ಯಳಂದೂರು: ಚಾಮರಾಜನಗರ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಕೆಲ ಬಡಾವಣೆಗಳಿಗೆ ಸರಿಯಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ರಸ್ತೆಗಳೆಲ್ಲಾ ಹಳ್ಳಕೊಳ್ಳಗಳಿಂದ ತುಂಬಿವೆ. ಈಚೆಗೆ ಬಿದ್ದ ಮಳೆಯಿಂದ ಉಪ್ಪಾರ, ನಾಯಕ, ಮುಸ್ಲಿಂ ಬಡಾವಣೆಗೆ ತೆರಳುವುದು ಕಷ್ಟವಾಗಿದೆ. ಚರಂಡಿಯಲ್ಲಿ ಹೂಳು ತೆಗೆದಿಲ್ಲದ ಕಾರಣ ಮಳೆ ಬಂದರೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಹೊಂಗನೂರು ಕೂಡ ಒಂದಾಗಿದೆ. ಈ ಗ್ರಾಮದ ೫ನೇ ವಾರ್ಡಿನ ಉಪ್ಪಾರ ಬಡಾವಣೆಗೆ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇಲ್ಲಿ ೨೫೦ಕ್ಕೂ ಹೆಚ್ಚು ಕುಟುಂಬಗಳಿದ್ದು, ಕೇವಲ ಒಂದು ಕೊಳವೆ ಬಾವಿ ಇದೆ. ಆದರೆ ಇಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಗ್ರಾಮದ ೩ನೇ ವಾರ್ಡಿನಲ್ಲಿ ಮುಸ್ಲಿಂ, ಕುರುಬ ಸಮುದಾಯದವರಿದ್ದಾರೆ. ಇಲ್ಲೂ ಕೂಡ ನೀರಿನ ಸಮಸ್ಯೆ ಇದೆ. ಇಲ್ಲಿನ ಮುಖ್ಯರಸ್ತೆಗೆ ಮಣ್ಣನ್ನು ಸುರಿಯಲಾಗಿದೆ. ಈ ರಸ್ತೆ ಹಳ್ಳ-ಕೊಳ್ಳಗಳಿಂದ ಕೂಡಿದೆ.
ಇದನ್ನು ಓದಿ: ಅಪರಾಧ ಕೃತ್ಯ ತಡೆಗಟ್ಟಲಿ; ಸಾಂಸ್ಕೃತಿಕ ನಗರಿಯಲ್ಲಿ ನೆಮ್ಮದಿ ನೆಲೆಸಲಿ
ಮಳೆ ಬಿದ್ದರೆ ಇಡೀ ರಸ್ತೆ ಕೆಸರುಮಯವಾಗುತ್ತದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಸಂಚರಿಸು ವುದಕ್ಕೆ ತೊಂದರೆಯಾಗಿದೆ. ಅನೇಕರು ಜಾರಿ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ರಸ್ತೆಯಲ್ಲಿ ಸಂಗ್ರಹವಾಗಿರುವ ಕಸವನ್ನು ತೆರವುಗೊಳಿಸಲು ಇಲ್ಲಿನ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಇಲ್ಲಿಗೆ ಜೆಜೆಎಂನಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದ್ದರೂ ಇದಕ್ಕೆ ಸಂಪರ್ಕ ನೀಡಿಲ್ಲ. ಇಲ್ಲಿರುವ ಅನೇಕ ಕುಟುಂಬಗಳು ಕೂಲಿಯನ್ನೇ ನಂಬಿ ಬದುಕುತ್ತಿವೆ. ಆದರೆ ನಲ್ಲಿಯಲ್ಲಿ ಬರುವ ಅಲ್ಪ ಪ್ರಮಾಣದ ನೀರನ್ನು ಸಂಗ್ರಹಿಸಲು ಕೂಲಿ ಮಾಡುವ ಮಹಿಳೆಯರು ಮನೆಯಲ್ಲೇ ಇರಬೇಕಾದ ಸ್ಥಿತಿ ಇದೆ. ಇಲ್ಲವಾದಲ್ಲಿ ಸೈಕಲ್‌ಗಳಿಗೆ ಬಿಂದಿಗೆ ಕಟ್ಟಿಕೊಂಡು ದೂರದಿಂದ ನೀರು ತರುವ ಸ್ಥಿತಿ ಇದೆ.
ಗ್ರಾಮದ ತುಂಬೆಲ್ಲಾ ಅನೈರ್ಮಲ್ಯ ತಾಂಡವವಾಡುತ್ತಿದೆ. ಇಲ್ಲಿನ ರಸ್ತೆ ಬದಿಗಳಲ್ಲಿ ಕಸ ರಾಶಿರಾಶಿಯಾಗಿ ಬಿದ್ದಿದೆ. ಕಸವನ್ನು ಸಂಗ್ರಹಿಸಲು ಇರುವ ವಾಹನ ಕೆಟ್ಟು ನಿಂತಿದೆ. ಇಲ್ಲಿನ ಕಸ ವಿಲೇವಾರಿಯಾಗುವುದೇ ಇಲ್ಲ. ಚರಂಡಿಯಲ್ಲಿ ಹೂಳು ತುಂಬಿದ್ದು, ಇದನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿರುವುದ ರಿಂದ ಮಳೆ ಬಂದರೆ ಕಲುಷಿತ ನೀರೆಲ್ಲಾ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ರಾಡಿಯಾಗುತ್ತದೆ. ಕೆಲ ಬೀದಿಗಳಿಗೆ ಇನ್ನೂ ಕೂಡ ಚರಂಡಿ ನಿರ್ಮಿಸದೆ ಸಾರ್ವಜನಿಕರು ಪರಿಪಾಟಲು ಪಡುವಂತಾಗಿದೆ. ಸಂಬಂಧಪಟ್ಟ ಪಂಚಾಯಿತಿಯವರು ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
” ನಮ್ಮ ಗ್ರಾಮದ ಉಪ್ಪಾರ, ಮುಸ್ಲಿಂ ಹಾಗೂ ಕುರುಬ ಸಮುದಾಯದವರ ಬೀದಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ರಸ್ತೆ ನಿರ್ಮಾಣ ಮಾಡಿಲ್ಲ. ಪಂಚಾಯಿತಿಯಲ್ಲಿ ಪೌರ ಕಾರ್ಮಿಕರೇ ಇಲ್ಲ. ಸಂಬಂಧಪಟ್ಟ ಪಿಡಿಒ, ಇಒಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸುತ್ತಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು.”
-ಚಾಮದಾಸಯ್ಯ, ಗ್ರಾಪಂ ಸದಸ್ಯ, ಹೊಂಗನೂರು




