Mysore
22
overcast clouds

Social Media

ಮಂಗಳವಾರ, 22 ಸೆಪ್ಟೆಂಬರ್ 2026
Light
Dark

ಕೊಡಗಿನಲ್ಲಿ ಅಂದಾಜು ೨,೨೭೯ ಹೆಕ್ಟೇರ್ ಬೆಳೆ ಹಾನಿ

ನವೀನ್ ಡಿಸೋಜ

ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ೧.೯೩ ಕೋಟಿ ರೂ. ಪರಿಹಾರಕ್ಕೆ ಸರ್ಕಾರಕ್ಕೆ ವರದಿ

ಮಡಿಕೇರಿ: ಸಾಮಾನ್ಯವಾಗಿ ಮುಂಗಾರು ಮಳೆಯೊಂದಿಗೆ ಹಸಿರಿನಿಂದ ಕಂಗೊಳಿಸುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಮಳೆ ಬರಬೇಕಾದ ಸಮಯದಲ್ಲಿ ಸಮರ್ಪಕವಾಗಿ ಸುರಿಯದೆ, ಹಲವು ವಾರಗಳ ಕಾಲ ಮಳೆ ಬಿಡುವು ನೀಡಿದ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೂ ಅದರ ನೇರ ಪರಿಣಾಮ ಬೀರಿದೆ. ಜಿಲ್ಲೆಯ ಬೆಳೆಗಳಾದ ಭತ್ತ ಮತ್ತು ಮುಸುಕಿನ ಜೋಳಕ್ಕೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

೨೦೨೫ನೇ ಸಾಲಿಗೆ ಹೋಲಿಸಿದರೆ ೨೦೨೬ರಲ್ಲಿ ಕೊಡಗಿನಲ್ಲಿ ಮಳೆ ಪ್ರಮಾಣದಲ್ಲಿ ಶೇ.೪೭.೨ ಇಳಿಕೆ ದಾಖಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಸರಾಸರಿ ೨,೭೧೬.೭೫ ಮಿ.ಮೀ. ಮಳೆಯಾಗಿದ್ದರೆ, ಈ ವರ್ಷ ೧,೪೩೪.೬೫ ಮಿ.ಮೀ. ಮಳೆಯಾಗಿದೆ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕುಗಳಲ್ಲಿಯೂ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ೨೦೨೫ರಲ್ಲಿ ೪,೧೧೧.೧೬ ಮಿ.ಮೀ. ಮಳೆಯಾಗಿದ್ದರೆ, ೨೦೨೬ರಲ್ಲಿ ೨,೩೫೮.೨೮ ಮಿ.ಮೀ. ಮಳೆಯಾಗಿದೆ. ವಿರಾಜಪೇಟೆಯಲ್ಲಿ ೨,೪೪೧ರಿಂದ ೧,೨೭೯.೨೭ ಮಿ.ಮೀ., ಪೊನ್ನಂಪೇಟೆಯಲ್ಲಿ ೨,೫೩೮.೬೯ರಿಂದ ೧,೩೦೪.೭೪ ಮಿ.ಮೀ., ಸೋಮವಾರಪೇಟೆಯಲ್ಲಿ ೩,೦೯೯.೪೨ರಿಂದ ೧,೫೮೬.೯೮ ಮಿ.ಮೀ. ಹಾಗೂ ಕುಶಾಲನಗರದಲ್ಲಿ ೧,೩೯೩.೪೯ರಿಂದ ಕೇವಲ ೬೪೩.೭೪ ಮಿ.ಮೀ.ಗೆ ಮಳೆ ಪ್ರಮಾಣ ಇಳಿಕೆಯಾಗಿದೆ.

ವಿಶೇಷವಾಗಿ ಕುಶಾಲನಗರ ಭಾಗದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಕುಸಿತ ಕಂಡುಬಂದಿದೆ. ಮಳೆಯ ಕೊರತೆಯು ಕೃಷಿ ಜಮೀನುಗಳ ಮಣ್ಣಿನ ತೇವಾಂಶದ ಮೇಲೂ ಪರಿಣಾಮ ಬೀರಿದ್ದು, ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ.

ಮುಂಗಾರು ಅವಧಿಯಲ್ಲಿ ನಿರೀಕ್ಷಿತ ಸಮಯದಲ್ಲಿ ಮಳೆಯಾಗದ ಪರಿಣಾಮ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು ೨,೨೭೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ೧೫೯ ಹೆಕ್ಟೇರ್ ಮುಸುಕಿನ ಜೋಳ, ವಿರಾಜಪೇಟೆ ತಾಲ್ಲೂಕಿನಲ್ಲಿ ೬೫೦ ಹೆಕ್ಟೇರ್ ಭತ್ತ ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ೧,೪೭೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ವಿಶೇಷವಾಗಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಮಳೆಯ ಅಸಮರ್ಪಕ ಹಂಚಿಕೆ ಬೆಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ.

ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಸುಮಾರು ೧.೯೩ ಕೋಟಿ ರೂ. ಇನ್ ಪುಟ್ ಸಬ್ಸಿಡಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.

ಸತತ ಮೂರು-ನಾಲ್ಕು ವಾರಗಳ ಕಾಲ ಮಳೆಯಾಗದಿರುವುದು, ಮಣ್ಣಿನ ತೇವಾಂಶದ ಸ್ಥಿತಿ ಹಾಗೂ ಅಂತರ್ಜಲ ಮಟ್ಟ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಬೆಳೆ ಹಾನಿಯನ್ನು ಅಂದಾಜಿಸಲಾಗಿದೆ. ಕೇವಲ ಮಳೆಯ ಪ್ರಮಾಣವನ್ನು ಮಾತ್ರವಲ್ಲದೆ, ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಮತ್ತು ಇಳುವರಿ ಮೇಲೆ ಉಂಟಾದ ಪರಿಣಾಮವನ್ನೂ ಪರಿಶೀಲಿಸಿ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊಡಗಿನ ಕೃಷಿ ವ್ಯವಸ್ಥೆ ಮುಂಗಾರು ಮಳೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದ್ದು, ಮಳೆಯ ಪ್ರಮಾಣಕ್ಕಿಂತಲೂ ಮಳೆ ಬೀಳುವ ಸಮಯ ಮತ್ತು ನಿರಂತರತೆ ಬೆಳೆಗಳಿಗೆ ಮಹತ್ವದ್ದಾಗಿದೆ. ಈ ಬಾರಿ ಮಳೆ ಸರಿಯಾದ ಸಮಯದಲ್ಲಿ ಬಾರದಿರುವುದು ಹಾಗೂ ದೀರ್ಘಾವಧಿಯ ಮಳೆ ಬಿಡುವು ರೈತರ ಲೆಕ್ಕಾಚಾರವನ್ನು ತಪ್ಪಿಸಿದೆ.

ಮಳೆ ಕೊರತೆಯ ಪರಿಣಾಮ ಬೆಳೆ ಉತ್ಪಾದನೆಯಷ್ಟೇ ಅಲ್ಲದೆ ಜಲಮೂಲಗಳು, ಅಂತರ್ಜಲ ಮಟ್ಟ ಹಾಗೂಮುಂದಿನ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಬೆಳೆ ಹಾನಿಗೆ ಪರಿಹಾರ ನೀಡುವುದರ ಜತೆಗೆ ಮುಂದಿನ ಹಂಗಾಮಿನಲ್ಲಿ ನೀರಿನ ಲಭ್ಯತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯ ಎದುರಾಗಿದೆ.

” ಮುಂಗಾರು ಸಂದರ್ಭದಲ್ಲಿ ಸಕಾಲಕ್ಕೆ ಮಳೆಯಾಗದೆ ಮುಸುಕಿನ ಜೋಳ ಮತ್ತು ಭತ್ತದ ಬೆಳೆ ಹಾನಿಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನಲ್ಲಿ ೧೫೯ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ವಿರಾಜಪೇಟೆ ತಾಲ್ಲೂಕಿನಲ್ಲಿ ೬೫೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ ೧೪೭೦ ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು ೨,೨೭೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಸುಮಾರು ೧.೯೩ ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಬಿಡುಗಡೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.”

-ಚಂದ್ರಶೇಖರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

 

 

Tags:
error: Content is protected !!