Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳು

Fraud cases on the rise in Mandya district

ಮಂಡ್ಯ: ಜಿಲ್ಲೆಯಲ್ಲಿ ಇತ್ತೀಚೆಗೆ ವಂಚನೆ, ಕಳವು ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಬೆವರು ಸುರಿಸಿ ಗಳಿಸಿದ ಹಣವನ್ನು ದ್ವಿಗುಣ ಗೊಳಿಸಿಕೊಳ್ಳುವ ಆಸೆಗೆ ಬಿದ್ದು ಕಳೆದುಕೊಳ್ಳುತ್ತಿರುವ ಜನರು, ಹಣ ಡಬಲ್ ಮಾಡಿಕೊಡುತ್ತೇವೆಂಬ ವಂಚಕರ ಮೋಸದ ಜಾಲಕ್ಕೆ ಬಿದ್ದು ಹಣ ತೊಡಗಿಸಿದವರು ಇದ್ದದ್ದನ್ನೂ ಕಳೆದುಕೊಂಡು ಪಶ್ಚಾತ್ತಾಪ ಪಡುತ್ತಿದ್ದಾರೆ. ಮಾತ್ರವಲ್ಲ, ಹಲವರು ಜೀವವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಇಂತಹ ಘಟನೆಗಳು ಆರ್ಥಿಕ ಸಾಕ್ಷರತೆಯ ಕೊರತೆ ಯಿಂದ ಸಂಭವಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಓದು ಬಾರದವರು ಮಾತ್ರ ಮೋಸ ಹೋಗುತ್ತಿಲ್ಲ. ಮತ್ತೊಬ್ಬರಿಗೆ ತಿಳಿವಳಿಕೆ ಹೇಳುವ ಅಕ್ಷರ ಸ್ಥರೂ ವಂಚನೆಗೆ ಒಳಗಾಗುತ್ತಿದ್ದಾರೆ. ಎಲ್ಲಿಯವರೆಗೆ ಟೋಪಿ ಹಾಕಿಸಿಕೊಳ್ಳು ವ ವರಿರುತ್ತಾರೋ ಅಲ್ಲಿಯವರೆಗೆ ಟೋಪಿ ಹಾಕುವವರೂ ಇರುತ್ತಾರೆ ಎಂಬಂತಾಗಿದೆ.

ಸದ್ಯ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದೂ ಇದೇ. ಗ್ರಾಹಕರ ಚಿನ್ನವನ್ನು ಗಿರವಿ ಇಟ್ಟುಕೊಂಡಿದ್ದ ಖಾಸಗಿ ಕಂಪೆನಿಯ ಮಾಲೀಕರು, ಸುಮಾರು ೩ ಕೋಟಿ ರೂ. ಮೌಲ್ಯದ ೩ ಕೆ. ಜಿ. ಚಿನ್ನವನ್ನು ಕರಗಿಸಿ ಮಾರಾಟ ಮಾಡಿ ಗ್ರಾಹಕರಿಗೆ ವಂಚಿಸಿದ ಪ್ರಕರಣ, ದೇವರ ವಿಗ್ರಹ ಮತ್ತು ಹಳೆಯ ಮಸಿ ಹಿಡಿದಿರುವ ತಂಬಿಗೆಯನ್ನು ಮಹಿಳೆಯರಿಗೆ ತೋರಿಸಿ, ಇದರಿಂದ ಹಣವನ್ನು ದ್ವಿಗುಣ ಗೊಳಿಸುವುದಾಗಿ ನಂಬಿಸಿ ಕೋಟಿಗಟ್ಟಲೆ ಹಣವನ್ನು ಪಡೆದು ಮಂಕು ಬೂದಿ ಎರಚಿರುವ ಚಾಣಾಕ್ಷರು, ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಎಗರಿಸಿ ಪರಾರಿಯಾಗುವವರು, ಹತ್ತು, ಇಪ್ಪತ್ತು ರೂ. ನೋಟು ಗಳನ್ನು ಎಸೆದು, ರೀ ನಿಮ್ಮ ದುಡ್ಡು ಬಿದ್ದೋಗಿದೆ ನೋಡಿ ಎಂದು ತೋರಿಸಿ, ಬೇರೆಡೆ ಗಮನ ಸೆಳೆದು ಲಕ್ಷಾಂತರ ರೂ. ಎಗರಿಸುವ ನಯವಂಚಕರು. . ! ಇವರೆಲ್ಲ ಯಾವುದೋ ಯೂನಿವರ್ಸಿಟಿಯಲ್ಲಿ ಕಲಿತು ತರಬೇತಿ ಪಡೆದವರಲ್ಲ.

ವಂಚಕರು ತಾವು ಗುರಿ ಇಟ್ಟವರ ಒಳ್ಳೆಯತನ, ಸಂಭಾವಿತ ಗುಣಗಳನ್ನೇ ಎನ್‌ಕ್ಯಾಷ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೇಗ ಮೋಸಗಾರರ ಬಲೆಗೆ ಬೀಳುವವರು ಮಹಿಳೆಯರೇ ಹೆಚ್ಚು ಎಂಬುದು ವಂಚಕರ ಗಟ್ಟಿಯಾದ ನಂಬಿಕೆ. ಹಾಗಾಗಿ ಮೊದಲು ಇವರ ಸಂಪರ್ಕ ಸಾಽಸಿ ಶ್ರಮವಿಲ್ಲದೆ ಹೆಚ್ಚಿನ ಹಣ ಗಳಿಸಬಹುದೆಂಬ ವಿಚಾರವನ್ನು ತಲೆಗೆ ನಾಟಿಸುತ್ತಾರೆ. ಇವರ ಮಾತು ನಂಬಿದ ಮಹಿಳೆ ಇತರರಿಗೂ ಈ ಗುಟ್ಟನ್ನು ಹೇಳಿ ವಂಚಕರ ಬಲೆಗೆ ತಾವು ಬೀಳುವುದೂ ಅಲ್ಲದೆ, ತಮಗೆ ತಿಳಿದವರನ್ನೂ ವಂಚನೆಗೆ ಒಳಗಾಗುವಂತೆ ಪ್ರೇರೇಪಿಸುತ್ತಾರೆ. ಇದೆಲ್ಲ ಕೆಲ ದಿನಗಳ ಕಾಲ ಗುಟ್ಟಾಗೇ ನಡೆಯುವುದರಿಂದ ಯಾರಿಗೂ ಅನುಮಾನ ಬರುವುದಿಲ್ಲ. ಒಂದು ದಿನ ವಂಚಕನ ಮೊಬೈಲ್ ಸ್ವಿಚ್ ಆಫ್ ಆಯಿತೆಂದರೆ ಆತನನ್ನು ನಂಬಿ ಹಣ ಕಟ್ಟಿದ್ದವರ ಎದೆಬಡಿತ ಶುರುವಾಗುತ್ತದೆ. ಕೆಲವರು ಹಣ ಕೊಟ್ಟವರಿಗೆ ಉತ್ತರಿಸಲಾಗದೆ ನೇಣಿಗೆ ಕೊರ ಳೊಡ್ಡಿದರೆ, ಮತ್ತೆ ಕೆಲವರು ರಾತ್ರೋ ರಾತ್ರಿ ಊರು ಬಿಟ್ಟಿರುತ್ತಾರೆ!

ಹೀಗೆ ಮಂಡ್ಯ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ವಂಚನೆಯ ಜಾಲದ ಕಬಂಧ ಬಾಹುಗಳು ಇನ್ನಷ್ಟು ವಿಸ್ತರಿಸಿಕೊಂಡು ಮತ್ತಷ್ಟು ಜೀವಗಳು ಬಲಿಯಾಗುವ ಮುನ್ನ, ಮತ್ತಷ್ಟು ಕುಟುಂಬಗಳು ಬೀದಿಗೆ ಬೀಳುವ ಮುನ್ನ ಜನತೆಗೆ ನಯವಂಚಕರ ಬಗ್ಗೆ ಜನ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

ಮತ್ತೊಂದೆಡೆ ಹೆಚ್ಚು ಬುದ್ಧಿವಂತರೆನಿಸಿಕೊಂಡ ಟೆಕ್ಕಿಗಳು, ಅನೇಕ ಅಧಿಕಾರಿಗಳು, ಉದ್ಯಮಿಗಳು, ವಾಣಿಜ್ಯೋದ್ಯಮಿಗಳು ಕೂಡ ಸೈಬರ್ ವಂಚಕರಿಂದ ವಂಚನೆಗೊಳಗಾಗುತ್ತಿದ್ದಾರೆ. ತಿಳಿದೋ ತಿಳಿಯದೆಯೋ ಮೊಬೈಲ್ ವಾಟ್ಸಾಪ್, ಸಾಮಾಜಿಕ ಜಾಲ ತಾಣದಲ್ಲಿ ಸಿಲುಕಿಕೊಂಡವರು ಸೈಬರ್ ಕ್ರೈಂ ವಿಭಾಗದ ಪೊಲೀಸರ ಮುಂದೆ ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾ ಚುತ್ತಿದ್ದಾರೆ. ಸಾಕಷ್ಟು ಮಂದಿ ಪೊಲೀಸರ ಮುಂದೆ ಹೋದರೆ ನಮ್ಮ ಖಾಸಗಿ ವಿಷಯ ಬಹಿರಂಗ ವಾಗುತ್ತದೆಂದು ಹೆದರಿ ಸುಮ್ಮನೆ ಉಳಿದು , ನೊಂದು ಬೇಯುತ್ತಿರುವವರೂ ಇದ್ದಾರೆ. ಎಲ್ಲವನ್ನೂ ಅದೃಷ್ಟ ಸರಿಯಿಲ್ಲ, ಟೈಮ್ ಸರಿಯಿಲ್ಲ ಎಂದು ಭಾವಿಸಿ ಸುಮ್ಮನೆ ಕೂರುವ ಬದಲು ನಾವೂ ಜಾಗೃತರಾಗಿ ಇತರ ರನ್ನು ವಂಚಕರ ಜಾಲಕ್ಕೆ ಸಿಲುಕದಂತೆ ಎಚ್ಚರಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಬೇಕು.

ಜನಸಾಮಾನ್ಯರು ಇಂತಹ ವಂಚನೆಗಳ ಬಗ್ಗೆ, ನಯವಾದ ಮಾತುಗಳಿಂದ ಮೋಸ ಮಾಡುವವರ ಬಗ್ಗೆ ಜಾಗೃತಗೊಳ್ಳಬೇಕಿದೆ. ವಂಚಕರು ಮಹಿಳೆಯರನ್ನೇ ಹೆಚ್ಚು ಗುರಿಯಾಗಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಬಹುತೇಕ ಮಹಿಳೆಯರು ತಮ್ಮ ಪತಿಗೆ ತಿಳಿಯದಂತೆ ಹಣಕಾಸಿನ ವ್ಯವಹಾರ ಮಾಡಿರುತ್ತಾರೆ. ಮೋಸವಾಗಿದೆ ಎಂಬುದು ತಿಳಿಯುವಷ್ಟರಲ್ಲಿ ವಂಚಕರು ಪರಾರಿಯಾಗಿರುತ್ತಾರೆ. ಚಿನ್ನಾಭರಣ, ನಗದು ಸೇರಿದಂತೆ ಎಲ್ಲ ರೀತಿಯಲ್ಲೂ ಯಾಮಾರಿಸುವ ಸುದ್ದಿಗಳು ಹೆಚ್ಚುತ್ತಿವೆ. ಹಾಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಜಾಗೃತಿ ಅಭಿಯಾನ ನಡೆಸಿ ಜನರನ್ನು ಎಚ್ಚರಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧಿಕ್ಷಕರು, ಮಂಡ್ಯ

– ಹೇಮಂತ್‌ ಕುಮಾರ್

Tags:
error: Content is protected !!