ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು ಶುರುವಾಗಿದೆ. ಏಕೆಂದರೆ ಬೇರೆಲ್ಲೂ ಇಲ್ಲದಷ್ಟು ಗರಡಿ ಮನೆಗಳು ಮತ್ತು ಅವುಗಳಿಗೆ ನೀಡಲಾಗುತ್ತಿರುವ ಮಹತ್ವವನ್ನು ನೋಡಿದರೆ ಈ ಮಾತು ನಿಜ ಅನ್ನಿಸುತ್ತದೆ.
ವರ್ಷದ ಎಲ್ಲ ದಿನಗಳಲ್ಲಿಯೂ ಗರಡಿ ಮನೆಗಳು ಚಟುವಟಿಕೆಯಿಂದ ಕೂಡಿರುತ್ತವೆ. ಅಲ್ಲದೆ ಅಲ್ಲಲ್ಲಿ ಕುಸ್ತಿ ಪಂದ್ಯಾ ವಳಿಗಳೂ ನಡೆಯುತ್ತಿರುತ್ತವೆ. ಇತ್ತೀಚೆ ಗಂತೂ ರಾಜಕೀಯ ನಾಯಕರ ಹುಟ್ಟುಹಬ್ಬ, ಸ್ಥಳೀಯ ಹಬ್ಬಗಳ ಪ್ರಯು ಕ್ತವೂ ಕುಸ್ತಿ ಪಂದ್ಯಾವಳಿ ಆಯೋ ಜಿಸುವಂತಾಗಿದೆ. ಆದರೆ, ಗರಡಿ ಮನೆಗಳಲ್ಲಿ ಸಂಚಲನ ಆರಂಭವಾಗ ಬೇಕಾದರೆ ಮೈಸೂರು ದಸರಾ ಬರಬೇಕು. ಏಕೆಂದರೆ ದಸರಾ ಸಂದರ್ಭದಲ್ಲಿ ಜರು ಗುವ ವಿವಿಧ ಕಾರ್ಯಕ್ರಮಗಳ ನಡುವೆ ಕುಸ್ತಿಗೂ ಮಹತ್ವದ ಸ್ಥಾನವಿದೆ.
ರಾಜರ ಕಾಲದ ಇತಿಹಾಸ: ಈ ಕುಸ್ತಿ ಪಂದ್ಯಾವಳಿಗಳಿಗೆ ರಾಜಮಹಾರಾಜರ ಕಾಲದ ಇತಿಹಾಸವಿದೆ. ರಾಜರ ಕಾಲದಲ್ಲಿ ಪೈಲ್ವಾನರನ್ನು ಕರೆಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಲ್ಲದೆ, ದಸರಾ ಸಂದರ್ಭ ಅರಮನೆಯ ಕರಿಕಲ್ಲು ತೊಟ್ಟಿ ಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ಖ್ಯಾತಿ ಪಡೆದಿತ್ತು. ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು.
ಹೀಗಾಗಿ ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು. ಪೈಲ್ವಾನರು ಪ್ರತಿದಿನ ಮುಂಜಾನೆಯೇ ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸುತ್ತಿದ್ದರು. ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತಮ್ಮ ಬಲ ಪ್ರದರ್ಶಿಸಿ ಮಹಾರಾಜರಿಂದ ಪ್ರಶಂಸೆ ಪಡೆಯುತ್ತಿದ್ದರು. ಜಯಶಾಲಿಯಾದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು. ಇದು ಇಂದಿಗೂ ಮುಂದುವರೆದುಕೊಂಡು ಬರುತ್ತಿದ್ದು ದಸರಾ ಸಂದರ್ಭ ಕಲ್ಯಾಣ ಮಂಟಪದ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಟಿ ಕಾಳಗ ಇದಕ್ಕೆ ಸಾಕ್ಷಿಯಾಗಿದೆ.
ಮೈಸೂರು ನಗರಪಾಲಿಕೆಯು ಇದೀಗ ಹಳೆಯ ಕಾಲದ ಗರಡಿ ಮನೆಗಳ ಅಭಿ ವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. ನಗರ ದಲ್ಲಿ ಒಂದು ಸುತ್ತು ಹಾಕಿದರೆ ನೂರಕ್ಕೂ ಹೆಚ್ಚು ಗರಡಿಮನೆಗಳು ಕಾಣಸಿಗುತ್ತವೆ. ಸುಣ್ಣದಕೇರಿ ನಾಲಾ ಬೀದಿಯ ಗೋಪಾಲ ಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ. ಜಿ. ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹ ಮ್ಮದ್ ಸಾಹೇಬರ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರಿಯುತ್ತಾ ಹೋಗುತ್ತದೆ. ಇಂತಹ ಗರಡಿ ಮನೆಗಳಿಂದ ಬೆಟ್ಟದ ಚಿಕ್ಕಣ್ಣ, ಪೈ. ಪಾಪಣ್ಣ, ಪೈ. ಶಂಕರ್ ಚಕ್ರವರ್ತಿ, ಚಿನ್ನ, ಅನಂತ್ ಅವರಂತಹ ನೂರಾರು ಪೈಲ್ವಾನ್‌ಗಳು ಪ್ರತಿಭೆ ಪ್ರದರ್ಶಿಸಿ ಮೈಸೂರಿನ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.
ಪೈಲ್ವಾನರ ದಿನಚರಿ; ನೋಡಿದರೆ ಅಚ್ಚರಿ: ಪೈಲ್ವಾನರ ನಿತ್ಯದ ದಿನಚರಿ, ಅವರ ಊಟ, ತಾಲೀಮು ಎಲ್ಲವೂ ವಿಭಿನ್ನವಾಗಿರುತ್ತದೆ. ದೇಹವನ್ನು ವ್ಯಾಯಾಮ, ಕಸರತ್ತಿನ ಮೂಲಕ ದಂಡಿಸುತ್ತಾರೆ. ಮುಂಜಾನೆ ಎದ್ದು ಗರಡಿ ಮನೆಗೆ ಹೋಗುವ ಪೈಲ್ವಾನರು ಅಲ್ಲಿರುವ ಪರಿಕರಗಳಾದ ಕಲ್ಲುಗುಂಡು, ಬಳೆ, ಗದೆ, ಕೊಂತ, ಕಂಬಕಟ್ಟೋದು, ಮಣ್ಣಿನಲ್ಲಿ ಪರಸ್ಪರ ಕುಸ್ತಿ ಅಭ್ಯಾಸ ನಡೆಸುತ್ತಾರೆ. ಅಲ್ಲದೆ ಹುಲಿಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಸುತ್ತಂಡೆ, ಚಪ್ಪಡಿದಂಡೆ, ಬಸ್ಕಿ ಮುಂತಾದ ಕಸರತ್ತುಗಳನ್ನೂ ನಡೆಸುತ್ತಾರೆ. ಗರಡಿ ಮನೆಯಿಂದ ತಾಲೀಮು ನಡೆಸಿ ಬರುವ ಪೈಲ್ವಾನರು ಮನೆಗೆ ಬರುತ್ತಿದ್ದಂತೆಯೇ ಬಾದಾಮಿ ಬೀಜಗಳ ಪುಡಿ ಮಿಶ್ರಣ ಮಾಡಿದ ಲೀಟರ್‌ಗಟ್ಟಲೆ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ ಮುಂತಾದ ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುತ್ತಾರೆ. ಮಧ್ಯಾಹ್ನ ಚಪಾತಿ, ರಾಗಿ ಮುದ್ದೆ, ಅನ್ನ ಸಾರು, ಹಾಲು, ಬೆಣ್ಣೆ, ಹಣ್ಣನ್ನು ಸೇವಿಸುತ್ತಾರೆ.
ಮೊದಲೆಲ್ಲಾ ಪೈಲ್ವಾನ್ ಇದ್ದಾರೆಂದರೆ ಅದು ಊರಿಗೆ ಹೆಮ್ಮೆಯ ಸಂಗತಿಯಾಗಿರುತ್ತಿತ್ತು. ಅಲ್ಲದೆ, ಎಲ್ಲಾ ರೀತಿಯ ಪ್ರೋತ್ಸಾಹ ನೀಡಿ ಕಳುಹಿಸಲಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಗರಡಿ ಮನೆಗಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ, ಅದರ ಘನತೆ ಗೌರವ ಕಡಿಮೆಯಾಗಿಲ್ಲ ಎನ್ನಬಹುದು. ಹಾಗಾಗಿ ಇಂದಿಗೂ ದಸರಾದಲ್ಲಿ ಕುಸ್ತಿ ಪಂದ್ಯಾವಳಿಗೆ ತನ್ನದೇ ಆದ ಸ್ಥಾನಮಾನವಿದೆ. -ಪೈಲ್ವಾನ್ ಮಹದೇವಣ್ಣ, ಕ್ಯಾತಮಾರನಹಳ್ಳಿ