Mysore
23
broken clouds
Light
Dark

ಬ್ಯಾಂಕುಗಳ ಠೇವಣಿ ಮತ್ತು ಸಾಲ ಸಂಬಂಧ ಸುಸ್ಥಿರವಾಗಿದೆಯೇ?

ಪ್ರೊ.ಆರ್.ಎಂ.ಚಿಂತಾಮಣಿ

ಬೇರೆಯವರ ಹಣವನ್ನು ತನ್ನದೆನ್ನುವಂತೆ ವ್ಯವಹರಿಸುವವನೇ (ಸಾಲಕೊಡುವವನೇ) ಬ್ಯಾಂಕರ್’ ಎನ್ನುವ ವಾಕರನ ಮಾತು ಬಹಳ ಹಳೆಯದು. ಇಂದಿಗೂ ಎಂದೆಂದಿಗೂ ಸತ್ಯ. ಬ್ಯಾಂಕುಗಳಲ್ಲಿಯ ಗ್ರಾಹಕರ ಠೇವಣಿಗಳೇ ಸಾಲ ಕೊಡಲು ಆಧಾರ, ಬ್ಯಾಂಕುಗಳ ಷೇರು ಬಂಡವಾಳ ಇಡೀ ಬ್ಯಾಂಕಿಂಗ್ ವ್ಯವಹಾರದಲ್ಲಿ ನಗಣ್ಯವೆನ್ನುವಷ್ಟರ ಮಟ್ಟಿಗೆ ಕಡಿಮೆ ಇರುತ್ತದೆ. ವಾರ್ಷಿಕ ಲಾಭದಿಂದ ತೆಗೆದಿಟ್ಟನಿಧಿಗಳೂ ಇಲ್ಲಿ ಉಪಯೋಗವಾಗುತ್ತವೆ. ರಿಸರ್ವ್ ಬ್ಯಾಂಕಿನ ಹಣಕಾಸು ನೀತಿಯಂತೆ ಬ್ಯಾಂಕುಗಳ ಒಟ್ಟು ಠೇವಣಿಗಳಲ್ಲಿ ನಿತ್ಯದ ಹಣಕಾಸು (ನಗದು) ವ್ಯವಹಾರಕ್ಕಾಗಿ ಶೇ.4.5ರಷ್ಟು ಮೊತ್ತವನ್ನು ನಗದು ನಿಧಿ ಪ್ರಮಾಣವೆಂದು ಯಾವಾಗಲೂ ತಮ್ಮಲ್ಲಿ ನಗದು ಮತ್ತು ರಿಸರ್ವ್ ಬ್ಯಾಂಕಿನಲ್ಲಿ ಚಾಲ್ತಿ ಖಾತೆಯಲ್ಲಿ ಉಳಿಸಿಕೊಂಡಿರಲೇಬೇಕು. ಇದರೊಡನೆ ಠೇವಣಿಗಳ ಭದ್ರತೆಗಾಗಿ ಅದೇ ನೀತಿಯಂತೆ ಶಾಸನಬದ್ದ ನಗದೀಕರಿ ಸಬಹುದಾದ ನಿಧಿ ಪ್ರಮಾಣವಾಗಿ ಶೇ.18ರಷ್ಟನ್ನು ಸದ್ಯ ಸರ್ಕಾರದ ಟ್ರೆಜರಿ ಬಿಲ್ಲುಗಳು ಮತ್ತು ಸರ್ಕಾರದ ಅಲ್ಪಾವಧಿ ಬಾಂಡುಗಳಲ್ಲಿ ಹೂಡಿಕೆ ಮಾಡಿರಬೇಕು. ಇದರಿಂದ ಸಣ್ಣ ಪ್ರಮಾಣದಲ್ಲಿ ಬಡ್ಡಿ ಬರುತ್ತದೆ.

ಇದೆಲ್ಲದರ ಪರಿಣಾಮವಾಗಿ ಬ್ಯಾಂಕುಗಳಲ್ಲಿ ವಿವಿಧ ಸಾಲಗಳನ್ನು ಒದಗಿಸಲು ಒಟ್ಟು ಠೇವಣಿಗಳ ಶೇ.77.5ರಷ್ಟು ಮಾತ್ರ ಉಳಿಯುತ್ತದೆ. ಆದ್ದರಿಂದ ಬ್ಯಾಂಕುಗಳ ಒಟ್ಟು ಸಾಲಗಳು ಒಟ್ಟು ಠೇವಣಿಗಳ ಶೇ.78.0ಯಿಂದ ಶೇ.80.0ವರೆಗೆ ಇದ್ದರೆ ಸುಸ್ಥಿರ (Sustainable) ಸಾಲ ನೀತಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದರಲ್ಲಿ ಸ್ವಲ್ಪ ಆಚೆಈಚೆ ಇದ್ದರೂ ಹೊಂದಾಣಿಕೆಗಳಿಗೆ ಅವಕಾಶವಿರುತ್ತದೆ. ಬ್ಯಾಂಕ್ ಠೇವಣಿಗಳು ಹೆಚ್ಚಾದಂತೆ ಅವುಗಳ ಹಿಂದೆಯೇ ಬ್ಯಾಂಕ್ ಸಾಲಗಳೂ ಹೆಚ್ಚಾಗುತ್ತಿದ್ದರೆ ಅದನ್ನೂ ತಾಳಿಕೊಳ್ಳಬಹುದಾದ ಸ್ಥಿತಿ ಎಂದು ಕರೆಯಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಠೇವಣಿಗಳ ಬೆಳವಣಿಗೆ ವೇಗಕ್ಕಿಂತ ಬ್ಯಾಂಕ್ ಸಾಲಗಳ ಬೆಳವಣಿಗೆ ವೇಗ ಹೆಚ್ಚಾಗಿದೆ ಎಂದು ಅಧಿಕೃತ ವರದಿಗಳು ಹೇಳುತ್ತವೆ. ಕೋವಿಡ್-19 ನಂತರದ ವರ್ಷಗಳಲ್ಲಿ ಬ್ಯಾಂಕ್ ಠೇವಣಿಗಳ ಬೆಳವಣಿಗೆ ಒಂದು ಮಟ್ಟದಲ್ಲಿದ್ದರೆ, ಸಾಲಗಳ ಬೆಳವಣಿಗೆ ವೇಗ ಹೆಚ್ಚುತ್ತಲೇ ಇದ್ದುದು ಒಂದೆಡೆಯಾದರೆ ಇನ್ನೊಂದೆಡೆ ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ ಅಗ್ಗದ ಠೇವಣಿಗಳಾದ ‘ಕಾಸಾ’ ಎಂದೇ ಕರೆಯಲ್ಪಡುವ ಕರೆಂಟ್ ಅಕೌಂಟ್ ಮತ್ತು ಸೇವಿಂಗ್ ಅಕೌಂಟ್ ಠೇವಣಿಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಇವೆರಡೂ ಬೆಳವಣಿಗೆಗಳು ಬ್ಯಾಂಕಿಂಗ್ ವಿಶ್ಲೇಷಕರಲ್ಲಿ ಆತಂಕ ಮೂಡಿಸಿವೆ.

2021-22ರಲ್ಲಿ ಬ್ಯಾಂಕ್ ಸಾಲಗಳ ಬೆಳವಣಿಗೆ ವಾರ್ಷಿಕ ಶೇ.11.2 ಇದ್ದರೆ 2022-23ರ ಕೊನೆಯಲ್ಲಿ ಇದು ಶೇ.15.4ಕ್ಕೆ ಏರಿತ್ತು. ಆಗಸ್ಟ್ 2024ರ ಹೊತ್ತಿಗೆ ಇದು ಶೇ.15.1ರ ಮೇಲೆಯೇ ಮುಂದುವರಿದಿದೆ ಎಂಬುದನ್ನು ಅಧಿಕೃತ ಅಂಕಿ ಸಂಖ್ಯೆಗಳಿಂದ ತಿಳಿದುಕೊಳ್ಳಬಹುದು. ಆದರೆ ಇದೇ ಅವಧಿಗಳಲ್ಲಿ ಬ್ಯಾಂಕ್ ಠೇವಣಿಗಳ ಬೆಳವಣಿಗೆಯು ಅನುಕ್ರಮವಾಗಿ ಶೇ.9.8, 11.8 ಮತ್ತು 11.1 ದಾಖಲಾಗಿದ್ದು, ಬಹುತೇಕ ಇದ್ದಲ್ಲೆ ಇದ್ದಂತೆ ಕಂಡರೂ ಹಿನ್ನಡೆಯನ್ನು ಅನುಭವಿಸಿದೆ. ಬೆಳವಣಿಗೆಯ ಅಂತರ ಜಾಸ್ತಿಯಾಗಿದೆ.

ಸಾಲ-ಠೇವಣಿ ಪ್ರಮಾಣ: ರಿಸರ್ವ್ ಬ್ಯಾಂಕ್ ದಾಖಲೆಗಳಲ್ಲಿಯ ನಮ್ಮ ಎಲ್ಲ ಬ್ಯಾಂಕುಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಮೇಲೆ ಹೇಳಿದ ಆರೋಗ್ಯಕರ ಸಾಲ-ಠೇವಣಿ ಪ್ರಮಾಣದ (ಶೇ.78-80) ಮಾನದಂಡದಂತೆ ಚಿತ್ರ ಭಿನ್ನವಾಗಿ ಕಾಣುತ್ತದೆ. ವೇಗವಾಗಿ ಬೆಳೆಯುತ್ತಿರುವ ನಮ್ಮ ಖಾಸಗಿ ಬ್ಯಾಂಕುಗಳ ವಿಷಯದಲ್ಲಿ ಈ ಪ್ರಮಾಣ 1998-99ರಿಂದ 2023- 24ರ ವರೆಗೆ ಅನುಕ್ರಮವಾಗಿ ಶೇ.91.5, 90.8, 84.8, 85.4, 88.4 ಮತ್ತು 94 ಇತ್ತು. ಆದರೆ ಈ ಬ್ಯಾಂಕುಗಳು ತಮ್ಮ ಎಲ್ಲ ಅರ್ಹ ಠೇವಣಿಗಳನ್ನೂ (ಇಂದಿನ ನಿಯಮದಂತೆ ಶೇ.77.5 ಠೇವಣಿಗಳನ್ನು ಬಳಸಿ ಹೆಚ್ಚುವರಿಯಾಗಿ ಎಲ್ಲಿಂದಲೋ ತಾತ್ಕಾಲಿಕ ಅಲ್ಪಾವಧಿ ಸಾಲ ತಂದೋ ಸರ್ಟಿಫಿಕೇಟ್ ಆಫ್ ಡೆಪಾಸಿಟ್ ಕೊಟ್ಟು ತಾತ್ಕಾಲಿಕ ಠೇವಣಿ ಪಡೆದೋ ತಮ್ಮ ಗ್ರಾಹಕರಿಗೆ ಸಾಲ ಕೊಡುತ್ತಿವೆ ಎಂದಂತಾಯಿತು. ಆ ಹೆಚ್ಚುವರಿ ಖರ್ಚನ್ನು ಕಳೆದ ಮೇಲೆ ಬ್ಯಾಂಕುಗಳಿಗೆ ಉಳಿಯುವುದೆಷ್ಟು? ಇದು ಸುಸ್ಥಿರ ಸ್ಥಿತಿಯಾದೀತೆ? ಎಲ್ಲ ಖಾಸಗಿ ಬ್ಯಾಂಕುಗಳೂ ಒಂದೇ ಸ್ಥಿತಿಯಲ್ಲಿ ಇಲ್ಲವೆನ್ನುವುದೂ ಅಷ್ಟೇ ಸತ್ಯ.

ನಮ್ಮ ಸರ್ಕಾರಿ ಬ್ಯಾಂಕುಗಳಲ್ಲಿ ಈ ಪ್ರಮಾಣ ಶೇ.70.0ರ ಆಚೆ ಈಚೆ ಓಡಾಡುತ್ತಿದೆ, ಈ ಆರು ವರ್ಷಗಳಲ್ಲಿ, ಅಂದರೆ ಉಳಿದಂತಹ ಅರ್ಹ ಠೇವಣಿಗಳನ್ನು ಸಾಲ ಕೊಡಲು ಬಳಸುತ್ತಿಲ್ಲವೇ? ಅಥವಾ ಬೇಡಿಕೆ ಇಲ್ಲವೆ? ಇವೆಲ್ಲ ಸರಾಸರಿ ಅಂಕಿಸಂಖ್ಯೆಗಳು, ಒಂದೊಂದು ಬ್ಯಾಂಕಿನ ಕಥೆಯೂ ಬೇರೆ ಇದ್ದೀತು. ಉಳಿದಂತೆ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳ ಈ ಪ್ರಮಾಣ ಇನ್ನೂ ಕಡಿಮೆ ಇದೆ.

ಆದರೆ ಸರ್ಕಾರಿ, ಖಾಸಗಿ ಮತ್ತು ಇತರೆ ಎಲ್ಲ ದೊಡ್ಡ ಷೆಡ್ಯುಲ್ಡ್ ಕಮರ್ಷಿಯಲ್ ಬ್ಯಾಂಕುಗಳ ಸರಾಸರಿ ಪ್ರಮಾಣವನ್ನು ತೆಗೆದುಕೊಂಡರೆ ಅದು ಶೇ.77ರ ಸುತ್ತ ಸುತ್ತುತ್ತಿರುವುದು ಕಂಡುಬಂದಿದೆ. ಅಂದರೆ ಸಮಸ್ಯೆ ಇರುವುದು ಸಣ್ಣ ಸಹಕಾರಿ ಗ್ರಾಮೀಣ ಮತ್ತು ಇತರೆ ಬ್ಯಾಂಕುಗಳಲ್ಲಿ ಎಂದಂತಾಯಿತು. ಇದನ್ನು ಸರಿಪಡಿಸಲು ಕ್ರಮಗಳು ಬೇಕು.

‘ಕಾಸಾ’ ಮತ್ತು ಬಡ್ಡಿ ದರ: ಕರೆಂಟ್ ಅಕೌಂಟ್ ಬ್ಯಾಲೆನ್ಸ್ಗೆ ಬಡ್ಡಿ ಕೊಡಲಿಕ್ಕಿಲ್ಲ. ಕೊಟ್ಟರೂ ವಾರ್ಷಿಕ ಶೇ.0.5 ಅಥವಾ ಸ್ವಲ್ಪ ಹೆಚ್ಚು ಕೊಡಬಹುದು. ಸೇವಿಂಗ್ಸ್ ಅಕೌಂಟ್ ಬಡ್ಡಿ ದರವನ್ನು ಮೊದಲು ಸರ್ಕಾರ ನಿಯಂತ್ರಿಸುತ್ತಿತ್ತು. ನವೆಂಬರ್ 2011ರಲ್ಲಿ ಈ ನಿರ್ಬಂಧವನ್ನು ರಿಸರ್ವ್ ಬ್ಯಾಂಕ್ ತೆಗೆದು ಹಾಕಿದ ನಂತರ ಬ್ಯಾಂಕುಗಳು ತಾವೇ ಈ ಎರಡೂ ಖಾತೆಗಳ ಠೇವಣಿಗಳಿಗೆ ತಾವೇ ಬಡ್ಡಿ ದರ ನಿಗದಿ ಮಾಡುವ ಅಧಿಕಾರ ಪಡೆದಿವೆ. ಅದೇ ರೀತಿ ಸಾವಧಿ (ಫಿಕ್ಸೆಡ್) ಠೇವಣಿಗಳ ವಿಷಯದಲ್ಲೂ ಸ್ವಾತಂತ್ರ್ಯವಿದೆ. ‘ಕಾಸಾ’ ಅಗ್ಗದ ಠೇವಣಿಗಳೆನ್ನುವುದು ನಿಸ್ಸಂಶಯ. ಬ್ಯಾಂಕುಗಳು ‘ಕಾಸಾ’ ಖಾತೆದಾರರಿಗೆ ಒಂದಿಷ್ಟು ಹೆಚ್ಚಿನ ಬಡ್ಡಿ ಆಕರ್ಷಣೆ ತೋರಿಸಿ ಖಾತೆಗಳಲ್ಲಿ ಹೆಚ್ಚು ಬ್ಯಾಲೆನ್ಸ್ ಉಳಿಸುವಂತೆ ಪ್ರೋತ್ಸಾಹಿಸಬಹುದು. ಒಂದು ಸಲಹೆಯಂತೆ 15 ದಿನಗಳ ಮತ್ತು 30 ದಿನಗಳ ಸಾವಧಿ ಠೇವಣಿಗಳಿಗೆ ಈಗ ಕೊಡುವ ದರಗಳನ್ನು ‘ಕಾಸಾ’ಗಳಿಗೆ ನಿಗದಿ ಮಾಡಿದರೆ ಅವು ಹೆಚ್ಚು ಆಕರ್ಷಕವಾಗುತ್ತವೆ.

‘ಕಾಸಾ’ ಠೇವಣಿಗಳು ಹೆಚ್ಚಾದಷ್ಟೂ ಒಟ್ಟು ಠೇವಣಿಗಳಲ್ಲಿ ಇವುಗಳ ಪ್ರಮಾಣ ಹೆಚ್ಚಾಗಿ ಬ್ಯಾಂಕುಗಳಿಗೆ ಠೇವಣಿಗಳ ಮೇಲಿನ ಬಡ್ಡಿ ವೆಚ್ಚ ಕಡಿಮೆಯಾಗುತ್ತದೆ. ಇದು ಕಡಿಮೆಯಾದಷ್ಟೂ ಸಾಲಗಳ ಮೇಲೆ ಪಡೆಯುವ ಬಡ್ಡಿ ಆದಾಯದಲ್ಲಿ ಇದನ್ನು ಕಳೆದ ನಂತರ ಉಳಿಯುವ ಅಂತರ (ನಿವ್ವಳ ಆಯ) ಹೆಚ್ಚುತ್ತ ಹೋಗುತ್ತದೆ. ಇದನ್ನೇ ಬ್ಯಾಂಕಿಂಗ್ ಪರಿಭಾಷೆಯಲ್ಲಿ ನಿವ್ವಳ ಬಡ್ಡಿ ಉಳಿಕೆ’ (Net Interest Margin-ಎನ್‌ಐಎಂ) ಎಂದು ಕರೆಯುವುದು.

2023-240 ಕೊನೆಯಲ್ಲಿ ನಮ್ಮ ಸರ್ಕಾರಿ ಬ್ಯಾಂಕುಗಳಲ್ಲಿ ಕಾಸಾ ಠೇವಣಿಗಳು ಒಟ್ಟು ಠೇವಣಿಗಳ ಶೇ.40.5 (ಶೇ. 6.2+34.3) ಇದ್ದವು. ಖಾಸಗಿ ಬ್ಯಾಂಕುಗಳಲ್ಲಿಯೂ ಇದೇ ಸ್ಥಿತಿ ಇದ್ದರೂ ಕರೆಂಟ್ ಅಕೌಂಟ್ ಹೆಚ್ಚು (ಶೇ.1 3.0) ಮತ್ತು ಸೇವಿಂಗ್ಸ್ ಅಕೌಂಟ್ ಕಡಿಮೆ (ಶೇ.27.7) ಇದ್ದವು. ಆದರೆ ಗ್ರಾಮೀಣ ಬ್ಯಾಂಕುಗಳಲ್ಲಿ ಮಾತ್ರ ಸೇವಿಂಗ್ ಅಕೌಂಟ್ ಅತಿ ಹೆಚ್ಚು (ಶೇ.54.1) ಮತ್ತು ಕರೆಂಟ್ ಅಕೌಂಟ್ ಅತಿ ಕಡಿಮೆ (ಶೇ.1.7) ಇರುವುದನ್ನು ಕಾಣಬಹುದು. ಸಹಕಾರ ಬ್ಯಾಂಕುಗಳಲ್ಲಿ ಖಾತೆಗಳು ಹೆಚ್ಚಿದ್ದರೂ ಮೊತ್ತ ಕಡಿಮೆ. ಕಾಸಾ ಠೇವಣಿಗಳು ಹೆಚ್ಚಿದಷ್ಟೂ ಎನ್‌ಐಎಂ ಹೆಚ್ಚಾಗಿ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ. ಆದ್ಯತೆಯ ವಿಶಿಷ್ಟ ವಲಯಗಳಿಗೆ ಬಡ್ಡಿ ದರ ಕಡಿಮೆ ಮಾಡಿ ಸಾಲ ಕೊಡಬಹುದು.

ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ದೇಶದ ನಿರ್ಯಾತುದಾರರು ಅಹವಾಲು ಹೇಳಿ ಕೊಂಡಂತೆ ನಿರ್ಯಾತ ಆದ್ಯತೆಯ ವಲಯದಲ್ಲಿದ್ದರೂ ಬ್ಯಾಂಕುಗಳು ಅವರಿಗೆ ಸಾಕಷ್ಟು ಸಾಲಗಳನ್ನು ಕೊಡುತ್ತಿಲ್ಲ ವಂತೆ ಎಲ್ಲವಾಣಿಜ್ಯ ಬ್ಯಾಂಕುಗಳೂ ಇದನ್ನು ಗಮನಿಸಬೇಕು.

2021-22ರಲ್ಲಿ ಬ್ಯಾಂಕ್‌ ಸಾಲಗಳ ಬೆಳವಣಿಗೆ ವಾರ್ಷಿಕ ಶೇ.11.2 ಇದ್ದರೆ 2022-23ರ ಕೊನೆಯಲ್ಲಿ ಇದು ಶೇ.15.4ಕ್ಕೆ ಏರಿತ್ತು. ಆಗಸ್ಟ್ 2024ರ ಹೊತ್ತಿಗೆ ಇದು ಶೇ.15.1ರ ಮೇಲೆಯೇ ಮುಂದುವರಿದಿದೆ ಎಂಬುದನ್ನು ಅಧಿಕೃತ ಅಂಕಿ ಸಂಖ್ಯೆಗಳಿಂದ ತಿಳಿದುಕೊಳ್ಳಬಹುದು. ಆದರೆ ಇದೇ ಅವಧಿಗಳಲ್ಲಿ ಬ್ಯಾಂಕ್ ಠೇವಣಿಗಳ ಬೆಳವಣಿಗೆಯು ಅನುಕ್ರಮವಾಗಿ ಶೇ.9.8, 11.8 ಮತ್ತು 11.1 ದಾಖಲಾಗಿದ್ದು, ಬಹುತೇಕ ಇದ್ದಲ್ಲೆ ಇದ್ದಂತೆ ಕಂಡರೂ ಹಿನ್ನಡೆಯನ್ನು ಅನುಭವಿಸಿದೆ. ಬೆಳವಣಿಗೆಯ ಅಂತರ ಜಾಸ್ತಿಯಾಗಿದೆ.