Mysore
22
overcast clouds

Social Media

ಸೋಮವಾರ, 21 ಸೆಪ್ಟೆಂಬರ್ 2026
Light
Dark

ಕಸ್ತೂರಿ ರಂಗನ್ ವರದಿ: ದೇವರ ಕಾಡುಗಳಿಗೂ ಆತಂಕ

ಲಕ್ಷ್ಮೀ ಕಾಂತ್ ಕೊಮಾರಪ್ಪ

ಕೃಷಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ತಿದ್ದುಪಡಿ ತರಲು ಆಗ್ರಹ 

ಸೋಮವಾರಪೇಟೆ: ಕೊಡಗು ಜಿಲ್ಲೆಯ ಅರ್ಧದಷ್ಟು ಭಾಗ ಪಶ್ಚಿಮಘಟ್ಟ ಭೂ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಆಚಾರ-ವಿಚಾರ, ಪದ್ಧತಿ ಮತ್ತು ಸಂಸ್ಕೃತಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಸಾವಿರಾರು ವರ್ಷಗಳಿಂದ ಸ್ಥಳೀಯ ಸಮುದಾಯಗಳು ಸಂರಕ್ಷಿಸಿಕೊಂಡು ಬಂದಿರುವ ದೇವರ ಕಾಡುಗಳ ತವರು ಕೊಡಗು. ಆದರೆ ಇದೀಗ ಕೇಂದ್ರ ಸರ್ಕಾರದ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆ ಜಿಲ್ಲೆಯ ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ದೇವರ ಕಾಡುಗಳ ಮೇಲೂ ಪರಿಣಾಮ ಬೀರುವ ಆತಂಕ ಜನರಲ್ಲಿ ಮೂಡಿದೆ.

ಜಿಲ್ಲೆಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ದೇವರ ಕಾಡುಗಳು ಸ್ಥಳೀಯರ ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಜೀವವೈವಿಧ್ಯದ ತಳಹದಿಯಾಗಿವೆ. ಗಿಡಮೂಲಿಕೆಗಳು, ಪುರಾತನ ವೃಕ್ಷಗಳು ಹಾಗೂ ಜಲಮೂಲಗಳ ತಾಣವಾಗಿರುವ ಈ ಪ್ರದೇಶಗಳಲ್ಲಿ ಮರ ಕಡಿಯುವುದು ಮತ್ತು ಅತಿಕ್ರಮಣ ಮಾಡುವುದನ್ನು ತಲೆತಲಾಂತರಗಳಿಂದ ನಿಷೇಧಿಸಲಾಗಿದೆ. ಆದರೆ ಕಸ್ತೂರಿರಂಗನ್ ವರದಿ ಅನ್ವಯ ಕೊಡಗಿನ ೫೩ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ ಎನ್ನಲಾಗುತ್ತಿದ್ದು, ಇದರಿಂದ ದೇವರ ಕಾಡುಗಳ ಗಡಿಭಾಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಂಪ್ರದಾಯಿಕ ಪೂಜೆ, ವಾರ್ಷಿಕ ಹಬ್ಬ-ಉತ್ಸವ, ಕಿರು ರಸ್ತೆ ನಿರ್ಮಾಣ ಅಥವಾ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳಿಗೆ ಕಠಿಣ ನಿಯಮಗಳು ತೊಡಕಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಕೊಡಗಿನ ಜನರ ಬದುಕು ಕಾಫಿ, ಏಲಕ್ಕಿ, ಮೆಣಸು ಹಾಗೂ ಭತ್ತದ ಕೃಷಿಯನ್ನು ಪ್ರಮುಖವಾಗಿ ಅವಲಂಬಿಸಿದೆ. ದೇವರ ಕಾಡುಗಳು ಕಾಫಿ ತೋಟಗಳ ಸಮೀಪದಲ್ಲೇ ಇರುವುದರಿಂದ ಹೊಸ ಕಟ್ಟುಪಾಡುಗಳು ಜಾರಿಯಾದರೆ ತೋಟಗಳಲ್ಲಿ ಕೃಷಿ ಚಟುವಟಿಕೆ ನಡೆಸುವುದು, ಅತಿವೃಷ್ಟಿಯಿಂದ ಹಾನಿಗೊಳಗಾದ ತಡೆಗೋಡೆಗಳನ್ನು ನಿರ್ಮಿಸುವುದು ಹಾಗೂ ಖಾಸಗಿ ಜಮೀನುಗಳಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೂ ಅನುಮತಿ ಪಡೆಯುವುದು ಕಷ್ಟವಾಗ ಬಹುದು ಎಂಬ ಆತಂಕ ಕೃಷಿಕರಲ್ಲಿದೆ.

ಕೇಂದ್ರದ ಅಧಿಸೂಚನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವೂ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದು, ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ನಿರಾಕರಿಸಿದೆ. ಸ್ಥಳೀಯರ ಅಭಿಪ್ರಾಯ ಆಲಿಸದೆ, ಪ್ರಮುಖ ಕೃಷಿ ಹಾಗೂ ಜನವಸತಿ ಪ್ರದೇಶಗಳನ್ನು ಒಳಗೊಂಡಿರುವ ಕರಡನ್ನು ತಿರಸ್ಕರಿಸಬೇಕು ಅಥವಾ ಅಗತ್ಯ ತಿದ್ದುಪಡಿ ಮಾಡಬೇಕು ಎಂಬ ನಿಲುವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿದೆ.

ದೇವರ ಕಾಡುಗಳ ಪಾವಿತ್ರ್ಯ ಹಾಗೂ ಪರಿಸರ ಸಂರಕ್ಷಣೆಯನ್ನು ಕಾಪಾಡುವುದರ ಜತೆಗೆ ಕೊಡಗಿನ ಕೃಷಿ, ಜನವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಧಕ್ಕೆಯಾಗದಂತೆ ಕಸ್ತೂರಿರಂಗನ್ ವರದಿಯಿಂದ ಸೂಕ್ತ ವಿನಾಯಿತಿ ನೀಡಬೇಕು ಎಂಬುದು ಜಿಲ್ಲೆಯ ಜನರ ಪ್ರಮುಖ ಆಗ್ರಹವಾಗಿದೆ.

” ಪರಿಸರ ಸಂರಕ್ಷಣೆ ಹೆಸರಿನಲ್ಲಿ ಸ್ಥಳೀಯ ಜನರ ಜೀವನೋಪಾಯಕ್ಕೆ ಮಾರಕವಾಗುವ ಯಾವುದೇ ಕಾನೂನನ್ನು ಯಥಾವತ್ತಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಕೊಡಗಿನ ಭೌಗೋಳಿಕತೆ, ಪ್ರವಾಸೋದ್ಯಮ, ಕೃಷಿ ಹಾಗೂ ಸ್ಥಳೀಯ ಸಮುದಾಯಗಳು ಪೂಜಿಸುವ ಪವಿತ್ರ ದೇವರ ಕಾಡುಗಳ ಸಾಂಪ್ರದಾಯಿಕ ಹಕ್ಕುಗಳಿಗೆ ಧಕ್ಕೆಯಾಗದಂತೆ ಕರಡು ಅಧಿಸೂಚನೆಯಲ್ಲಿ ಸೂಕ್ತ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು.”

-ಯದುವೀರ್ ಒಡೆಯರ್, ಸಂಸದ

ಕಸ್ತೂರಿರಂಗನ್ ವರದಿಯಲ್ಲಿರುವ ಹಲವು ನಿಯಮಗಳು ಕೊಡಗಿನ ರೈತರು ಹಾಗೂ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿವೆ. ಉಪಗ್ರಹ ಆಧಾರಿತ ಸಮೀಕ್ಷೆಗಿಂತ ಜನವಸತಿ ಮತ್ತು ಕೃಷಿ ಭೂಮಿಯನ್ನು ಹೊರಗಿಟ್ಟು ವಾಸ್ತವ ಸಮೀಕ್ಷೆ ನಡೆಸಬೇಕಿದೆ. ದೇವರ ಕಾಡುಗಳ ರಕ್ಷಣೆಯ ಜತೆಗೆ ಜನರ ಜೀವನ ಹಕ್ಕುಗಳನ್ನು ಕಾಯ್ದುಕೊಳ್ಳಲು ನಾವು ಶ್ರಮಿಸುತ್ತೇವೆ. ಸೆಪ್ಟೆಂಬರ್ ೨೧ರಿಂದ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.”

-ಡಾ.ಮಂಥರ್ ಗೌಡ, ಶಾಸಕರು, ಮಡಿಕೇರಿ

” ಕೊಡಗಿನ ಜನರು ತಲೆತಲಾಂತರಗಳಿಂದ ಪರಿಸರ ಮತ್ತು ದೇವರ ಕಾಡುಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಪಾಡಿಕೊಂಡು ಬಂದಿದ್ದಾರೆ. ಕಸ್ತೂರಿರಂಗನ್ ವರದಿ ಉಪಗ್ರಹ ನಕ್ಷೆ ಆಧಾರಿತವಾಗಿದ್ದು, ವಾಸ್ತವ ನೆಲೆಯ ಪರಿಸ್ಥಿತಿಯನ್ನು ಪರಿಗಣಿಸಿಲ್ಲ. ಸ್ಥಳೀಯ ಕೃಷಿಕರ ಬದುಕು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಧಾರ್ಮಿಕ ಆಚರಣೆಗಳಿಗೆ ತೊಡಕಾಗುವ ಯಾವುದೇ ನಿಯಮವನ್ನು ಒಪ್ಪಲು ಸಾಧ್ಯವಿಲ್ಲ. ಕೊಡಗಿಗೆ ಈ ವರದಿಯಿಂದ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರದ ಮೂಲಕ ಒತ್ತಡ ಹೇರಲಾಗುವುದು.”

-ಎ.ಎಸ್. ಪೊನ್ನಣ್ಣ, ಶಾಸಕರು, ವಿರಾಜಪೇಟೆ

 

 

Tags:
error: Content is protected !!