Mysore
24
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರ ಘೋಷಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಬರ ಘೋಷಿಸುತ್ತೇವೆ. ಪ್ರತಿ ವಾರವೂ ಬರ ಪರಿಸ್ಥಿತಿ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು. ಬರ ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿಯವರು ಕೂಡ ತಂಡ ಮಾಡಿಕೊಂಡು ಹೋಗಿದ್ದರು. ಆದರೆ ಆ ಬಗ್ಗೆ ಸದನದಲ್ಲಿ ಚರ್ಚೆಯೂ ಮಾಡಿಲ್ಲ. ಮುಖ್ಯಮಂತ್ರಿಗಳಿಗಾಗಲಿ, ಕಂದಾಯ ಸಚಿವನಾದ ನನಗಾಗಲಿ ವರದಿ ಅಥವಾ ಪತ್ರವನ್ನೂ ನೀಡಿಲ್ಲ.

ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದು ಹೈಕಮಾಂಡ್‌ಗೆ ಒತ್ತಾಯಿಸಿರುವುದಾಗಿ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ರಾಜೀನಾಮೆ ನೀಡುವ ವೇಳೆ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ್ದರು. ಅದನ್ನು ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡಿಲ್ಲ. ಉಪ ಮುಖ್ಯಮಂತ್ರಿಯಾಗಿ ನನ್ನನ್ನು ಮಾಡಬೇಕು ಎಂದೂ ಅವರು ಹೇಳಿದ್ದರು. ಹಾಗಾಗಿ ಸಿದ್ದರಾಮಯ್ಯನವರು ಹೇಳಿರುವುದು ಸತ್ಯ ಎಂದರು.

ನಾಗೇಂದ್ರ ಅವರ ರಾಜೀನಾಮೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗುರುವಾರ ಮುಖ್ಯಮಂತ್ರಿಗಳು ದಿಲ್ಲಿಗೆ ಹೋಗುತ್ತಾರೆ. ಹೈಕಮಾಂಡ್ ಭೇಟಿಯಾದರೆ ಅಲ್ಲಿ ಈ ಬಗ್ಗೆ ಚರ್ಚೆಗಳು ನಡೆಯಬಹುದು. ಸಂಪುಟ ಪುನರ್ ರಚನೆ ಊಹಾಪೋಹವಷ್ಟೇ. ಹೈಕಮಾಂಡ್ ತೀರ್ಮಾನದಂತೆ ಆಗುತ್ತದೆ ಎಂದು ತಿಳಿಸಿದರು. ಯಾವ ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಅವರ ಹೆಸರು ಇಲ್ಲ. ನಾನು ಗೃಹಸಚಿವನಾಗಿದ್ದವನು. ನನಗೆ ಮಾಹಿತಿ ಇದೆ. ಸಿಬಿಐ ತನಿಖೆ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಆಗುತ್ತದೆ. ಈ ವಿಚಾರದಲ್ಲಿ ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯವಷ್ಟೇ. ಸದನದಲ್ಲೂ ಪ್ರಶ್ನೆಗಳನ್ನು ಕೇಳಿ ಉತ್ತರಿಸಲು ನಾವು ಸಮರ್ಥರಿದ್ದೇವೆ ಎಂದು ಹೇಳಿದ್ದೆವು. ಆದರೆ ಈಗ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Tags:
error: Content is protected !!