ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಸಿದ್ಧತೆ: ೧.೨೯ ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ
ಪ್ರಸಾದ್ ಲಕ್ಕೂರು
ಚಾಮರಾಜನಗರ: ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಬಾಲಕಿಯರ ಕ್ರೀಡಾ ಹಾಸ್ಟೆಲ್ ಕಟ್ಟಡ ಉದ್ಘಾಟನೆಗೆ ಸಜ್ಜು ಗೊಂಡಿದೆ.
೧. ೨೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ರುವ ಈ ಹಾಸ್ಟೆಲ್ ಕಟ್ಟಡವನ್ನು ಫೆ. ೧೮ರಂದು ನಗರದಲ್ಲಿ ನಡೆಯುವ ಸರ್ಕಾರಿ ಯೋಜನೆ ಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಸಿದ್ಧತೆ ನಡೆದಿದೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ (ಕೆಆರ್ ಐಡಿಎಲ್) ವತಿಯಿಂದ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಸ್ತುವಾರಿಯಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹಾಸ್ಟೆಲ್ ಆರಂಭವಾಗಲಿದೆ.
ನೆಲ ಮಹಡಿ ಹಾಗೂ ಮೊದಲ ಅಂತಸ್ತಿನ ಕಟ್ಟಡ ಇದ್ದಾಗಿದ್ದು, ೮ ಕೊಠಡಿಗಳಿವೆ. ಸ್ನಾನ ಹಾಗೂ ಶೌಚ ಗೃಹಗಳು, ಭೋಜನಾಲಯ ನಿರ್ಮಿಸಲಾಗಿದೆ. ವಾಚನಾಲಯ, ವ್ಯಾಯಾಮ ಶಾಲೆ ನಿರ್ಮಿಸುವುದು ಬಾಕಿಯಿದೆ. ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ವಿದ್ಯುತ್ ಸಂಪರ್ಕ ನೀಡಿಕೆ ಪ್ರಗತಿಯಲ್ಲಿದೆ. ರ‍್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ.
೧ ವರ್ಷದ ಹಿಂದೆ ಕಾಮಗಾರಿ ಆರಂಭವಾಗಿ ಈಗ ಮುಕ್ತಾಯವಾಗಿದ್ದು, ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಕ್ರೀಡಾ ಇಲಾಖೆಯು ನಿರ್ಧರಿಸಿದೆ. ಇದಲ್ಲದೆ ನಗರದಲ್ಲಿ ಇನ್ನೂ ಕೆಲವು ಕಟ್ಟಡಗಳನ್ನು ಉದ್ಘಾಟಿಸುವ ಸಾಧ್ಯತೆಯಿದೆ.
ಕ್ರೀಡಾಂಗಣದಲ್ಲಿ ಈಗಾಗಲೇ ಬಾಲಕರ ಕ್ರೀಡಾ ಹಾಸ್ಟೆಲ್ ನಡೆಯುತ್ತಿದೆ. ಇಲ್ಲಿಯತನಕ ಬಾಲಕಿಯರಿಗೆ ಹಾಸ್ಟೆಲ್ ಇರಲಿಲ್ಲ. ಇದನ್ನು ಮನಗಂಡ ಕ್ರೀಡಾ ಇಲಾಖೆಯು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಆರಂಭಿಸಲು ಸಿದ್ದತೆ ಮಾಡಿಕೊಂಡಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ೫೦ ಮಕ್ಕಳಿಗೆ ಪ್ರವೇಶಾವಕಾಶ
ದೊರಕಲಿದೆ.
ಜಿಲ್ಲಾದ್ಯಂತ ಕ್ರೀಡೆಗಳಲ್ಲಿ ಆಸಕ್ತಿ ಇರುವ ಮಕ್ಕಳನ್ನು ಹಾಸ್ಟೆಲ್‌ಗೆ ದಾಖಲಿಸಿಕೊಂಡು ನಗರದ ವಿವಿಧ ಶಾಲೆಗಳಲ್ಲಿ ಪ್ರವೇಶ ಕೊಡಿಸ ಲಾಗುವುದು. ಅವರಿಗೆ ನುರಿತ ತರಬೇತು ದಾರರಿಂದ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಕೊಡಿಸಲಾಗುವುದು ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಸುತ್ತುಗೋಡೆ ಅಗತ್ಯವಿದೆ’
ಬಾಲಕಿಯರ ಕ್ರೀಡಾ ಹಾಸ್ಟೆಲ್‌ಅನ್ನು ಕ್ರೀಡಾಂಗಣದ ದಕ್ಷಿಣ ಭಾಗದಲ್ಲಿ ನಿರ್ಮಿಸಿದ್ದು ಸುತ್ತಮುತ್ತಲ ಪ್ರದೇಶ ಸಮತಟ್ಟಾಗಿಲ್ಲ. ಹಳ್ಳ-ದಿಣ್ಣೆಗಳಿಂದ ಕೂಡಿದೆ. ಕಟ್ಟಡದ ಆಸುಪಾಸಿನ ಜಾಗವನ್ನೆಲ್ಲ ಸಮತಟ್ಟು ಮಾಡಿ ಎತ್ತರದ ಸುತ್ತುಗೋಡೆ ನಿರ್ಮಿಸುವ ಅಗತ್ಯವಿದೆ. ಕಟ್ಟಡದ ಸುತ್ತಲೂ ಲೈಟಿಂಗ್ ವ್ಯವಸ್ಥೆ ಆಗಬೇಕಿದೆ. ಬಾಲಕಿಯರು ಹಾಸ್ಟೆಲ್‌ಗೆ ಹೋಗಿ ಬರಲು ಸಮರ್ಪಕ ರಸ್ತೆ ಆಗಬೇಕು. ಇದೆಲ್ಲವನ್ನು ಕ್ರೀಡಾ ಇಲಾಖೆಯು ಕಟ್ಟಡ ಉದ್ಘಾಟನೆಗೂ ಮೊದಲು ಮಾಡಬೇಕು. ಹಾಸ್ಟೆಲ್‌ನ ಕೊಳಚೆ ನೀರು ಚರಂಡಿ ಹೋಗಲು ಸೂಕ್ತ ಪೈಪ್‌ಲೈನ್ ಅಳವಡಿಸಬೇಕಿದೆ.
ಹಾಸ್ಟೆಲ್ ಕಟ್ಟಡದ ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ವಾಚನಾಲಯ, ವ್ಯಾಯಮ ಶಾಲೆ, ಕಾಂಪೌಂಡ್ ನಿರ್ಮಾಣ ಬಾಕಿಯಿದೆ. ಇವುಗಳನ್ನು ಶೀಘ್ರವೇ ಮುಗಿಸುತ್ತೇವೆ. –ಸುರೇಶ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಚಾ. ನಗರ