ಮೈಸೂರಿನ ದಾಸಪ್ಪ ವೃತ್ತದಿಂದ ಧನ್ವಂತರಿ ರಸ್ತೆಯ ಬಲಗಡೆಯಲ್ಲಿ ಹೂ ಮಾರುತ್ತಾ, ರಂಗಣ್ಣ ನಾಯಕ ಅವರು ಪ್ರತಿ ದಿನ ಕುಳಿತಿರುತ್ತಾರೆ. ಬೆಳಿಗ್ಗೆ ಏಳು ಎಂಟು ಗಂಟೆಗೆ ಶುರುವಾಗುವ ಕೆಲಸ ಮುಗಿಯುವಾಗ ರಾತ್ರಿಯ ಹೊತ್ತಾಗಿರುತ್ತದೆ.
ರಂಗಣ್ಣ ನಾಯಕ ಮೈಸೂರಿಗೆ ಬಂದು ಹದಿನೈದು ವರ್ಷಗಳಾಗಿವೆ. ಈ ಮೊದಲು ಕೊಳ್ಳೇಗಾಲದಲ್ಲಿ ಹೂವಿನ ವ್ಯಾಪಾರವನ್ನೇ ಮಾಡುತ್ತಿದ್ದ ರಂಗಣ್ಣ ಅವರಿಗೆ ಮೈಸೂರಿಗೆ ಬರಬೇಕೆನಿಸಿದ್ದೇ ಅಚ್ಚರಿ. ತನ್ನೂರನ್ನು ಬಿಟ್ಟು, ಮೈಸೂರಿಗೆ ಬಂದಾಗ ಹೊಂದಿಕೊಳ್ಳುವುದಕ್ಕೆ ಕಷ್ಟ ವೆನಿಸಿದರೂ ವ್ಯಾಪಾರದ ಗುಟ್ಟು ತಿಳಿದ ಕಾರಣ ಬದುಕು ಸರಾಗವಾಯಿತು. ರಂಗಣ್ಣ ಅವರ ಬಳಿ ಸಿಗುವುದು ಚೆಂಡು ಹೂ ಮಾತ್ರ. ಮಲ್ಲಿಗೆ, ಸೇವಂತಿಗೆ ಹೂಗಳನ್ನು ಏಕೆ ಮಾರುತ್ತಿಲ್ಲವೆಂದರೆ ಇವರು ಹೇಳುವುದು ಲಾಭವಿಲ್ಲ ಎಂಬ ಒಂದೇ ಉತ್ತರ. ಮೈಸೂರಿನಲ್ಲಿ ನಿರಂತರವಾಗಿ ಸುರಿವ ಮಳೆಯ ನಡುವೆಯೂ ಟಾರ್ಪಲ್ ಕಟ್ಟಿಕೊಂಡು, ಹೂ ಮಾರುತ್ತಾರೆ. ದುಡ್ಡಿಗೆ ಚರ್ಚಿಸುವ ಗ್ರಾಹಕರ ಬಗೆಗಾಗಲಿ, ವ್ಯಾಪಾರವನ್ನು ಸಂಕಷ್ಟಕ್ಕೀಡುಮಾಡಿದ ಮಳೆಯ ಬಗೆಗಾಗಲಿ ಇವರಿಗೆ ಯಾವ ಬೇಸರವೂ ಇಲ್ಲ. ಮನುಷ್ಯ, ಪ್ರಕೃತಿ ಇರಬೇಕಾದದ್ದೇ ಹಾಗೆ ಎನ್ನುತ್ತಾರೆ.