Mysore
21
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ದುಬಾರಿ ಬಾಡಿಗೆ: ಬಾಡಿಗೆದಾರರಿಲ್ಲದೆ ಖಾಲಿ ಬಿದ್ದ ಮಳಿಗೆಗಳು  

ಭೇರ್ಯ ಮಹೇಶ್

ಭೇರ್ಯ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಳಿಗೆಗಳು ತೆರೆಯದೆ ಪ್ರಯಾಣಿಕರಿಗೆ ಸಮಸ್ಯೆ

ಭೇರ್ಯ: ಭೇರ್ಯ ಗ್ರಾಮದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಬಾಡಿಗೆದಾರರಿಲ್ಲದೆ ಖಾಲಿ ಬಿದ್ದಿರುವುದು ಸ್ಥಳೀಯವಾಗಿ ದೊಡ್ಡ ಸಮಸ್ಯೆಯಾಗಿದೆ. ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣ ವನ್ನು ಖರ್ಚು ಮಾಡಿ ಕಟ್ಟಿರುವ ಈ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡಗಳು ಈಗ ಯಾರಿಗೂ ಉಪಯೋಗವಿಲ್ಲದೆ ಬಿಕೋ ಎನ್ನುತ್ತಿವೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಟ್ಟಿದ ನಂತರ, ಅದನ್ನು ಸರಿಯಾಗಿ ನಿರ್ವಹಿಸದೆ ಹಾಗೆಯೇ ಬಿಟ್ಟಿರುವುದು ನಿಗಮದ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಕಳೆದ ೨ ವರ್ಷಗಳಿಂದ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳು ಖಾಲಿ ಬಿದ್ದಿವೆ. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಭೇರ್ಯ ಗ್ರಾಮ ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಸಂಪರ್ಕದ ಗ್ರಾಮವಾಗಿದೆ. ಹಾಸನಕ್ಕೆ ೬೦ ಕಿ.ಮೀ.ಇದ್ದರೆ ಅದೇ ರೀತಿ ಮೈಸೂರಿಗೂ ಕೂಡ ೬೦ ಕಿ.ಮೀ. ದೂರದಲ್ಲಿದೆ. ಹಾಗಾಗಿ ಎರಡೂ ಜಿಲ್ಲೆಗಳಿಂದ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಭೇರ್ಯ ಬಸ್ ನಿಲ್ದಾಣದಲ್ಲಿ ಹತ್ತು ನಿಮಿಷ ವಿಶ್ರಮಿಸಿ ಹೋಗಬಹುದಾಗಿದೆ. ಇಲ್ಲಿನ ಹೋಟೆಲ್, ವಾಣಿಜ್ಯ ಅಂಗಡಿಗಳಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು.

ಪ್ರಯಾಣಿಕರು, ಬಸ್ ಚಾಲಕರು, ನಿರ್ವಾಹಕರು ಬೆಳಿಗ್ಗೆ ಸಮಯದಲ್ಲಿ ಕಾಫಿ, ತಿಂಡಿ, ತಿನಿಸುಗಳನ್ನು ತಿಂದು ಪ್ರಯಾಣ ಮಾಡುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಊಟ, ರಾತ್ರಿ ವೇಳೆಯಲ್ಲಿ ಊಟ, ಕಾಫಿ, ಟೀ ಕುಡಿದು ಪ್ರಯಾಣಿಸುತ್ತಿದ್ದರು. ಭೇರ್ಯ ಗ್ರಾಮ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಮುಖ ಕೇಂದ್ರವಾಗಿದ್ದರೂ, ನಿಗದಿಪಡಿಸಿರುವ ದುಬಾರಿ ಬಾಡಿಗೆ ಹಾಗೂ ಕಠಿಣ ನಿಯಮಗಳಿಂದಾಗಿ ಸ್ಥಳೀಯ ವ್ಯಾಪಾರಿ ಗಳು ಮಳಿಗೆಗಳನ್ನು ಹರಾಜು (ಟೆಂಡರ್) ಪಡೆಯಲು ಮುಂದೆ ಬರುತ್ತಿಲ್ಲ ಎಂಬ ಆರೋಪ ಈಗ ಕೇಳಿಬರುತ್ತಿದೆ.

ಮಳಿಗೆಗಳು ಖಾಲಿಯಾಗಿರುವುದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕುಡಿ ಯುವ ನೀರು, ಲಘು ಉಪಾಹಾರ, ಊಟ ಹಾಗೂ ದಿನಬಳಕೆಯ ವಸ್ತುಗಳು ಸಿಗುತ್ತಿಲ್ಲ ಎಂದು ಪ್ರಯಾಣಿಕರು ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣವು ಜನರಿಲ್ಲದೆ ಬಿಕೋ ಎನ್ನುತ್ತಿರುವುದರಿಂದ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ಅಥವಾ ಕಿಡಿಗೇಡಿಗಳ ತಾಣವಾಗಿ ಮಾರ್ಪಡುವ ಆತಂಕ ಎದುರಾಗಿದೆ.

” ಭೇರ್ಯ ಬಸ್ ನಿಲ್ದಾಣದಲ್ಲಿ ಮಳಿಗೆಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಿ, ಗ್ರಾಮೀಣ ಮಟ್ಟಕ್ಕೆ ತಕ್ಕಂತೆ ಕಡಿಮೆ ಮಾಡಬೇಕು. ಹೊರ ಜಿಲ್ಲೆ ಅಥವಾ ಹೊರಗಿನವರಿಗೆ ಆದ್ಯತೆ ನೀಡುವ ಬದಲು ಸ್ಥಳೀಯರಿಗೆ ಆದ್ಯತೆ ನೀಡಬೇಕು. ಬಸ್ ನಿಲ್ದಾಣದಲ್ಲಿ ವ್ಯಾಪಾರ-ವಹಿವಾಟು ಇಲ್ಲದೆ ಪ್ರಯಾಣಿಕರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ.”

-ತನು (ತನ್ವೀರ್), ಯುವ ಮುಖಂಡ, ಭೇರ್ಯ

” ಮಳಿಗೆಗಳಿಗೆ ದುಪ್ಪಟ್ಟು ಬಾಡಿಗೆ ನಿಗದಿ ಮಾಡಿರುವುದರಿಂದ ಯಾರೂ ಕೂಡ ಬಾಡಿಗೆಗೆ ಬರುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ನಿಲ್ದಾಣಕ್ಕೆ ಬಸ್‌ಗಳೇ ಬರುತ್ತಿಲ್ಲ. ಹಾಗಾಗಿ ಗ್ರಾಮದ ನಿರುದ್ಯೋಗಿ ಯುವಕರಿಗೆ, ಸಣ್ಣ ವ್ಯಾಪಾರಿಗಳಿಗೆ ಅಥವಾ ಮಹಿಳಾ ಸ್ವಸಹಾಯ ಸಂಘಗಳಿಗೆ ಕಡಿಮೆ ಬಾಡಿಗೆಯನ್ನು ನಿಗದಿಪಡಿಸಿ, ಅವಕಾಶ ನೀಡಬೇಕು.”

-ಮಹೇಶ್ ನಾಯಕ, ಗ್ರಾಮಸ್ಥರು

” ಅಂಗಡಿ ಮಳಿಗೆಗಳ ಬಾಡಿಗೆಯನ್ನು ಸರ್ಕಾರ ನಿಗದಿ ಮಾಡಿದೆ. ಅದರಂತೆ ಬಾಡಿಗೆ ನಿಗದಿ ಮಾಡಲಾಗಿದೆ. ಮತ್ತೆ ಮರು ಟೆಂಡರ್ ಕರೆಯುತ್ತೇವೆ. ಆಸಕ್ತರು ಭಾಗವಹಿಸಬಹುದು.”

-ಎ.ಡಿ.ಕುಮಾರ್, ಡಿಪೋ ವ್ಯವಸ್ಥಾಪಕರು, ಕೆ.ಆರ್.ನಗರ

 

 

Tags:
error: Content is protected !!