Mysore
28
light rain

Social Media

ಶನಿವಾರ, 10 ಅಕ್ಟೋಬರ್ 2026
Light
Dark

ಅಂಬಾರಿ ಹೊರುವ ಗಜರಾಜನ ಮೇಲೆ ದಯೆ ಇರಲಿ

ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು

ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ?

ಮೈಸೂರಿನ ಮಹಾನ್ ಯದುಕುಲ ಒಡೆಯರ್ ಮಹಾರಾಜರುಗಳಿಗೆ ಕರ್ನಾಟಕ ಜನತೆಯ ಧನ್ಯವಾದಗಳು; ಅವರುಗಳು ಮೈಸೂರಿನ ದಸರಾ ಸಂಭ್ರಮದ ಸಾಂಸ್ಕೃತಿಕ ಮತ್ತು ಸಂಪ್ರದಾಯಗಳನ್ನು ಕಾಪಾಡಿ ಚರಿತ್ರೆಯಲ್ಲಿ ಜಗದ್ವಿಖ್ಯಾತಗೊಳಿಸಿದ್ದಾರೆ, ಅಳಿಸಲಾಗದ ಛಾಪು ಮೂಡಿಸಿದ್ದಾರೆ ಮತ್ತು ಚಾಮುಂಡಿಯ ತಾಣವಾದ ಮೈಸೂರು ನಗರವನ್ನು, ಅರಮನೆಗಳ ಪ್ರಸಿದ್ಧ ಪಾರಂಪರಿಕ ನಗರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಮಾಡಿದ್ದಾರೆ. ಅಪರೂಪದ ಜಂಬೂಸವಾರಿಯನ್ನು ಜಾರಿಗೆ ತಂದು ಪ್ರವಾಸೋದ್ಯಮ ಜಗತ್ತಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ ಮತ್ತು ರಾಜ ಗಾಂಭೀರ್ಯದಿಂದ ಗಜರಾಜರುಗಳು ರಾಜ ಮಾರ್ಗದಲ್ಲಿ ಪ್ರೇಕ್ಷಕರು ಮಾಡುವ ಗದ್ದಲ ಮತ್ತು ಮಾಲಿನ್ಯದ ಹೊರತಾಗಿಯೂ ಸೌಮ್ಯವಾಗಿ ಚಲಿಸುವುದನ್ನು ನೋಡಿ ನೆರೆದವರು ಆನಂದ ಪಡುವುದನ್ನು ನಾವು ಕಂಡಿದ್ದೇವೆ. ದಶಕಗಳ ಹಿಂದಿನ ದಿನಗಳಲ್ಲಿ, ಮೆರವಣಿಗೆಯಲ್ಲಿ ಒಂಟೆಗಳು, ಕತ್ತೆಗಳು , ಕರಡಿಗಳು, ಬೋನು ಗಳಲ್ಲಿ ಸಿಂಹ, ಚಿರತೆ, ಹುಲಿ ಮುಂತಾದ ಪ್ರಾಣಿಗಳನ್ನೂ ಮತ್ತು ಬಿಳಿ ಕುದುರೆ ಯನ್ನೂ ನಾವು ನೋಡಿದ್ದೇವೆ. ಮಹಾರಾಜರುಗಳು ಅಂಬಾರಿಯಲ್ಲಿ ಕುಳಿತು ಅಂಬಾ ವಿಲಾಸ್ ಅರಮನೆಯಿಂದ ಬನ್ನಿಮಂಟಪದವರೆಗೂ ಜನತೆಯ ಪ್ರೀತಿ ವಿಶ್ವಾಸವನ್ನು ಕೈಮುಗಿದು ಸ್ವೀಕರಿಸುತ್ತಿದ್ದುದನ್ನೂ ನಾವು ಕಂಡಿದ್ದೇವೆ.

ಜನರು ಅವರ ಮೇಲಿನ ಗೌರವದಿಂದ ಮಹಾರಾಜರನ್ನು ಕಣ್ಣೆತ್ತಿ ನೋಡದೆ, ತಲೆ ತಗ್ಗಿಸಿ ಕೈ ಮುಗಿಯುತ್ತಿದ್ದುದನ್ನೂ ನಾವು ಕಂಡಿದ್ದೇವೆ. ಇವೆಲ್ಲವೂ ಸ್ವಾಗತಾರ್ಹವಾಗಿದ್ದರೂ, ಅಂಬಾರಿ ಹೊರುವ ಗಜರಾಜನ ಮೇಲೆ ಒಟ್ಟಾರೆ ೭೫೦ ಕೆಜಿ ತೂಕದ ಪ್ಯಾಡಾಕ್ ಮತ್ತು ಚಿನ್ನದ ಮಂಟಪವನ್ನು ಹೊರೆಯಾಗಿಸುವುದು ಒಂದು ಕ್ರೂರತನದ ಪರಮಾವಧಿ ಅನಿಸಿದೆ. ಈಗ ಅಂಬಾರಿ ಹೊರಲು ತಾಲೀಮು ನಡೆಯುತ್ತಿದೆ ಮತ್ತು ೭೫೦+ ತೂಕದ ಮರಳು ತುಂಬಿದ ಮೂಟೆಗಳನ್ನು ಉಪಯೋಗಿಸಲಾಗುತ್ತಿದೆ.

‘ಆಂದೋಲನ’ ದಿ: ೯-೧೦-೨೬ರ ಸಂಚಿಕೆಯು, ಭವಿಷ್ಯದ ಅಂಬಾರಿ ಹೊರುವ ಆನೆ ಎಂದೇ ಗುರುತಿಸಿಕೊಂಡಿದ್ದ ೪೫ ವರ್ಷದ ಮಹೇಂದ್ರ ತಾಲೀಮು ಮಧ್ಯದಲ್ಲಿ ಏಕೋ ಏನೋ ಮುಂದೆ ನಡೆಯಲು ನಿರಾಕರಿಸಿತ್ತು, ತೂಕವನ್ನು ಕಡಿಮೆ ಮಾಡಿದರೂ ಮುನ್ನಡೆಯಲಿಲ್ಲ, ಆದುದರಿಂದ ತಾಲೀಮನ್ನು ಮೊಟಕು ಗೊಳಿಸಲಾಯಿತು ಎಂದು ವರದಿ ಮಾಡಿದೆ. ಇಂದಿನ ದಿನಗಳಲ್ಲಿ ದ್ರೋಣ, ಬಲರಾಮ, ಅಭಿಮನ್ಯು ಅಂತಹ ಮಹಾನ್ ಗಾಂಭೀರ್ಯದ ನಡೆಯ ದಿಗ್ಗಜಗಳು ಕಾಣುತ್ತಿಲ್ಲ.

ಪ್ರಶ್ನೆ – ನೋಡುಗರ ಕಣ್ಣುಗಳಿಗೆ ಹಬ್ಬ ಮಾಡಲು ಮಾನವನು ಏಕೆ ಇಷ್ಟು ಭಾರವನ್ನು ಗಜರಾಜನ ಮೇಲೆ ಹೊರೆ ಮಾಡುವ ಕ್ರೂರ ರೀತಿ ನೀತಿಗಳನ್ನು ಅನುಸರಿಸುತ್ತಿದ್ದಾನೆ ? ಅಂತಹ ದೊಡ್ಡ ಹೊರೆಯನ್ನು ಕಡಿಮೆ ಮಾಡಲು ಮಾರ್ಗವಿಲ್ಲವೇ? ಇವೆ.

ಸಲಹೆ: ವೈಭವ, ಆಡಂಬರ, ಪಾರಂಪರಿಕತೆ, ಸಂಸ್ಕೃತಿ ಮತ್ತು ಪ್ರದರ್ಶನಗಳನ್ನೂ ಉಳಿಸಿಕೊಂಡು ಹೊರೆಯನ್ನೂ ಕಡಿಮೆ ಮಾಡಲು ಪರ್ಯಾಯ ಚಿಂತನೆಗಳ ಸಲಹೆ ಇಲ್ಲಿವೆ.. ಮೂಲ ಚಿನ್ನದ ಮಂಟಪದ ಬದಲು ಅದೇ ವಿನ್ಯಾಸದ ಚಿನ್ನದ ಬಣ್ಣ ಲೇಪಿಸಿದ ತಿಳಿ ಮಿಶ್ರ ಲೋಹದಿಂದ ತಯಾರಿಸಿದ ಮಂಟಪದ ಪ್ರತಿಕೃತಿಯನ್ನು ಬಳಸಿ ಸಾಕಷ್ಟು ತೂಕ ಕಡಿಮೆ ಮಾಡಿದರೆ ಒಳಿತು. ಭದ್ರತೆಗಾಗಿ ಪ್ರಾಣಿದಯಾ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಬದಲಾದ ಕಾಲಗಳಿಗೆ ಅನುಗುಣವಾಗಿ, ಅಂಬಾರಿ ಗಜರಾಜನ ಬೆನ್ನಿನ ಮೇಲೆ ಅಷ್ಟು ಭಾರವಾದ/ತೂಕವುಳ್ಳ ಪ್ಯಾಡಾಕ್ ಬದಲು ಕಡಿಮೆ ತೂಕವುಳ್ಳ ಗಟ್ಟಿಮುಟ್ಟಾದ ವೈವಿಧ್ಯಮಯ ಪಿವಿಸಿ/ಫೋಮ/ ಬಬಲ್ ಫೋಮ್ ಪ್ಯಾಡಾಕ್ ವಿನ್ಯಾಸಗೊಳಿಸಿ ಉಪಯೋಗಿಸಲು ಸಾಧ್ಯವಿದೆ. ಹೀಗೆ ಅಂಬಾರಿ ಗಜಗಳ ಮೇಲೆ ತೂಕ ಕಡಿಮೆ ಮಾಡುವುದಲ್ಲದೆ, ಪಾರಂಪರಿಕ ಜಂಬೂ ಸವಾರಿಯ ಮಹತ್ವವನ್ನೂ ಕಾಪಾಡಿಕೊಳ್ಳಬಹುದು.

” ಮೂಲ ಚಿನ್ನದ ಮಂಟಪದ ಬದಲು ಅದೇ ವಿನ್ಯಾಸದ ಚಿನ್ನದ ಬಣ್ಣ ಲೇಪಿಸಿದ ತಿಳಿ ಮಿಶ್ರ ಲೋಹದಿಂದ ತಯಾರಿಸಿದ ಮಂಟಪದ ಪ್ರತಿಕೃತಿಯನ್ನು ಬಳಸಿ ಸಾಕಷ್ಟು ತೂಕ ಕಡಿಮೆ ಮಾಡಿದರೆ ಒಳಿತು”

 

 

Tags:
error: Content is protected !!