ಮೈಸೂರು ವಿವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪರದಾಟ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ನಾಲ್ಕು ವರ್ಷಗಳ ಹಿಂದೆ ಇಂಜಿನಿಯರಿಂಗ್ ಕಾಲೇಜು ಆರಂಭಿಸುತ್ತಿದ್ದಂತೆ, ಸಾಕಷ್ಟು ಬಡಮಕ್ಕಳ ಎದೆಯೊಳಗೆ ಇಂಜಿನಿಯರ್ ಆಗಿ ಬದುಕು ಕಟ್ಟಿಕೊಳ್ಳುವ ಕನಸು ಟಿಸಿಲೊಡೆದಿತ್ತು. ಅನೇಕ ವಿದ್ಯಾರ್ಥಿಗಳು ವಿವಿ ಕಾಲೇಜಿಗೆ ಸೇರ್ಪಡೆಯಾದರು. ಆದರೆ, ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿಸಿ ತಿಂಗಳುಗಳೇ ಕಳೆದರೂ ಫಲಿತಾಂಶವೇ ಪ್ರಕಟವಾಗಿಲ್ಲ…
ಹಾಗಾಗಿ ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಮೈಸೂರು ವಿವಿಯು ೨೦೨೦-೨೧ನೇ ಸಾಲಿನಲ್ಲಿ ಮಾನಸಗಂಗೋತ್ರಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಿದ್ದು, ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಮೆಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಆಂಡ್ ಡಿಸೈನಿಂಗ್, ಬಯೋಮೆಡಿಕಲ್ ಆಂಡ್ ರೊಬೊಟಿಕ್ಸ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ವಿಭಾಗಗಳನ್ನು ತೆರೆದಿದೆ. ಕಾಲೇಜು ಆರಂಭವಾದ ವರ್ಷದ ಮೊದಲ ತಂಡದ ವಿದ್ಯಾರ್ಥಿಗಳಿಗೆ ನಾಲ್ಕನೇ ವರ್ಷದ ೮ನೇ ಸೆಮಿಸ್ಟರ್ ಪರೀಕ್ಷೆಗಳು ಮುಕ್ತಾಯವಾಗಿವೆ. ಆದರೆ, ಇಲ್ಲಿಯವರೆಗೂ ಫಲಿತಾಂಶವನ್ನು ಪ್ರಕಟಿಸಿಲ್ಲ. ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೂ ಹೋಗಲಾಗದೆ, ಉದ್ಯೋಗಕ್ಕೂ ಪ್ರಯತ್ನಿಸಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ.
ಡೇಟಾ ಎಂಟ್ರಿ ಸಮಸ್ಯೆ: ವಿದ್ಯಾರ್ಥಿಗಳು ಮತ್ತು ಪೋಷಕರು, ಫಲಿತಾಂಶ ಪ್ರಕಟಿಸುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡುತ್ತಲೇ ಇದ್ದಾರೆ. ಡೇಟಾ ಎಂಟ್ರಿ ಸಮಸ್ಯೆಯಿಂದ ಫಲಿತಾಂಶ ಪ್ರಕಟಿಸಲಾಗುತ್ತಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯೇ ಸ್ವತಃ ಡೇಟಾ ಎಂಟ್ರಿ ಮಾಡಿ ಫಲಿತಾಂಶ ಪ್ರಕಟಿಸಬಹುದು. ಆದರೆ, ಇವರು ಮತ್ಯಾರಿಗೋ ಈ ಕೆಲಸವನ್ನು ವಹಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶದ ಬಗ್ಗೆ ನಿಷ್ಠುರವಾಗಿ ಪ್ರಶ್ನಿಸಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ. ಇಂಟರ್‌ನಲ್ ಅಂಕಗಳನ್ನು ಕಡಿಮೆ ಕೊಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅಂತಿಮ ವರ್ಷದ ೮ನೇ ಸೆಮಿಸ್ಟರ್ ಫಲಿತಾಂಶ ಮಾತ್ರವಲ್ಲ, ಮೊದಲನೇ ವರ್ಷದ ೨ನೇ, ದ್ವಿತೀಯ ವರ್ಷದ ೪ನೇ, ತೃತೀಯ ವರ್ಷದ ೬ನೇ ಸೆಮಿಸ್ಟರ್‌ನ ಫಲಿತಾಂಶಗಳನ್ನೂ ಪ್ರಕಟಿಸಿಲ್ಲ.
ಇದನ್ನು ಓದಿ: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹೆಚ್ಚಿದ ಹುಲಿ ಭೀತಿ
ಮೊದಲನೇ ವರ್ಷವೇ ಅಧ್ವಾನ?: ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬಹುತೇಕ ವಿದ್ಯಾರ್ಥಿಗಳು ವಿವಿಯಲ್ಲಿ ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದಿದ್ದರು. ಹೀಗಾಗಿ ಪ್ರಥಮ ವರ್ಷದ ಫಲಿತಾಂಶದ ಮೂಲಕ ಕಾಲೇಜು ಸೇರಲು ಬಯಸುವ ವಿದ್ಯಾರ್ಥಿಗಳ ಆಹ್ವಾನಕ್ಕೆ ಮಾದರಿಯಾಗಬೇಕಾಗಿತ್ತು. ಆದರೆ, ಶೈಕ್ಷಣಿಕ ಆಡಳಿತ ಮಂಡಳಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ. ಇದು ಖಾಸಗಿ ಕಾಲೇಜುಗಳತ್ತ ಮುಖ ಮಾಡಲು ಎಡೆಮಾಡಿಕೊಡುತ್ತಿದೆ ಎಂಬುದು ಕೆಲ ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯ.
ಕ್ಯಾಂಪಸ್ ಸೆಲೆಕ್ಷನ್ ನಡೆಸಿಲ್ಲ: ಖಾಸಗಿ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪ್ರತಿ ವರ್ಷವೂ ಪ್ರತಿಷ್ಠಿತ ಎಂಎನ್‌ಸಿಗಳು ಸೇರಿದಂತೆ ಹಲವು ಕಂಪೆನಿಗಳನ್ನು ಆಹ್ವಾನಿಸಿ, ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಕಡ್ಡಾಯವಾಗಿದೆ. ಆದರೆ, ಈ ಕಾಲೇಜಿನಲ್ಲಿ ಈ ಪ್ರಕ್ರಿಯೆ ನಡೆಸಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡರು.
ನಗರದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಫಲಿತಾಂಶ ಪ್ರಕಟವಾಗಿದ್ದು, ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಿದ್ಯಾರ್ಥಿಗಳು ಉದ್ಯೋಗಕ್ಕೆ ತೆರಳುವ ಅವಕಾಶ ಲಭ್ಯವಾಗಿದೆ. ಆದರೆ, ಈ ಕಾಲೇಜಿನಲ್ಲಿ ಫಲಿತಾಂಶವೇ ಬಂದಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾದರೆ, ಅದಕ್ಕೆ ಮೈಸೂರು ವಿವಿಯೇ ಹೊಣೆಯಾಗಬೇಕಾಗುತ್ತದೆ ಎಂದು ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ವ್ಯಾಸಂಗದ ಕನಸಿಗೆ ಅಡ್ಡಿ: ಎಂಟೆಕ್ ಮುಗಿಸಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವುದು ನನ್ನ ಗುರಿಯಾಗಿದೆ. ಆದರೆ, ಫಲಿತಾಂಶ ಪ್ರಕಟ ವಿಳಂಬವಾಗುತ್ತಿರುವುದು ನಾನು ಸ್ನಾತಕೋತ್ತರ ಪದವಿಗೆ ಸೇರಲು ತೊಡಕಾಗಿದೆ. ಕೂಡಲೇ -ಲಿತಾಂಶ ಬಾರದಿದ್ದರೆ, ಒಂದು ವರ್ಷ ವ್ಯರ್ಥವಾಗಲಿದೆ. ಇದಕ್ಕೆ ಯಾರು ಹೊಣೆ ಎಂಬುದು ವಿದ್ಯಾರ್ಥಿಯೊಬ್ಬರ ಹತಾಶೆಯ ಪ್ರಶ್ನೆಯಾಗಿದೆ.
” ಖಾಸಗಿ ಕಂಪೆನಿಯೊಂದಕ್ಕೆ -ಲಿತಾಂಶ ಪ್ರಕಟಿಸಲು ಟೆಂಡರ್ ನೀಡಲಾಗಿತ್ತು. ಆದರೆ, ಕಂಪೆನಿ ಜತೆಗಿನ ಒಪ್ಪಂದ ಮುಗಿದ ಕಾರಣ, ಫಲಿತಾಂಶ ವಿಳಂಬವಾಗಿದೆ. ಒಂದೆರಡು ದಿನಗಳಲ್ಲಿ ಪ್ರಕಟವಾಗಲಿದೆ. ಆದರೆ, ಪ್ರತಿನಿತ್ಯ ಒಂದೆರಡು ವಿಷಯಗಳ ಫಲಿತಾಂಶವನ್ನು ಮಾತ್ರ ಪ್ರಕಟಿಸಲು ಸಾಧ್ಯ.
ವಿಜಯ್, ಅಧಿಕ್ಷಕ, ಮೈವಿವಿ ಇಂಜಿನಿಯರಿಂಗ್ ಕಾಲೇಜು
” ತಾಂತ್ರಿಕ ದೋಷದಿಂದ ಫಲಿತಾಂಶ ಪ್ರಕಟವಾಗಿಲ್ಲ ಈ ಬಾರಿ ಹಸ್ತಚಾಲಿತ ಮೌಲ್ಯಮಾಪನ ನಡೆಸಲಾಗಿದೆ. ಸದ್ಯದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕ್ಯಾಂಪಸ್ ಸಂದರ್ಶನಗಳು ನಡೆದು, ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಉದ್ಯೋಗವೂ ದೊರೆತಿದೆ.”
ಡಾ.ಎಂ.ಎಸ್.ಗೋವಿಂದೇಗೌಡ, ಪ್ರಾಂಶುಪಾಲ





