ಮಂಜು ಕೋಟೆ
ಎಚ್.ಡಿ.ಕೋಟೆ: ಕಬಿನಿ, ತಾರಕ, ನುಗು ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಳ
ಎಚ್.ಡಿ.ಕೋಟೆ: ಭಾರೀ ಮಳೆಯ ಪರಿಣಾಮ ತಾಲ್ಲೂಕಿನ ಕಬಿನಿ, ತಾರಕ, ನುಗು ಜಲಾಶಯಗಳಿಗೆ ದಿಢೀರನೆ ಒಳಹರಿವು ಹೆಚ್ಚಾಗಿ ರಾತ್ರೋರಾತ್ರಿ ಭಾರಿ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರ ಬಿಡಲಾಗುತ್ತಿದೆ.
ಕೊಡಗು ಮತ್ತು ಕೇರಳದ ವಯನಾಡು ಪ್ರದೇಶದಲ್ಲಿ ಹಾಗೂ ತಾಲ್ಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಕಬಿನಿ, ತಾರಕ, ನುಗು ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿ ಕಬಿನಿ ಜಲಾಶಯದಿಂದ ೪೦,೦೦೦ ಕ್ಯೂಸೆಕ್ಸ್, ತಾರಕ ಜಲಾಶಯದಿಂದ ೯,೦೦೦ ಕ್ಯೂಸೆಕ್ಸ್, ನುಗು ಜಲಾಶಯದಿಂದ ೨,೦೦೦ ಕ್ಯೂಸೆಕ್ಸ್ ನೀರನ್ನು ಶನಿವಾರ ರಾತ್ರಿ ೧೨ರ ಸಂದರ್ಭದಲ್ಲಿ ಅಧಿಕಾರಿಗಳಾದ ನಟಶೇಖರ್‌ಮೂರ್ತಿ, ಗಣೇಶ್, ದೀಪಕ್ ಅವರು ಕ್ರಸ್ಟ್‌ಗೇಟ್‌ಗಳ ಮೂಲಕ ಹರಿಸಿದ್ದಾರೆ.
೬ ವರ್ಷಗಳ ನಂತರ ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡುತ್ತಿರುವುದರಿಂದ ಜಲಾಶಯದ ಮುಂಭಾಗದ ಸೇತುವೆ ಹಾಗೂ ಪಟ್ಟಣ ಸಮೀಪದ ಕಟ್ಟೆಮನುಗನಹಳ್ಳಿ ಸೇತುವೆ ಮುಳುಗಡೆಯಾಗಿವೆ.
ಎಂದಿನಂತೆ ರೈತರು ಮತ್ತು ಜನಸಾಮಾನ್ಯರು ಬೆಳಿಗ್ಗೆ ಎದ್ದು ಜಮೀನು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಲು ಮುಂದಾದಾಗ ಸೇತುವೆಗಳು ಮುಳುಗಡೆಯಾಗಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದನ್ನು ನೋಡಿ ಆತಂಕಗೊಂಡರು. ಮುಳುಗಡೆಯಾಗಿರುವ ಸೇತುವೆ ಮತ್ತು ನೀರನ್ನು ನೋಡಲು ನೂರಾರು ಜನರು ಮುಗಿಬಿದ್ದಿದ್ದರು.
ಕಬಿನಿ, ತಾರಕ, ನುಗು ಈ ಮೂರೂ ಜಲಾಶಯಗಳಿಂದ ೫೦,೦೦೦ ಕ್ಯೂಸೆಕ್ಸ್ ನೀರು ಹೊರ ಹೋಗುತ್ತಿರುವುದರಿಂದ ಕಬಿನಿ ಮತ್ತು ನುಗು ಜಲಾಶಯಗಳ ವ್ಯಾಪ್ತಿಯ ತಲಾ ಎರಡರಂತೆ ನಾಲ್ಕು ಸೇತುವೆಗಳು ಮುಳುಗಡೆಯಾಗಿದ್ದು, ಅನೇಕ ಗ್ರಾಮಗಳ ನಡುವೆ ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ನದಿಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.
” ನಾಗರಹೊಳೆ ಅರಣ್ಯ ಮತ್ತು ಕೊಡಗು ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ತಾರಕ ಜಲಾಶಯಕ್ಕೆ ದಿಢೀರನೆ ರಾತ್ರಿ ಒಳಹರಿವು ೨,೦೦೦ ಕ್ಯೂಸೆಕ್ಸ್‌ನಿಂದ ೧೦,೦೦೦ ಕ್ಯೂಸೆಕ್ಸ್‌ಗೆ ಏರಿಕೆಯಾಗಿತ್ತು. ನಂತರ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಯಿತು. ಭಾನುವಾರ ಮಧ್ಯಾಹ್ನದಿಂದ ೨೦೦ ಕ್ಯೂಸೆಕ್ಸ್ ನೀರನ್ನು ಮಾತ್ರ ಬಿಡಲಾಗುತ್ತಿದೆ.”
-ನಟಶೇಖರ ಮೂರ್ತಿ, ಎಇಇ, ತಾರಕ ಜಲಾಶಯ
” ಕೋಟೆ ತಾಲ್ಲೂಕು ಮತ್ತು ವಯನಾಡು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ ೩೦-೪೦ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ಮೂರೂ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಏಕಕಾಲದಲ್ಲಿ ಕಬಿನಿ ನದಿಗೆ ನೀರು ಹರಿಸಲಾಗುತ್ತಿದೆ.”
-ಗಣೇಶ್, ಎಇಇ, ಕಬಿನಿ ಜಲಾಶಯ





