ಚಿರಂಜೀವಿ ಸಿ.ಹುಲ್ಲಹಳ್ಳಿ
ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ಶ್ರೀ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯ ರಥೋತ್ಸವ
ಮೈಸೂರು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ಶಿವಯೋಗಿಗಳ ಉತ್ಸವ ಮೂರ್ತಿಯ ರಥೋತ್ಸವವು ಮಂಗಳವಾರ ಸಹಸ್ರಾರು ಜನರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮೈಸೂರು ಸುತ್ತಮುತ್ತಲಿನ ಹಳ್ಳಿಗಳಿಂದ ಜಮಾಯಿಸಿದ್ದ ಸಾವಿರಾರು ಜನರು ರಥಕ್ಕೆ ಹಣ್ಣು-ಜವನ ಎಸೆದು ಕೃತಾರ್ಥರಾದರು. ಸುತ್ತೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳು ನಾಡು ರಾಜ್ಯಗಳ ೫೦ಕ್ಕೂ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನ ಮಾಡಿದವು.
ಬೆಳಿಗ್ಗೆ ೪ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ೬ ಗಂಟೆಗೆ ಮಠದ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಮಂತ್ರ ಮಹರ್ಷಿಗಳ ಗದ್ದುಗೆಗೆ ರುದ್ರಾಭಿ ಷೇಕ ನೆರವೇರಿಸಲಾಯಿತು. ನಂತರ ೬.೩೦ಕ್ಕೆ ಸ್ನೇಹ-ಸೌಹಾರ್ದ- ಶಾಂತಿ- ಪ್ರಾರ್ಥನಾ ಪಥ ಸಂಚಲನ ನೆರವೇರಿತು. ಬೆಳಿಗ್ಗೆ ೯ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. ೧೦.೩೦ಕ್ಕೆ ಶಿವಯೋಗಿಗಳ ಉತ್ಸವಮೂರ್ತಿ ಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಅರ್ಚ ಕರು ಪೂಜಾ ವಿಧಿವಿಧಾನ ಪೂರೈಸಿದರು.
ಬೆಳಿಗ್ಗೆ ೧೧.೧೦ಕ್ಕೆ ಮಾಜಿ ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ವಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಟಿ.ಎಸ್.ಶ್ರೀವತ್ಸ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಹಗ್ಗ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರ ಜಯ ಘೋಷ ಮುಗಿಲುಮುಟ್ಟಿತ್ತು. ಜಾನಪದ ಕಲಾ ತಂಡಗಳೊಂದಿಗೆ ಪುಷ್ಪಾಲಂಕೃತ ರಥವು ಸುತ್ತೂರಿನ ಪ್ರಮುಖ ಬೀದಿಗಳಲ್ಲಿ ಸಾಗಿತು.
ಶಿವರಾತ್ರೀಶ್ವರ ಚಿತ್ರಪಟವನ್ನು ಹೊತ್ತ ಯಾಂತ್ರಿಕೃತ ಆನೆಯ ನಡಿಗೆ, ತಮಟೆ, ನಗಾರಿ, ಮಂಗಳವಾದ್ಯ, ಪೂಜಾ ಕುಣಿತ, ಹುಲಿ ಆಟ, ಗಾರುಡಿಗೊಂಬೆ, ಕಲಾತಂಡಗಳ ನೃತ್ಯ, ಗೊರವರ ಕುಣಿತ, ವಿರಗಾಸೆ ಸೇರಿದಂತೆ ೫೦ಕ್ಕೂ ಹೆಚ್ಚಿನ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದ್ದಲ್ಲದೆ, ದಸರಾ ಜಂಬೂಸವಾರಿಯನ್ನು ನೆನಪಿಸಿದವು. ರಥೋತ್ಸವವು ಪ್ರಮುಖ ಬೀದಿಗಳಲ್ಲಿ ಸಾಗಿ ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಮತ್ತೆ ಕರ್ತೃ ಗದ್ದುಗೆಗೆ ಮರಳಿತು.
ನವಿಲೂರಿನ ಚಿಕ್ಕಣ್ಣ, ಚನ್ನ ಒಡೆಯನಪುರ ಚಿನ್ನಪ್ಪ, ಮಹದೇವು, ಎಸ್.ಎಂ.ರಮೇಶ್, ಸುತ್ತೂರು ನಂಜಪ್ಪ, ನಾಗರಾಜು ಮೈಸೂರು ಅವರ ನಾದಸ್ವರ, ಮೈಸೂರಿನ ಪಿ.ಕುಮಾರ್, ಕೆ. ಆರ್.ಪೇಟೆ ಪ್ರಸನ್ನ ಕುಮಾರ್, ಶ್ರೀರಂಗ ಪಟ್ಟಣದ ಗುರುಪ್ರಸಾದ್ ತಂಡದ ಸ್ಯಾಕ್ಸೋಫೋನ್ ವಾದನ ಗಮನ ಸೆಳೆಯಿತು.
ನಾಗಮಂಗಲದ ಮಹದೇವಪ್ಪ ಮತ್ತು ಮಹೇಶ್ ಕಿರಾಳು ನೇತೃತ್ವದ ವೀರಗಾಸೆ ನೃತ್ಯ, ಬೀಡನಹಳ್ಳಿ ಶಿವು, ಯಡಹಳ್ಳಿ ಪ್ರಕಾಶ್ ಪೂಜಾಕುಣಿತ, ನಂಜನಗೂಡು ಮಹೇಶ್ ತಂಡದ ಗಾರುಡಿ ಗೊಂಬೆ, ಮೈಸೂರು ಚಿನ್ನ, ನಾಗೇಶ್ ನೇತೃತ್ವದ ತಂಡದ ತಮಟೆ, ನಗಾರಿ, ಶಿವಮೊಗ್ಗದ ರಾಘವೇಂದ್ರರ ಜಾಂಜ್ ಮೇಳ, ಹೊಸದುರ್ಗದ ಪ್ರಸನ್ನ ಕುಮಾರ್ ಮ್ಯೂಸಿಕ್ ಡ್ರಮ್ಸ, ಬೆಂಡೆಕಟ್ಟೆ ಮಹೇಶಪ್ಪ, ಚಾಮರಾಜ ನಗರದ ಮಹೇಶ್ ಡೊಳ್ಳು ಕುಣಿತ, ಕೊಟ ಮಯ್ಯರ ತಮಟೆ, ರಾಮನಗರ ಜಿಯ ಮಾಗಡಿಯ ಇಂದಿರಾ, ಮತ್ತು ಉಡುಪಿಯ ಚೆಂಡೆ ಬಳಗದ ಚೆಂಡೆ ನೃತ್ಯ ಯುವ ಸಮೂಹವನ್ನು ಕುಣಿದು ಕುಪ್ಪಳಿ ಸುವಂತೆ ಮಾಡಿತು.
ತಳಗವಾಡಿ ಹೊನ್ನಯ್ಯ ತಂಡ ಕೋಲಾಟ, ತಾಯೂರು ಸಿದ್ದರಾಜು ಮರಗಾಲು, ಮೈಸೂರು ರವಿಚಂದ್ರ ಮತ್ತು ಕೆಂಪಿ ಸಿದ್ದನ ಹುಂಡಿ ಮಹದೇವು ಕಂಸಾಳೆ ನೃತ್ಯ, ಧಾರ ವಾಡದ ಗಂಗಯ್ಯ ಈರಯ್ಯ ಖಾನಾಪರ ಮಠ ದಾನಪಟ್ಟಿ, ಸುತ್ತೂರಿನ ಮಹದೇವ ನಾಯ್ಕ ತಂಡ ವೀರ ಮಕ್ಕಳ ಕುಣಿತ, ಹೆಬ್ಬಳ್ಳಿ ಅಡಿಯಪ್ಪ ಮಾಯಪ್ಪ ದಾಳಪಟ, ಬಾಗಲಕೋಟೆಯ ಜಗದೇವಪ್ಪ ಶಿವಲಿಂಗಪ್ಪ ಕರಡಿ ಮಜಲು, ಚಾಮರಾಜ ನಗರದ ಗೌರಿ ಶಂಕರ ತಂಡ ಗೊರವರ ಕುಣಿತ, ಮಂಗಳೂರಿನ ಮಂಜು ನೇತೃ ತ್ವದ ತಂಡ ನಾಸಿಕ್ ಡೋಲ್ ಮತ್ತು ಮಹಾ ರಾಷ್ಟ್ರದ ಎಂ.ಆರ್.ಪಾಟೀಲ್ ತಂಡ ಜಾನ್ ಪಥಕ್ ಜಾನಪದ ವೈಭವವನ್ನು ಅನಾವರಣಗೊಳಿಸಿದವು.