆಯರಿಗೆ ರಕ್ತ ಹೀನತೆ ಪ್ರಕರಣಗಳಿಗೆ ಶೇ. ೫೦ರಷ್ಟು ರಕ್ತ ಬೇಕಾಗುತ್ತದೆ. ಉಳಿ ದಂತೆ ಅಪಘಾತ ಇನ್ನಿತರ ಪ್ರಕರಣಗಳಿಗೆ ರಕ್ತ ನೀಡಲಾಗುತ್ತಿದೆ. ಜಿಲ್ಲೆಗೆ ಎಲ್ಲಾ ವಿಧದ ಗುಂಪಿನ ರಕ್ತದ ಅವಶ್ಯಕತೆ ಇದ್ದು, ಅಗತ್ಯ ವಿರುವಷ್ಟು ರಕ್ತ ಸದ್ಯ ಸಂಗ್ರಹಗೊಳ್ಳುತ್ತಿಲ್ಲ.

೨ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮಾಸಿಕ ೨೦೦ ಯೂನಿಟ್ ರಕ್ತದ ಅವಶ್ಯಕತೆ ಇತ್ತು. ಆದರೆ, ಇದೀಗ ೪೫೦ ರಿಂದ ೫೦೦ ಯೂನಿಟ್ ರಕ್ತದ ಅವಶ್ಯಕತೆ ಸೃಷ್ಟಿಯಾಗಿದೆ. ಒಂದು ಯೂನಿಟ್‌ನಲ್ಲಿ ೩೫೦ ಎಂ. ಎಲ್. ರಕ್ತ ಇರುತ್ತದೆ. ಜಿಲ್ಲಾ ಆಸ್ಪತ್ರೆ ಬೆಳವಣಿಗೆಯಾಗಿ ವಿಸ್ತಾರಗೊಂಡಿರುವುದು, ಅಕ್ಕಪಕ್ಕದ ಜಿಲ್ಲೆಗಳಿಂದ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿರುವುದು, ಹೊರ ರಾಜ್ಯದ ಕಾರ್ಮಿ ಕರ ಸಂಖ್ಯೆಯೂ ಹೆಚ್ಚುತ್ತಿರುವುದು ಕೂಡ ರಕ್ತದ ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.

ರಕ್ತದಾನ ಶಿಬಿರಗಳನ್ನು ಸಂಘ-ಸಂಸ್ಥೆಗಳು ಆಯೋಜನೆ ಮಾಡುವ ಮೂಲಕ ಎದುರಾಗಿರುವ ರಕ್ತದ ಕೊರತೆಯನ್ನು ನೀಗಿಸಬೇಕೆಂದು ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮನವಿ ಮಾಡಿದ್ದಾರೆ.

ರೋಗಿಗಳ ಕಡೆಯವರಿಂದಲೇ ಇದೀಗ ರಕ್ತವನ್ನು ಪಡೆಯ ಲಾಗುತ್ತಿದ್ದು, ಅಗತ್ಯ ಗ್ರೂಪ್‌ನ ರಕ್ತ ದೊರೆಯದಿದ್ದಲ್ಲಿ ಪರದಾ ಡಬೇಕಾದ ಸ್ಥಿತಿ ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ಸ್ವಯಂಪ್ರೇರಿತ ವಾಗಿ ಕೆಲವೊಬ್ಬರು ಬಂದು ರಕ್ತದಾನ ಮಾಡುತ್ತಾರೆ. ಆದರೆ ನಿರೀಕ್ಷಿತ ಪ್ರಮಾಣದ ರಕ್ತ ಸಂಗ್ರಹವಾಗುತ್ತಿಲ್ಲ. ಸಂಘ-ಸಂಸ್ಥೆ ಗಳು ರಕ್ತದಾನ ಶಿಬಿರ ಆಯೋಜಿಸಿದರೆ ರಕ್ತದ ಕೊರತೆ ನೀಗಿಸಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದೆ. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ತಿಂಗಳಿಗೆ ಕನಿಷ್ಠ ೧೦ ಕಡೆಗಳಲ್ಲಿ ಶಿಬಿರ ನಡೆದರೆ ಒಂದು ಹಂತದ ಕೊರತೆಯನ್ನು ನೀಗಿಸಬಹುದಾಗಿದೆ. ಒಬ್ಬ ವ್ಯಕ್ತಿಯಿಂದ ಒಂದು ಯೂನಿಟ್ ಅಂದರೆ ೩೫೦ ಎಂ. ಎಲ್. ರಕ್ತವನ್ನು ಪಡೆದುಕೊಳ್ಳುತ್ತೇವೆ. ಆಯೋಜನೆ ಸಂದರ್ಭದಲ್ಲಿ ವೈದ್ಯಕೀಯ ನೆರವನ್ನೂ ಸಂಪೂರ್ಣವಾಗಿ ನೀಡುತ್ತೇವೆ. –ಡಾ. ಕರುಂಬಯ್ಯ, ಮುಖ್ಯಸ್ಥ, ರಕ್ತನಿಧಿ ಕೇಂದ್ರ

ಯಾರು ರಕ್ತದಾನ ಮಾಡಬಹುದು?
ರಕ್ತಕ್ಕೆ ಪರ್ಯಾಯ ಅಂಶಗಳಿಲ್ಲ. ಈ ಹಿನ್ನೆಲೆಯಲ್ಲಿ ರಕ್ತಕ್ಕೆ ಹೆಚ್ಚಿನ ಮಹತ್ವವಿದೆ. ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ರಕ್ತ ನೀಡುವುದರಿಂದ ದೇಹದ ಆರೋಗ್ಯ ಸಮತೋಲನದಲ್ಲಿರುತ್ತದೆ. ಬಿಪಿ, ಶುಗರ್, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು. ರಕ್ತದಾನವು ಕ್ಯಾನ್ಸರ್ ನಿರೋಧಕವೂ ಆಗಿದೆ ಎಂಬ ಅಂಶ ಸಂಶೋಧನೆಯಿಂದ ತಿಳಿದು ಬಂದಿದೆ.

 

Tags: