೩ ಮೀಟರ್‌ನಷ್ಟು ಏರಿಕೆ; ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ
ನವೀನ್ ಡಿಸೋಜ
ಮಡಿಕೇರಿ: ಕಳೆದ ವರ್ಷ ಮಳೆ ಇಲ್ಲದೆ ಕೊಡಗು ಜಿಲ್ಲೆಯಲ್ಲಿ ದಶಕದಲ್ಲಿಯೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿತ್ತು. ಮುಂಗಾರಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಸುಮಾರು ೩ ಮೀಟರ್‌ನಷ್ಟು ಏರಿಕೆಯಾಗಿದೆ.
೨೦೨೩ರ ವರ್ಷಾಂತ್ಯಕ್ಕೆ ಜಿಲ್ಲೆಯ ಅಂತರ್ಜ ಲದ ಮಟ್ಟ ಭೂಮಿಯಿಂದ ೧೫. ೭೯ ಮೀಟರ್ ನಷ್ಟು ಕೆಳಭಾಗದಲ್ಲಿತ್ತು. ಈ ವರ್ಷ ಜನವರಿ , ಫೆಬ್ರವರಿಯಲ್ಲಿ ಕೊಂಚ ಏರಿಕೆ ಕಂಡು ಬಂದರೂ ಏಪ್ರಿಲ್ ವೇಳೆಗೆ ಮತ್ತೆ ೧೫. ೩೯ ಮೀ. ಗಳಿಗೆ ತಲುಪಿದ್ದ ಅಂತರ್ಜಲ ಮಟ್ಟ ಮಳೆ ಆರಂಭವಾದ ಬಳಿಕ ನಿರಂತರವಾಗಿ ಚೇತರಿಕೆ ಕಂಡಿದ್ದು, ೯. ೬೨ ಮೀ. ಗೆ ತಲುಪಿದೆ. ಇದರಿಂದ ಸದ್ಯ ಜಿಲ್ಲೆಯ ಸರಾಸರಿ ಅಂತರ್ಜಲದ ಮಟ್ಟ ೧೨. ೦೬ ಮೀ. ಗಳಿಗೆ ಏರಿಕೆಯಾಗಿದೆ.
೩ ಬಾರಿ ಬರ ಪರಿಸ್ಥಿತಿ: ಕಳೆದ ಒಂದು ದಶಕದಲ್ಲಿ ೩ ಬಾರಿ ಜಿಲ್ಲೆ ಬರ ಪರಿಸ್ಥಿತಿಯನ್ನೆದು ರಿಸಿದೆ. ೨೦೧೫ ಮತ್ತು ೨೦೧೭ರಲ್ಲಿಯೂ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿತ್ತು. ಅಂತರ್ಜಲ ಮಟ್ಟ ೨೦೧೫ರಲ್ಲಿ ೧೪. ೩೫, ೨೦೧೭ರಲ್ಲಿ ೧೪. ೨೭ ಮೀ. ಗಳನ್ನು ತಲುಪಿತ್ತು. ೨೦೧೫ರ ೧೪. ೩೫ ಮೀ. ಅತಿ ಕಡಿಮೆ ಎನಿಸಿಕೊಂಡಿತ್ತು.
೨೦೨೩ರಲ್ಲಿ ಉಂಟಾದ ಭೀಕರ ಬರಗಾಲ ದಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿತ್ತು. ವರ್ಷಾಂತ್ಯದ ವೇಳೆಗೆ ಅಂತರ್ಜಲದ ಸ್ಥಿರ ಮಟ್ಟ ೧೫. ೭೯ಕ್ಕೆ ತಲುಪಿತ್ತು. ಇದು ಕಳೆದ ಒಂದು ದಶಕದಲ್ಲಿಯೇ ಜಿಲ್ಲೆಯಲ್ಲಿ ದಾಖಲಾದ ಕಡಿಮೆ ಮಟ್ಟವಾಗಿತ್ತು.
ಕಳೆದ ಬಾರಿ ಅಂತರ್ಜಲ ಕುಸಿತದಿಂದ ಕೆರೆ, ಕಟ್ಟೆ, ಬಾವಿ, ತೋಡು ಸೇರಿದಂತೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಸಾಕಷ್ಟು ಸಮಸ್ಯೆಯಾಗಿತ್ತು.
ಮಡಿಕೇರಿ ನಗರ, ವಿರಾಜಪೇಟೆ, ಕುಶಾಲನಗರ ಸೇರಿದಂತೆ ಹಲವೆಡೆ ಕುಡಿ ಯುವ ನೀರಿಗೂ ಪರದಾಡುವಂತಾಗಿತ್ತು. ಜಿಲ್ಲಾಡಳಿತ ನದಿ, ಕೆರೆ ಕಟ್ಟೆ ಸೇರಿದಂತೆ ಯಾವುದೇ ಜಲ ಮೂಲದಿಂದ ಕೃಷಿ ಮತ್ತಿತರ ಯಾವುದೇ ಚಟುವಟಿಕೆಗೆ ನೀರನ್ನು ಬಳಸಬಾರದೆಂದು ಆದೇಶ ಹೊರಡಿಸಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಿರು ವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ.
ಕಳೆದ ಬಾರಿ ಬರ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ೧೦ ವರ್ಷಗಳಲ್ಲಿಯೇ ಅತಿ ಕಡಿಮೆ ಮಟ್ಟಕ್ಕೆ ಅಂತರ್ಜಲ ಕುಸಿತ ಕಂಡಿತ್ತು. ಈ ಬಾರಿ ಆರಂಭದಿಂದಲೇ ಮುಂಗಾರು ಉತ್ತಮವಾಗಿದ್ದು, ಹಿಂಗಾರು ಮಳೆಯೂ ಉತ್ತಮವಾಗಿ ಸುರಿದಿರುವುದರಿಂದ ಜಿಲ್ಲೆಯ ಅಂತರ್ಜಲ ಮಟ್ಟ ಸಮೃದ್ಧವಾಗಿದೆ.
-ಸೌಮ್ಯ ಕೆ. ಜಿ. , ಹಿರಿಯ ಭೂವಿಜ್ಞಾನಿ(ಹೆಚ್ಚುವರಿ, ಪ್ರಭಾರ) ಜಿಲ್ಲಾ ಅಂತರ್ಜಲ ಕಚೇರಿ