ತಮ್ಮ ಪಕ್ಷ ಬಿಹಾರದಲ್ಲಿ ಪುನಃ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ೧೨೫ ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡುವ ಭರವಸೆಯನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದಾರೆ.
ಅವರು ಈಗಾಗಲೇ ಮಹಿಳೆಯರಿಗೆ ೧,೧೦೦ ರೂ. ಮಾಸಿಕ ಪಿಂಚಣಿ ನೀಡುವುದಾಗಿ ಹೇಳಿದ್ದು, ಚುನಾವಣೆ ಮುಗಿಯುವ ಹೊತ್ತಿಗೆ ಇನ್ನೆಷ್ಟು ‘ಉಚಿತ’ಗಳ ಭರವಸೆ ನೀಡುವರೋ ಕಾದು ನೋಡಬೇಕಿದೆ. ಈ ‘ಉಚಿತ’ಗಳು ಸರಿಯೋ ತಪ್ಪೋ ಎನ್ನುವುದು ಬೇರೆ ವಿಚಾರ. ದಿನದ ೨೪ ಗಂಟೆಗಳ ಕಾಲವೂ ಜನರು ಸರ್ಕಾರಕ್ಕೆ ಒಂದಿಲ್ಲೊಂದು ತೆರಿಗೆಯನ್ನು ನೀಡುತ್ತಿದ್ದು, ಈ ರೀತಿ ನೀಡಿದ್ದರಲ್ಲಿ ಸ್ವಲ್ಪವಾಪಸ್ ಬಂದರೆ ತಪ್ಪೇನೂ ಇಲ್ಲ ಎನ್ನುವ ಮಾತೂ ಕೇಳಿ ಬರುತ್ತಿದೆ. ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರ ಗ್ಯಾರಂಟಿಗಳನ್ನು ಅಕ್ಷಮ್ಯ ಅಪರಾಧವೆಂದು ಬೊಬ್ಬೆ ಹೊಡೆದವರೇ ಚುನಾವಣೆ ಗೆಲ್ಲಲು ‘ಉಚಿತ’ ಯೋಜನೆಗಳನ್ನು ಘೋಷಿಸುತ್ತಿರುವುದನ್ನು ನೋಡಿದರೆ ರಾಜಕೀಯದಲ್ಲಿ ತಾನು ಮಾಡಿದರೆ ಸರಿ, ಅದನ್ನೆ ಇನ್ನೊಬ್ಬ ಮಾಡಿದರೆ ತಪ್ಪು ಎನ್ನುವ ಅಲಿಖಿತ ನಿಯಮ ಇನ್ನೊಮ್ಮೆ ಚರ್ಚೆಗೆ ಬಂದಂತೆ ಕಾಣುತ್ತದೆ.
-ರಮಾನಂದ ಶರ್ಮಾ, ಬೆಂಗಳೂರು





