Mysore
21
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ರಂಗಸಮುದ್ರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ  

ಎಂ.ನಾರಾಯಣ

ಜಿಲ್ಲಾ ಮಟ್ಟದ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾದ ಮೈಸೂರು ಜಿಲ್ಲೆಯ ಏಕೈಕ ಗ್ರಾಮ ಪಂಚಾಯಿತಿ

ತಿ.ನರಸೀಪುರ: ಗ್ರಾಮೀಣ ಆಡಳಿತ ಸಂಸ್ಥೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ರಾಜ್ಯ ಸರ್ಕಾರವು ಕೊಡಮಾಡುವ ೨೦೨೪-೨೫ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ತಾಲ್ಲೂಕಿನ ರಂಗಸಮುದ್ರ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸುವ ಪಂಚಾಯಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುವ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಜಿಲ್ಲಾ ಮಟ್ಟದ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿರುವ ಮೈಸೂರು ಜಿಲ್ಲೆಯ ಏಕೈಕ ಗ್ರಾಮ ಪಂಚಾಯಿತಿ ಇದಾಗಿದೆ.

ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜ ನೆಗಳಾದ ಸ್ವಚ್ಛ ಭಾರತ್ ಮಿಷನ್, ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ವಸತಿ ಯೋಜನೆ, ತೆರಿಗೆ ವಸೂಲಾತಿ, ಶಾಲೆ ಮತ್ತು ಅಂಗನವಾಡಿಗಳ ಅಭಿವೃದ್ಧಿ, ಶೌಚಾಲಯಗಳ ನಿರ್ಮಾಣ, ಬೀದಿ ದೀಪ ಮತ್ತು ಮೂಲಸೌಕರ್ಯ, ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿಷೇಧ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ಅಭಿವೃದ್ಧಿಯಲ್ಲಿ ರಂಗಸಮುದ್ರ ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದೆ.

ಪ್ರಶಸ್ತಿಯು ಸ್ಮರಣಿಕೆ ಹಾಗೂ ೭ ಲಕ್ಷ ರೂ. ಮೊತ್ತದ ಸಹಾಯಧನವನ್ನು ಒಳಗೊಂಡಿರುತ್ತದೆ. ಬೆಂಗಳೂರಿನಲ್ಲಿ ಜರುಗುವ ಸಮಾರಂಭದಲ್ಲಿ ಸರ್ಕಾರದ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯ ಮೊತ್ತವನ್ನು ಗ್ರಾಮಗಳ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.

”  ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ತೆರಿಗೆ ಸಂಗ್ರಹಣೆಯಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಽಸಿ ತಾಲ್ಲೂಕಿನಲ್ಲೇ ಅಗ್ರ ಸ್ಥಾನದಲ್ಲಿರುವಂತೆ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವಂತೆ ಪ್ರಶಸ್ತಿಯು ಪ್ರೇರೇಪಿಸಿದೆ.”

-ಮೊಹಮ್ಮದ್ ಇಸ್ಹಾಕ್, ಪಿಡಿಒ, ರಂಗಸಮುದ್ರ ಗ್ರಾಪಂ

” ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಯನ್ನೇ ಧ್ಯೇಯವಾಗಿರಿಸಿ ನಮ್ಮ ಪಿಡಿಒ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಗಳನ್ನು ಮಾಡಲಾಗಿದೆ. ಅದಕ್ಕೆ ತಕ್ಕಂತೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿರುವುದು ಸಂತೋಷ ಉಂಟುಮಾಡಿದೆ.”

-ಸುಜಾತ ರಂಗಸ್ವಾಮಿ, ನಿಕಟಪೂರ್ವ ಅಧ್ಯಕ್ಷರು, ರಂಗಸಮುದ್ರ ಗ್ರಾಪಂ

 

 

Tags:
error: Content is protected !!