ಕೆ.ಬಿ.ರಮೇಶನಾಯಕ
ಮೈಸೂರು: ಒಂದೆಡೆ ನಿರೀಕ್ಷಿತ ಮಳೆಯಾಗದೆ ಜಲಾಶಯಗಳು ತುಂಬದೇ ಇರುವುದು ರೈತ ಸಮುದಾಯ ವನ್ನು ಚಿಂತೆಗೀಡು ಮಾಡಿದೆ. ಇನ್ನೊಂದೆಡೆ ಮುಂದಿನ ದಿನಗಳಲ್ಲಿ ಜಿಲ್ಲೆಯ ೭೪ ಗ್ರಾಮ ಪಂಚಾಯಿತಿಗಳ ೧೧೧ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಆತಂಕ ಎದುರಾಗಿದೆ.
ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಯಾವುದೇ ದೂರು ಬಾರದಂತೆ ಎಚ್ಚರಿಕೆ ವಹಿಸಬೇಕೆಂಬ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಕಟ್ಟುನಿಟ್ಟಿನ ಸೂಚನೆಗೆ ಎಚ್ಚೆತ್ತ ಜಿಲ್ಲಾಡಳಿತ, ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಮಾಡಲು ಮುಂದಾಗಿದೆ.
ನೀರಿನ ಸಮಸ್ಯೆ ನಿರ್ವಹಿಸಲು ಪ್ಲಾನ್ ಮಾಡಿರುವ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು ಬೋರ್‌ವೆಲ್‌ಗಳು ಬತ್ತಿ ಹೋಗಿರುವ ಕಡೆಗಳಲ್ಲಿ ರೀಡ್ರಿಲ್ ಮಾಡುವುದು, ಖಾಸಗಿ ಕೊಳವೆ ಬಾವಿಗಳ ಸಂಪರ್ಕದಿಂದ ನೀರು ಪಡೆಯುವುದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಮುಂತಾದ ಕಾರ್ಯಯೋಜನೆಗೆ ಮುಂದಾಗಿದೆ. ಎಲ್‌ನಿನೊ ಪ್ರಭಾವದಿಂದ ಈ ಬಾರಿ ಮುಂಗಾರು ವ್ಯತ್ಯಾಸವಾಗಿದ್ದು, ವಯನಾಡು, ಭಾಗಮಂಡಲ ಮೊದಲಾದ ಭಾಗಗಳಲ್ಲಿ ವಾಡಿಕೆಯಂತೆ ಮಳೆಯಾಗದಿರುವುದರಿಂದ ಜಲಾಶಯದ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ. ಕಬಿನಿ, ಕೆಆರ್‌ಎಸ್ ಜಲಾಶಯಗಳಲ್ಲಿ ೧೦ ಅಡಿ ನೀರು ಹೆಚ್ಚಾದರೂ ಒಳಹರಿವು ಹೆಚ್ಚಾಗದಿರುವುದು ಅಧಿಕಾರಿಗಳ ವಲಯದಲ್ಲಿ ಕೊಂಚ ಆತಂಕ ಮೂಡಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಈಗಾಗಲೇ ಜನವರಿ ತಿಂಗಳಿಂದ ಜುಲೈವರೆಗೆ ೧೫೪ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರಲ್ಲಿ ೧೨೪ ಕೊಳೆವೆ ಬಾವಿಗಳು ಸಫಲವಾಗಿವೆ. ೩೧ ವಿಫಲವಾಗಿವೆ. ಎಚ್.ಡಿ.ಕೋಟೆ ತಾಲ್ಲೂಕಿನ ಐದು ಗ್ರಾಮಗಳು, ತಿ.ನರಸೀಪುರ ತಾಲ್ಲೂಕಿನ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಕೊಳವೆ ಬಾವಿಗಳ ಮೂಲಕ ೯ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಗುರುತಿಸಿರುವ ಗ್ರಾಮಗಳಿಗೆ ಅಗತ್ಯವಿರುವ ಕೊಳವೆ ಬಾವಿಗಳ ಆಳ ಹೆಚ್ಚಿಸುವುದು (ರೀಡ್ರಿಲ್), ಹೊಸ ಕೊಳವೆ ಬಾವಿ ಕೊರೆಸುವುದು. ಖಾಸಗಿ ಕೊಳವೆ ಬಾವಿ ಮೂಲಕ ಸಂಪರ್ಕ ಕಲ್ಪಿಸುವುದಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ
” ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದು, ಅಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯುವುದು, ರೀಡ್ರಿಲ್ ಮಾಡಲಾಗುತ್ತಿದೆ. ಯಾವುದೇ ದೂರುಗಳು ಬರದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀರಿನ ಸಮಸ್ಯೆ ನಿರ್ವಹಿಸಲು ಸೂಚನೆ ನೀಡಲಾಗಿದೆ.”
-ರಾಮಸ್ವಾಮಿ, ಕಾರ್ಯಪಾಲಕ ಅಭಿಯಂತರರು
ನಗರಗಳಿಗೆ ಸದ್ಯಕ್ಕಿಲ್ಲ ನೀರಿನ ಸಮಸ್ಯೆ:
ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಲಭ್ಯತೆ ಆಧಾರದಲ್ಲಿ ೯ ತಿಂಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಗರಾಭಿವೃದ್ಧಿ ಸಚಿವ ಯತೀಂದ್ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಸದ್ಯ ೩೦ ಟಿಎಂಸಿ ನೀರು ಲಭ್ಯವಿರುವುದರಿಂದ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಮುಂದಿನ ೯ ತಿಂಗಳುಗಳವರೆಗೆ ಕುಡಿಯುವ ನೀರಿನ ಕೊರತೆಯಾಗುವುದಿಲ್ಲ ಎಂದು ಹೇಳಲಾಗಿದೆ.





