ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತ ಸಮುದಾಯ ಹೈನುಗಾರಿಕೆಯತ್ತಲೂ ಒಲವು ತೋರಿರುವ ಪರಿಣಾಮ ವರ್ಷದಿಂದ ವರ್ಷಕ್ಕೆ ಹಾಲು ಸಂಗ್ರಹಣೆಯಲ್ಲಿ ಏರಿಕೆಯಾಗುತ್ತಿದೆ.
ಅದರಲ್ಲೂ ಬೇಸಿಗೆ ಕಾಲಕ್ಕಿಂತ ಸುಗ್ಗಿ ಕಾಲದಲ್ಲಿ ಹಾಲು ಸಂಗ್ರ ಹಣೆಯು ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವುದರಿಂದ ಮೈಮುಲ್‌ನ ಆರ್ಥಿಕ ವಹಿವಾಟಿನ ಮೇಲೆ ದೊಡ್ಡ ಪರಿಣಾಮ ಬೀರುವಂತಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ.
ಅದರಲ್ಲೂ ಬರಗಾಲ ಮತ್ತು ಪ್ರವಾಹ ಬಂದಾಗ ಹಾಕಿದ್ದ ಬಂಡವಾಳವೂ ಕೈಸೇರದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ, ಕನಿಷ್ಠ ೨ಕ್ಕಿಂತ ಹೆಚ್ಚು ಎಮ್ಮೆ, ಇಲಾತಿ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸುತ್ತಿರುವ ಹೈನುಗಾರರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ವ್ಯವಸಾಯದ ಜತೆಗೆ ರೈತರು ಹೈನೋದ್ಯಮದ ಕಡೆಗೆ ವಾಲಿದ್ದರಿಂದ ಕಳೆದ ಐದು ವರ್ಷಗಳಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಹಾಲು ಸಂಗ್ರಹಣೆಯ ಪ್ರಮಾಣದಲ್ಲಿ ದೊಡ್ಡ ಏರಿಕೆ ಕಂಡು ಬಂದಿರುವುದು ಗಮನಾರ್ಹವಾಗಿದೆ. ವರ್ಷದಿಂದ ವರ್ಷಕ್ಕೆ ಏರಿಕೆ: ವರ್ಷದಿಂದ ವರ್ಷಕ್ಕೆ ಹಾಲಿನ ಸಂಗ್ರಹಣೆ ಜಾಸ್ತಿ ಯಾಗುತ್ತಿರುವುದು ವಿಶೇಷವಾಗಿದೆ. ೨೦೨೦-೨೧ನೇ ಸಾಲಿನಿಂದ ೨೦೨೪-೨೫ರ ಅವಧಿಯಲ್ಲಿ ಹಾಲಿನ ಸಂಗ್ರಹಣೆ ಸಾಕಷ್ಟು ಜಾಸ್ತಿಯಾಗಿದೆ.
ಹಾಲು ಉತ್ಪಾದಕ ಸದಸ್ಯರ ಸಂಖ್ಯೆಯು ಏರಿಕೆಯಾಗಿದೆ. ದಿನವಹಿ, ಹಾಲಿನ ಸುಗ್ಗಿ ಹಾಗೂ ಬೇಸಿಗೆ ಅವಽಯಲ್ಲೂ ಗಣನೀಯವಾಗಿ ಏರಿಕೆ ಕಂಡಿದೆ. ಅದಕ್ಕೆ ತಕ್ಕಂತೆ ಮಾರಾಟ ಪ್ರಮಾಣ ಜಾಸ್ತಿಯಾಗಬೇಕಿದ್ದು, ಶೇ. ೫ರಷ್ಟು ಮಾತ್ರ ಚೇತರಿಕೆಯಿದೆ. ೨೦೨೦-೨೧ರಲ್ಲಿ ೨,೩೫,೧೫೧ ಲೀ, ೨೦೨೧-೨೨ರಲ್ಲಿ ೨,೪೮,೪೦೬ ಲೀ, ೨೦೨೨-೨೩ರಲ್ಲಿ ೨,೭೨,೮೮೬ ಲೀ, ೨೦೨೩-೨೪ರಲ್ಲಿ ೨,೯೫,೧೦೫ ಲೀ, ೨೦೨೪-೨೫ರಲ್ಲಿ ಇದುವರೆಗೆ ಸರಾಸರಿ ೩,೦೭,೯೪೪ ಲೀಟರ್ ಹಾಲು ಮಾರಾಟವಾಗಿದೆ. ನಂತರದಲ್ಲಿ ಮೊಸರು, ತುಪ್ಪ, ಲಸ್ಸಿ, ಮಸಾಲೆ ಮಜ್ಜಿಗೆ ಮಾರಾಟವಾಗಿದೆ. ೨೦೨೪ರಲ್ಲಿ ೮. ೪೭ ಲಕ್ಷ ಲೀಟರ್ ಸಂಗ್ರಹವಾದರೆ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳ ಮಾರಾಟ ೩. ೫೦ ಲಕ್ಷ ಲೀಟರ್ ಆಗಿದೆ. ಉಳಿದಂತೆ ನಾಲ್ಕು ಲಕ್ಷ ಲೀಟರ್ ಹಾಲು ಉಳಿಯುತ್ತಿರುವುದರಿಂದ ಮೈಮುಲ್ ಆರ್ಥಿಕ ವಹಿವಾಟಿನ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ.
೧,೨೪೮ ಅಧಿಕೃತ ಮಾರಾಟಗಾರರು
೨೧೦ ನಂದಿನಿ ಪಾರ್ಲರ್‌ಗಳು
೩,೧೧,೬೩೩ ಲೀ. ಹಾಲು ಮಾರಾಟ
೧,೨೦೫ ಹಾಲು ಉತ್ಪಾದಕರ ಸಹಕಾರ ಸಂಘಗಳು
೨,೨೩,೦೯೦ ಹಾಲು ಉತ್ಪಾದಕ ಸದಸ್ಯರು
೧,೦೫,೬೧೭ ಹಾಲು ಹಾಕುತ್ತಿರುವ ಸದಸ್ಯರು
ಚಾಕೋಲೆಟ್ ತಯಾರಿಕೆಗೆ ಯೋಜನಾ ವರದಿ ಮೈಮುಲ್ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶೀಘ್ರ ಚಾಕೋಲೆಟ್, ಪನ್ನೀರನ್ನೂ ಸಹ ತಯಾರು ಮಾಡುವ ಯೋಜನೆ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಡಿಪಿಆರ್ (ಸಮಗ್ರ ಯೋಜನಾ ವರದಿ ) ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಮಾರಾಟ ಮಾಡಿ ಉಳಿದ ಹಾಲು ಉಪ ಉತ್ಪನ್ನಗಳು, ಪೌಡರ್ ಮಾಡಲು ಬಳಕೆಯಾಗುತ್ತಿದೆ. ಆದರೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತಷ್ಟು ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತರಲು ಯೋಜನೆ ರೂಪಿ ಸಲಾಗಿದೆ. ಶೀಘ್ರದಲ್ಲೇ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು ಹೇಳಿದರು