Mysore
22
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಕಾಳಗ ಕಲಿಗಳ ಹುಟ್ಟೂರು ಜಟ್ಟಿಹುಂಡಿ

ಮಹಾರಾಜರ ಅಂಗರಕ್ಷಕರಾಗಿದ್ದ ಗೌರವ
ವಜ್ರಮುಷ್ಠಿ ಕಾಳಗದ ಕಟ್ಟಾಳುಗಳಾಗಿದ್ದವರ ಊರು
ಜಟ್ಟಿಹುಂಡಿಯಲ್ಲಿದೆ ಈಗ ಜಟ್ಟಿ ಸಮುದಾಯದ ಏಕೈಕ ಕುಟುಂಬ

ಪ್ರಶಾಂತ್ ಎಸ್.
ಮೈಸೂರು: ಆ ಊರಿನ ಹೆಸರು ಕೇಳುತ್ತಿದ್ದಂತೆ ಕಣ್ಣೆದುರಿಗೆ ಸದೃಢ ಮೈಕಟ್ಟು, ಹುರಿಗೊಳಿಸಿದ ದೇಹದ, ಎದುರಾಳಿಯನ್ನು ಮಣ್ಣುಮುಕ್ಕಿಸಲು ಸಿದ್ಧವಾದ ಪೈಲ್ವಾನರು ನೆನಪಾಗುವುದು ಸಹಜ. ಏಕೆಂದರೆ ಆ ಕಾಲದಲ್ಲಿ ಅದು ಅಕ್ಷರಶಃ ಜಟ್ಟಿಗಳ ತವರೂರಾಗಿತ್ತು.

ಹಿಂದೆ ಮೈಸೂರು ಮಹಾರಾಜರಿಗೆ ಜಟ್ಟಿಗಳೇ ಮುಖ್ಯ ಅಂಗರಕ್ಷಕರಾಗಿದ್ದರು. ಹಾಗಾಗಿ ಮಹಾರಾಜರು ಅನೇಕ ಜಟ್ಟಿ ಗಳನ್ನು ಪೋಷಣೆ ಮಾಡುತ್ತಿದ್ದರು. ಜಟ್ಟಿಗಳ ಕುಟುಂಬಗಳ ಸಂಖ್ಯೆ ದೊಡ್ಡದಾಗುತ್ತಿದ್ದಂತೆ ಅವರಿಗಾಗಿ ಭೂಮಿ, ಮನೆ ಎಲ್ಲವನ್ನೂ ಮಹಾರಾಜರು ಒದಗಿಸಿದ್ದರು. ಮೈಸೂರಿನ ಹೊರವಲಯದಲ್ಲಿ ಆ ಜಟ್ಟಿಗಳು ಮತ್ತು ಅವರ ಕುಟುಂಬದ ವಾಸಕ್ಕಾಗಿ ಜಾಗವನ್ನೂ ನೀಡಿದ್ದರು. ಅದರಿಂದ ಹುಟ್ಟಿಕೊಂಡಿದ್ದೇ ‘ಜಟ್ಟಿ ಹುಂಡಿ ಗ್ರಾಮ.

ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿ ಬೋಗಾದಿಯ ಹೊರವಲಯದಲ್ಲಿ ಈಗಲೂ ಜಟ್ಟಿ ಹುಂಡಿ ಇದೆ. ಆದರೆ ಕುಸ್ತಿ ಅಥವಾ ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಳ್ಳುವವರು ವಿಶೇಷ ಈಗ ಯಾರೂ ಇಲ್ಲ. ಏಕೆಂದರೆ ಪ್ರಸ್ತುತ ಆ ಊರಲ್ಲಿ ಇರುವುದು ಏಕೈಕ ಜಟ್ಟಿ ಕುಟುಂಬ. ಕಾಲಕ್ರಮೇಣ ರಾಜವಂಶಸ್ಥರ ಸಂಪ್ರದಾಯಕ್ಕೆ ಸೀಮಿತವಾದ ವಜ್ರಮುಷ್ಟಿ ಕಾಳಗದ ತೀರ್ಪುಗಾರರಾಗಿ ಈ ಕುಟುಂಬದವರೇ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಜಟ್ಟಿಹುಂಡಿಯಲ್ಲಿ, ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದ ಜಟ್ಟಿಗಳ ಕುಟುಂಬದವರ ಪೈಕಿ ರಘುನಾಥ ಜಟ್ಟಿ ಅವರ ಕುಟುಂಬ ಮಾತ್ರ ಇದೆ. ರಘುನಾಥ ಅವರ ತಂದೆಯ ಮುತ್ತಾತ ನರಸಿಂಹ ಜಟ್ಟಿ ಅವರಿಂದ ಹಿಡಿದು ಇವರ ಕುಟುಂಬದ ಬಹುತೇಕ ಎಲ್ಲರೂ ಮೈಸೂರು ಅರಮನೆಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಜಟ್ಟಿ ಕಾಳಗದಲ್ಲಿ ಭಾಗವಹಿಸು ತಿದ್ದರು. ಅವರ ವಂಶದ ಹಿರೀಕರಾದ ಗಂಟಾ ಜಟ್ಟಪ್ಪ, ಚಿಕ್ಕಾ ಜಟ್ಟಪ, ನರಸಿಂಹ ಜಟ್ಟಪ್ಪ, ಶ್ರೀನಿವಾಸ ಜಟ್ಟಪ್ಪ ಎಲ್ಲರೂ ಜಟ್ಟಿ ಕಾಳಗದ ತೀರ್ಪುಗಾರರಾಗಿದ್ದವರು. ಪ್ರಸ್ತುತ ಅವರ ಸೋದರತ್ತೆಯವರ ಮಗನಾದ ಶ್ರೀನಿವಾಸ ಜಟ್ಟಪ್ಪ ತೀರ್ಪುಗಾರರಾಗಿದ್ದಾರೆ. ಈ ಗ್ರಾಮದಲ್ಲಿ ಇವರದ್ದೇ ಆದ ಒಂದು ಮಾರಮ್ಮನ ದೇವಾಲಯವಿದೆ. ಅದನ್ನು ಜಟ್ಟಿ ಸಮುದಾಯದವರೇ ನಿರ್ವಹಿಸುತ್ತಿದ್ದಾರೆ.

ಚಿಕ್ಕಾ ಜಟ್ಟಪ್ಪ ಅವರು ಮಹಾರಾಜರ ಅಚ್ಚುಮೆಚ್ಚಿನ ಕುಸ್ತಿಪಟುವಾಗಿದ್ದರು. ಬೇರೆ ರಾಜ್ಯಗಳಿಂದ ಬರುವ ಪ್ರಬಲ ಜಟ್ಟಿಗಳ ಎದುರು ಸಾಮಾನ್ಯವಾಗಿ ಚಿಕ್ಕಾ ಜಟ್ಟಪ್ಪ ಅವರೇ ಸೆಣಸಾಟಕ್ಕೆ ಮುಂದಾಗುತ್ತಿದ್ದರು. ಎದುರಾಳಿಗಳ ವಿರುದ್ಧ ಲೀಲಾಜಾಲವಾಗಿ ಜಯಗಳಿಸುತ್ತಿದ್ದರು ಎಂಬುದಾಗಿ ರಘುನಾಥ ಜಟ್ಟಿ ಹೇಳುತ್ತಾರೆ. ರಘುನಾಥ ಜಟ್ಟಿ ಸ್ವತಃ 1990, 1996 ಮತ್ತು 2006ರಲ್ಲಿ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸಿದ್ದಾರೆ. ಈಗ ತಮ್ಮ ಪುತ್ರ ಸುಧೀರ್ ಅವರಿಗೂ ಇವರೇ ತರಬೇತಿ ನೀಡುತ್ತಿದ್ದಾರೆ. ರಘುನಾಥ್ ಅವರ ಸೋದರತ್ತೆಯ ಮಗ ಶ್ರೀನಿವಾಸ ಜಟ್ಟಿ ಅವರು ಪ್ರಸ್ತುತ ಜಟ್ಟಿ ಕಾಳಗದ ತೀರ್ಪುಗಾರರಾಗಿದ್ದಾರೆ. ಈ ಕುಟುಂಬದವರು ಈಗಲೂ ತಮ್ಮ ಕಲೆ, ಪರಂಪರೆಯನ್ನು ಬಿಟ್ಟುಕೊಟ್ಟಿಲ್ಲ.

ಕದಂಬ, ಹೊಯ್ಸಳ ರಾಜರಿಗೂ ಅಂಗಕರಕ್ಷಕರಾಗಿದ್ದ ಜಟ್ಟಿಗಳು:
ಜಟ್ಟಿ ಸಮುದಾಯ ಕದಂಬ, ಹೊಯ್ಸಳ, ವಿಜಯನಗರ ಮರಾಠ, ಬರೋಡಾ ಸೇರಿ ಹಲವಾರು ಸಂಸ್ಥಾನದ ಮಹಾರಾಜರುಗಳ ಅಂಗರಕ್ಷಕರಾಗಿ ಕೂಡ ಸೇವೆ ಸಲ್ಲಿಸಿದ ಗೌರವ ಹೊಂದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಇಂಡಿಗ ನಾಳೆ ಎಂಬ ಗ್ರಾಮಕ್ಕೆ ಬಂದು ಚೌಡೇಶ್ವರಿ ದೇಗುಲ ಕಟ್ಟಿ ಸಮರ ಕಲೆಯನ್ನು ಪರಿಚಯಿಸಿದರು. ಬಹುತೇಕರು ಕೃಷಿ, ವ್ಯಾಪಾರ, ಸರ್ಕಾರಿ, ಖಾಸಗಿ ಕೆಲಸ, ಕೈಗಾರಿಕೆ ಮತ್ತಿತರ ಉದ್ಯೋಗದಲ್ಲಿ ತೊಡಗಿಸಿಕೊಂಡರು. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದ್ದಾರೆ. ಕೆಲವರು ಈಗಲೂ ಆಸಕ್ತರಿಗೆ ಸಮರಕಲೆ ಕಲಿಸುವ ಕುಲದ ಕಾಯಕದಲ್ಲಿ ನಿರತರಾಗಿದ್ದಾರೆ. ‘ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಬೆಂಗಳೂರು, ಶ್ರೀರಂಗಪಟ್ಟಣ ಎಲ್ಲೆಡೆ ಸೇರಿ ರಾಜ್ಯಾದ್ಯಂತ ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿರಬಹುದು’ ಎನ್ನುತ್ತಾರೆ ರಘುನಾಥ ಜಟ್ಟಿ ಅವರು.

‘ಮಹಾರಾಜರನ್ನು ನೆನೆಯದೆ…
ರಾಜರು ನಮಗೆ ಆಶ್ರಯ ನೀಡಿದ್ದರು. ಇವತ್ತಿಗೂ ಹಿಂದಿನ ಮಹಾರಾಜರನ್ನು ನೆನೆಯದೆ ನಾವು ಊಟ ಮಾಡುವುದಿಲ್ಲ. ಅವರ ಜಮೀನನ್ನು ಯಾರೋ ಕಬಳಿಸುತ್ತಿದ್ದಾರಂತೆ. ನಮ್ಮ ಸಮುದಾಯದ ವಾಸ್ತವ್ಯಕ್ಕಾದರೂ ಆ ಜಾಗ ನೀಡಿದರೆ ಎಷ್ಟೋ ಅನುಕೂಲವಾಗುತ್ತದೆ.
-ರಘುನಾಥ್ ಜಟ್ಟಿ, ಹಿರಿಯ ತೀರ್ಪುಗಾರರು.

ರಘುನಾಥ್ ಹೇಳಿದ ಬದುಕಿನ ಸತ್ಯಗಳು:
ರಘುನಾಥ್ ಜಟ್ಟಿ 70 ವರ್ಷ ವಯೋಮಾನದವರು. ಆದರೆ ಈಗಲೂ ಸದೃಢ ಮೈಕಟ್ಟು, ಗಟ್ಟಿ ಧ್ವನಿ ಅವರದ್ದು. ರಘುನಾಥ್ ಇದೀಗ ಮೈಸೂರು ಬೋಗಾದಿ ರಸ್ತೆಯಲ್ಲಿರುವ ಜಟ್ಟಿಹುಂಡಿ ಗ್ರಾಮದಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದು, ‘ಆಂದೋಲನ’ ದಿನಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದೆ. ಅಂದು ರಾಜರು ಕೊಟ್ಟಿದ್ದ ಜಾಗದಲ್ಲಿ ಇಂದು ವಾಸವಿದ್ದು, ಅದು ಇನ್ನು ಕೂಡ ನನ್ನ ಹೆಸರಿಗೆ ಖಾತೆ ಆಗಿಲ್ಲ. ಒಂದಿಷ್ಟು ಜನರು ಇದನ್ನೇ ನೆಪವಾಗಿಟ್ಟುಕೊಂಡು ನನ್ನನ್ನು ಊರಿನಿಂದ ಹೊರದಬ್ಬುವ ಪ್ರಯತ್ನವನ್ನೂ ಮಾಡಿದ್ದರು. ಆದರೂ ಆ ತೊಂದರೆಗಳನ್ನೆಲ್ಲ ಆತ್ಮಸ್ಥೆರ್ಯದಿಂದ ಎದುರಿಸಿ, ಇಂದಿಗೂ ಇದೇ ಊರಿನಲ್ಲಿ ವಾಸ ಮಾಡುತ್ತಿದ್ದೇನೆ ಎಂದು ಗದ್ಗದಿತರಾದರು.

ಜಟ್ಟಿಗಳ ಮೂಲ ಗುಜರಾತ್:
ಜಟ್ಟಿಗಳನ್ನು ‘ಜೇಷ್ಠ ಮಲ್ಲ’, ‘ಮೋಡ ಬ್ರಾಹ್ಮಣರು ಎಂದು ಕರೆಯಲಾಗುತ್ತಿತ್ತು. ‘ಜೇಷ್ಠ ಎಂಬ ಪದ ಜನರ ಬಾಯಿಮಾತಿನಲ್ಲಿ ‘ಜೇಠಿ’ಯಾಗಿ ಕಾಲಕ್ರಮೇಣ ಜೆಟ್ಟಿಯಾಗಿ ಬದಲಾಗಿರಬಹುದು. ‘ಮಲ್ಲ’ ಪದ ಕುಸ್ತಿಯನ್ನು, ‘ಜೇಷ್ಠ ಪದ ಹಿರಿತನವನ್ನು ಸಂಕೇತಿಸುತ್ತದೆ. ಜಟ್ಟಿ ಸಮುದಾಯದವರು ಗುಜರಾತ್‌ನ ಮೊಡೇರಾ ಪ್ರಾಂತ್ಯದ ದೇಲ್ಮಲ್‌ ಮೂಲದವರು. ‘ಈ ಪ್ರಾಂತ್ಯದಲ್ಲಿ 1025ರಲ್ಲಿ ಆಡಳಿತ ನಡೆಸುತಿದ್ದ ರಾಜ ರಣಜಿತ್‌ ಸಿಂಗ್ ವಿರುದ್ಧ ಅಲ್ಲಾವುದ್ದೀನ್ ಯುದ್ಧ ಸಾರಿದ ರಣಜಿತ್ ಸಿಂಗ್, ಜೇಷ್ಠ ಮಲ್ಲರ ಸಲಹೆಯನ್ನು ಧಿಕ್ಕರಿಸಿ ಯುದ್ಧಕ್ಕಿಳಿದನಂತೆ. ಅದರಿಂದ ರಾಜನಿಗೆ ಸೋಲು ಉಂಟಾಯಿತು ಎನ್ನಲಾಗಿದೆ. ಅದರಿಂದ ಬೇಸತ್ತ ಜಟ್ಟಿ ಸಮುದಾಯದ ಒಂದು ಗುಂಪು ರಾಜಸ್ಥಾನದತ್ತ, ಉಳಿದವರು ದಕ್ಷಿಣ ಭಾರತದ ಕಡೆಗೆ ವಲಸೆ ಬಂದರು. ಏಳೆಂಟು ತಲೆಮಾರುಗಳ ಹಿಂದೆ ಹೀಗೆ ವಲಸೆ ಬಂದವರು ಮೊದಲು ಆಂಧ್ರಪ್ರದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ವರ್ಷಗಳಿದ್ದು, ಬಳಿಕ ತಮಿಳುನಾಡು, ಕರ್ನಾಟಕಕ್ಕೆ ಬಂದು ನೆಲೆ ನಿಂತರು.

 

Tags: