ಎಂ.ಕೀರ್ತನ
ವಯಸ್ಸು ದೇಹಕ್ಕೆ ಮಾತ್ರ ಮನಸ್ಸಿಗಲ್ಲ, ದುಡಿಯುವ ಕೈಗಳಿಗೆ ಅಲ್ಲ ಅನ್ನುವುದು ಎಷ್ಟು ಸತ್ಯ ಅಲ್ವಾ! ಈಗ ನಾನು ಹೇಳ ಹೊರಟಿರುವುದು ಇಂತಹದ್ದೇ ಒಂದು ಅಜ್ಜಿಯ ಕತೆ.
ಈ ಅಜ್ಜಿಯನ್ನು ನಾನು ಎರಡು ಮೂರು ವರ್ಷಗಳಿಂದ ನೋಡುತ್ತಾ ಇದ್ದೇನೆ. ದೇವಸ್ಥಾನದ ಮುಂದೆ ಪ್ರತಿ ದಿನ ಹೂವು ಮಾರುತ್ತಾ ಕುಳಿತಿರುತ್ತಾರೆ. ಇಷ್ಟು ವಯಸ್ಸಾ ದರೂ ಈ ಅಜ್ಜಿ ಏಕೆ ಹೂವು ಮಾರಲು ಬರುತ್ತದೋ? ಎಂದುಕೊಳ್ಳುತ್ತಿದ್ದೆ. ಆಗೆಲ್ಲ ಅವರನ್ನು ಮಾತನಾಡಿಸಬೇಕು ಅನಿಸಿರಲಿಲ್ಲ. ಹೀಗೆ ಒಂದು ದಿನ ಟೀ ಅಂಗಡಿಗೆ ಬಂದು ಅದೇ ಅಂಗಡಿ ಯಲ್ಲಿ ಟೀ ಕುಡಿಯುತ್ತಿದ್ದ ನನ್ನ ಪಕ್ಕದಲ್ಲಿಯೇ ಕುಳಿತರು. ನನ್ನ ಕೈಗೆ ಒಂದು ಮೊಳ ಹೂ ನೀಡಿದ ಅಜ್ಜಿ ಟೀ ಅಂಗಡಿಯವರಿಗೆ ಕೊಡಲು ಹೇಳಿದರು.
ಇಪ್ಪತ್ತು ರೂಪಾಯಿ ಇರಬಹುದು ಒಂದು ಮೊಳ ಹೂವಿಗೆ. ನಾನು ಹೂವನ್ನು ಅಂಗಡಿ ಯವರ ಕೈಗೆ ಕೊಟ್ಟು ಟೀ ಕುಡಿಯುತ್ತಿದ್ದೆ. ಆಗ ಅವರಾಡಿದ ಮಾತು ಕಿವಿಗೆ ಬಿತ್ತು.
‘ನೋಡು ಪಾಪ ಇಷ್ಟು ವಯಸ್ಸಾದರೂ ಅವರೇ ದುಡಿಯಬೇಕು. ಮಗ ಸತ್ತು ಹೋದನಂತೆ. ಸತ್ತು ಹೋಗಿ ಆರು ತಿಂಗಳೇ ಆಯ್ತು. . . ’ ಹೀಗೆ ಅವರ ಮಾತುಗಳನ್ನು ಕೇಳಿದ ನಾನು ಆ ಅಜ್ಜಿ ಕಡೆ ಒಮ್ಮೆ ನೋಡಿದೆ. ಯಾಕೋ ಏನೋ ಆ ಅಜ್ಜಿಯನ್ನು ಒಮ್ಮೆ ಮಾತಾಡಿಸಬೇಕು ಎನ್ನುವ ಆಸೆ ಆಯಿತು.
ಅಂಗಡಿಯಿಂದ ಹೋಗುತ್ತಿದ್ದ ಅಜ್ಜಿಯನ್ನು ನಾನು ‘ಅಜ್ಜಿ ಅಜ್ಜಿ’ ಎಂದು ಕೂಗಿದೆ. ನಿಂತುಕೊಂಡ ಅವರು ಹೂವು ಕೊಳ್ಳಲು ಕರೆದಿದ್ದು ಎಂದುಕೊಂಡು ‘ಹೂವು ಇಲ್ಲಮ್ಮ’ ಎಂದರು. ನಾನು ‘ಏನಾಗಿತ್ತು ನಿಮ್ಮ ಮಗನಿಗೆ ನೀವು ಒಬ್ಬರೆ ಇರುವುದಾ? ’ ಎಂದು ಕೇಳಿದೆ.
ಯಾರಾದರೂ ಒಬ್ಬರು ತನ್ನ ದುಃಖ ದುಮ್ಮಾನವನ್ನು ಕೇಳುವವರು ಸಿಕ್ಕರೆ ಸಾಕಿತ್ತು ಅನಿಸುತ್ತೆ ಹಿರಿಯ ಜೀವಕ್ಕೆ. ತಮ್ಮ ಬದುಕನ್ನೇ ಐದು ನಿಮಿಷದಲ್ಲಿ ನನ್ನ ಮುಂದೆ ತೆರೆದಿಟ್ಟರು.
ವಯಸ್ಸು ಹತ್ತತ್ತಿರ ಎಂಬತ್ತು ಅಥವಾ ಅದಕ್ಕಿಂತಲೂ ಹೆಚ್ಚು ಇರಬಹುದು. ಅವರಿಗೆ ಇದ್ದಿದ್ದು ಒಬ್ಬನೇ ಮಗ. ಅವರ ಗಂಡ ಅಗಲಿ ಬಹಳ ವರ್ಷಗಳಾಗಿತ್ತು. ಬೆಳೆದು ನಿಂತಿದ್ದ ಮಗನಿಗೆ ವಯಸ್ಸು ಮೂವತ್ತು ದಾಟಿದರೂ ವಿವಾಹವಾಗಿರಲಿಲ್ಲ. ಅವನು ದುಡಿದು ತಾಯಿಯನ್ನು ಸಾಕುತ್ತಿದ್ದ. ತನ್ನದು ಅಂತ ಒಂದು ದುಡಿಮೆ ಇರಲಿ ಎಂದು ಹೂವು ಮಾರುತ್ತಿದ್ದ ಅಜ್ಜಿಗೆ ಮಗನ ಮದುವೆಯ ಚಿಂತೆ ಬಿಟ್ಟರೆ ಬೇರೆ ಕೊರತೆ ಇರಲಿಲ್ಲ. ಮದುವೆ ಆಗದೆ ಇದ್ದರೇನು ನಾನು-ನೀನು ಇಬ್ಬರೇ ನೆಮ್ಮದಿಯಾಗಿ ಬದುಕೋಣ ಎನ್ನುತ್ತಿದ್ದ ಅಜ್ಜಿಯ ಪ್ರೀತಿಯ ಮಗ. ಆದರೆ ಅವನಿಗೆ ಒಂದು ದಿನ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋದರೆ ಕಿಡ್ನಿ ಇನ್ಛೆಕ್ಷನ್ ಎಂದರು ಡಾಕ್ಟರ್, ಹಿಂದೆಯೇ ಜಾಂಡೀಸ್! ಅಜ್ಜಿಗೆ ಆಸರೆಯಾಗಿದ್ದ ಮಗ ಹಾಸಿಗೆ ಹಿಡಿದ. ಮುಂದಿನ ಚಿಕಿತ್ಸೆ ಕೊಡಿಸುವಷ್ಟು ಹಣವಿರಲಿಲ್ಲ. ಮಗ ದುಡಿದು ಉಳಿಸಿದ್ದ ಅಲ್ಪ ಹಣವೂ ಆರಂಭದ ಚಿಕಿತ್ಸೆಗೆ ಖಾಲಿ ಆಗಿ ಹೋಯಿತು. ಉಳಿದ ದಾರಿ, ದಿನ ಹೂವು ಮಾರುವುದು ಮನೆಗೆ ಬರುವುದು ಸಿಕ್ಕ ಹಣದಲ್ಲಿ ಆದಷ್ಟು ಔಷಧಿ ತರುವುದು. ತನ್ನನ್ನೇ ಕೂರಿಸಿ ಸಾಕಬೇಕಿದ್ದ ಮಗನನ್ನು ಆ ತಾಯಿ ಬದುಕಿರುವಷ್ಟು ದಿನ ಪುಟ್ಟ ಮಗುವಿನಂತೆ ನೋಡಿಕೊಂಡಿದ್ದಳು.
ಈಗ ಅವನು ತೀರಿ ಹೋದಮೇಲೆ ಆ ಎಲ್ಲ ನೋವನ್ನು ಮುಚ್ಚಿಟ್ಟುಕೊಂಡು ದಿನ ಹೂವು ಮಾರುತ್ತ ಜೀವನ ಸಾಗಿಸುತ್ತಿದೆ ಆ ಹಿರಿ ಜೀವ. ಅವರಿಗೆ ಬದುಕಲು ವಯಸ್ಸು ಯಾವ ಅಡ್ಡಿಯನ್ನೂ ಮಾಡಿಲ್ಲ. ಆ ಇಳಿ ವಯಸ್ಸಿನಲ್ಲೂ ಯಾವ ಹಂಗೂ ಇಲ್ಲದೆ ಬದುಕುವ ಅವರ ದಿಟ್ಟತನ ಇದೆಯಲ್ಲ ಅದನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು. ಅದುವೇ ಜೀವನ ಸಾಗಿಸುವ ಉತ್ತಮ ಹಾದಿ.