Mysore
31
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ದರೋಡೆ, ಅಪರಾಧಗಳ ಕಡಿವಾಣಕ್ಕೆ ಹದ್ದಿನಕಣ್ಣು

ಸಂದರ್ಶನ : ರಶ್ಮಿ ಕೋಟಿ

ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅಭಯ

ಕಾನೂನು – ಸುವ್ಯವಸ್ಥೆಗೆ ಆದ್ಯತೆ

ನಗರದ ಗಡಿಗಳಲ್ಲಿ ಕಟ್ಟೆಚ್ಚರ

ಬೆಳಿಗ್ಗೆ ಮತ್ತು ಸಂಜೆ ಡಿಸಿಪಿ ಹಾಗೂ ಎಸಿಪಿಗಳಿಂದ ಗಸ್ತು

ನಿಯಾನ್ ಬೈಕ್‌ಗಳ ನಿಯೋಜನೆ

ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ ಸುರಕ್ಷತಾ ಕ್ರಮ ಕಟ್ಟುನಿಟ್ಟು ಪಾಲನೆಗೆ ಸೂಚನೆ

ಮೈಸೂರಿನಲ್ಲಿ ೨೫೦ ಎಐ ಬೇಸ್ಡ್ ಐಟಿಎಂಎಸ್ ಹೊಸ ಕ್ಯಾಮೆರಾಗಳ ಅಳವಡಿಕೆ

ಗಾಂಜಾ: ಸಂಶಯಾಸ್ಪದ ಕಿರಾಣಿ ಅಂಗಡಿಗಳ ದಿಢೀರ್ ಪರಿಶೀಲನೆ 

ಮೈಸೂರು: ಇತ್ತೀಚೆಗೆ ಮಂಗಳೂರು ಹಾಗೂ ಬೀದರ್ ಸೇರಿದಂತೆ ರಾಜ್ಯದಲ್ಲಿ ನಡೆದ ದರೋಡೆ ಪ್ರಕರಣಗಳು ಜನರ ನಿದ್ದೆಗೆಡಿಸಿವೆ. ಈ ನಡುವೆ ಮೈಸೂರು ನಗರ ಪೊಲೀಸರು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅಪರಾಧ ಪ್ರಕರಣಗಳ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಮೈಸೂರಿನ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ‘ಆಂದೋಲನ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಆಂದೋಲನ: ಮೈಸೂರು ನಗರದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿರುವ ನಿಮಗೆ ಸವಾಲು ಎನ್ನಿಸುತ್ತಿಲ್ಲವೇ?

ಸೀಮಾ ಲಾಟ್ಕರ್: ಮೈಸೂರು ಸಿಎಂ ಅವರ ತವರು ಜಿಲ್ಲೆ ಆಗಿರುವುದರಿಂದ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಮೈಸೂರನ್ನು ಸುರಕ್ಷಿತವಾದ ನಗರವಾಗಿ ಕಾಪಾಡಿ ಕೊಂಡು ಹೋಗುವುದಕ್ಕೆ ಶ್ರಮಿಸುತ್ತಿದ್ದೇವೆ.

ಆಂದೋಲನ: ಕಠಿಣ ಸವಾಲುಗಳನ್ನು ಎದುರಿಸಲು ಮಾಡಿಕೊಂಡ ನಿಮ್ಮ ಯೋಜನೆಗಳೇನು?

ಸೀಮಾ ಲಾಟ್ಕರ್: ಮುಖ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಎರಡನೆಯದು ಅಪರಾಧ ತಡೆಗಟ್ಟುವುದು, ಮೂರನೆಯದು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ. ಈ ಮೂರನ್ನೂ ಸವಾ ಲಾಗಿ ತೆಗೆದುಕೊಂಡು ಕ್ರಮ ವಹಿಸಿದರೆ ನಾವು ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿರುತ್ತೇವೆ.

ಆಂದೋಲನ: ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ದರೋಡೆ ಪ್ರಕರಣಗಳು ಮೈಸೂರಿಗರ ನಿದ್ದೆಗೆಡಿಸಿವೆ. ಮೈಸೂರಿನಲ್ಲಿ ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳ ಸುರಕ್ಷತೆಗೆ ತೆಗೆದುಕೊಂಡಿರುವ ಭದ್ರತಾ ಕ್ರಮಗಳೇನು?

ಸೀಮಾ ಲಾಟ್ಕರ್: ಇತ್ತೀಚೆಗೆ ನಾವು ಮೈಸೂರಿನಲ್ಲಿ ೬೬ಕ್ಕೂ ಹೆಚ್ಚು ಬ್ಯಾಂಕ್ ಹಾಗೂ ಇತರ ಸಂಘ ಸಂಸ್ಥೆಗಳವರೊಂದಿಗೆ ಸಭೆ ನಡೆಸಿದ್ದೇವೆ. ಅದರಲ್ಲಿ ಅವರು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳೇನು ಹಾಗೂ ಅದಕ್ಕೆ ನಮ್ಮ ಸಹಕಾರ ಎಲ್ಲೆಲ್ಲಿ ಬೇಕಿದೆ ಎಂಬುದನ್ನು ಗುರುತಿಸಿ ನಾವು ಸಹಕಾರ ಕೊಡಲು ನಿರ್ಧರಿಸಿದ್ದೇವೆ. ಅವರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚು ಮಾಡಿ ಅವರು ನಿಯೋಜಿಸಿಕೊಳ್ಳುವ ಸೆಕ್ಯೂರಿಟಿಗಳಿಗೆ ಸೂಕ್ತ ತರಬೇತಿ ನೀಡುವುದು, ಅಲಾರಾಂ ಅಳವಡಿಕೆ, ಸ್ಥಳೀಯ ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ೫೦೦ಕ್ಕೂ ಹೆಚ್ಚು ಫುಟ್‌ಪಾತ್ ಇರುವ ಜಾಗಗಳಲ್ಲಿ ಮಾಲೀಕರು ಸಿಸಿಟಿವಿ ಹಾಕಬೇಕೆಂಬ ಕಾನೂನಿದೆ. ನಾವು ನಗರದ ಎಲ್ಲಾ ಸಿಸಿಟಿವಿಗಳನ್ನು ನಮ್ಮ ಆಪ್‌ಗೆ ಟ್ಯಾಗ್ ಮಾಡಿಕೊಳ್ಳುತ್ತಿದ್ದೇವೆ. ಹಾಗೆ ೧೪,೦೦೦ ಸಿಸಿಟಿವಿಗಳು ನಮ್ಮ ಆಪ್‌ಗೆ ಅಪ್‌ಡೇಟ್ ಆಗಿವೆ. ಹಾಗಾಗಿ ಅಪರಾಧಗಳಾದಾಗ ಆ ಸ್ಥಳದ ಹತ್ತಿರದಲ್ಲಿ ಎಲ್ಲಿ ಕ್ಯಾಮೆರಾ ಇದೆ ಎಂಬುದು ನಮಗೆ ಗೊತ್ತಾಗುತ್ತದೆ. ನಮ್ಮ ಪೊಲೀಸರ ಹೊರತಾಗಿ ಸಿಸಿಬಿಯವರು ಎಲ್ಲ ರೌಡಿ ಶೀಟರ್ ಹಾಗೂ ಅಪರಾಧ ಹಿನ್ನೆಲೆ ಇರುವವರ ಮೇಲೆ ನಿಗಾ ವಹಿಸಿದ್ದಾರೆ. ಇದರ ಹೊರತಾಗಿ ನಗರದ ಗಡಿ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ೪೦ ಕಡೆಗಳಲ್ಲಿ ನಾಕಾಬಂದಿ ಹಾಕಿದ್ದೇವೆ.

ಆಂದೋಲನ: ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದನ್ನು ತಡೆಯಲು ಹೊಸ ಮಾದರಿ ಏನಾದರೂ ರೂಪಿಸಿದ್ದೀರಾ?

ಸೀಮಾ ಲಾಟ್ಕರ್: ಕಳೆದ ಒಂದು ವರ್ಷದ ದಾಖಲೆ ಯನ್ನು ಗಮನಿಸಿದರೆ, ಏನೇನು ಅಪರಾಧಗಳು ಆಗಿವೆಯೋ ಅವನ್ನು ಪತ್ತೆ ಹಚ್ಚಿದ್ದೇವೆ. ೩೦ ರಿಂದ ೪೦ ಪ್ರಕರಣಗಳನ್ನು ಭೇದಿಸಿದ್ದೇವೆ. ಅಲ್ಲದೆ, ನಗರದ ಆಯ ಕಟ್ಟಿನ ಪ್ರದೇಶಗಳಲ್ಲಿ ಪ್ರತಿದಿನ ಸಂಜೆ ೬ರಿಂದ ರಾತ್ರಿ ೯ ಗಂಟೆಯವರೆಗೆ ಕಾಲ್ನಡಿಗೆಯಲ್ಲಿ ಗಸ್ತು ಹಾಕಿ ಜಾಗೃತಿ ಮೂಡಿಸುತ್ತಿದ್ದೇವೆ. ನಿಯಾನ್ ಬೈಕ್‌ಗಳನ್ನು ನಿಯೋ ಜಿಸಿ ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದೇವೆ. ಜೊತೆಗೆ ಎಲ್ಲ ಬ್ಯಾಂಕ್ ಹಾಗೂ ಜ್ಯುವೆಲ್ಲರಿ ಅಂಗಡಿಗಳ ಮುಂದೆ ಹೆಚ್ಚಿನ ನಿಗಾ ಇಟ್ಟಿದ್ದೇವೆ.

ಆಂದೋಲನ: ಅಪಘಾತ ಪ್ರಕರಣಗಳ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳೇನು?

ಸೀಮಾ ಲಾಟ್ಕರ್: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಕ್ಯಾಮೆರಾಗಳನ್ನು ಹಾಕಿದ್ದು, ವೇಗದ ಮಿತಿಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಅಂಕಿ ಅಂಶಗಳನ್ನು ಗಮನಿಸಿದಾಗ ಅಪಘಾತಗಳು ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಮೈಸೂರಿನಲ್ಲಿಯ ೨೫೦ ಎಐ ಬೇಸ್ಡ್ ಐಟಿಎಂಎಸ್ ಹೊಸ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಅವು ಸಂಚಾರ ನಿಯಮ ಉಲ್ಲಂಸಿದವರನ್ನು ಸ್ವಯಂಚಾಲಿತವಾಗಿ ಚಿತ್ರಗಳಲ್ಲಿ ದಾಖಲು ಮಾಡುತ್ತವೆ. ಇದರಿಂದ ಯಾವುದೇ ವಾಹನವನ್ನು ತಪಾಸಣೆ ಮಾಡಿದಾಗ ಅವರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿರುವ ಎಲ್ಲ ಪ್ರಕರಣಗಳೂ ತಕ್ಷಣ ಗಮನಕ್ಕೆ ಬರುತ್ತವೆ.

ಆಂದೋಲನ: ಮೈಸೂರಲ್ಲಿ ಗಾಂಜಾ ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಬುಡಸಮೇತ ನಿರ್ಮೂಲನೆ ಹಾಗೂ ಮಾರಾಟ ತಡೆಗೆ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ?

ಸೀಮಾ ಲಾಟ್ಕರ್: ಗಾಂಜಾ ಮಾರಾಟ ಹೆಚ್ಚಾಗಿರುವುದು ನಿಜ. ಇತ್ತೀಚೆಗಷ್ಟೇ ನಾವು ಮೈಸೂರಿನಲ್ಲಿ ೩೬೭ ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದೇವೆ. ಈ ಒಂದು ಪ್ರಕರಣವನ್ನು ಹಿಡಿದಿದ್ದಕ್ಕೆ ಮುಕ್ತಾಯವಾಗುವುದಿಲ್ಲ. ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳ ಸುತ್ತ ಮುತ್ತ ಇರುವ ಸಣ್ಣ ಪೆಟ್ಟಿಗೆ ಅಥವಾ ಕಿರಾಣಿ ಅಂಗಡಿಗಳು, ಬಸ್ ಸ್ಟ್ಯಾಂಡ್‌ಗಳ ಬಳಿ ದಿಢೀರ್ ಪರಿಶೀಲನೆ ಮಾಡುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳೊಂದಿಗೆ ಚರ್ಚಿಸುತ್ತಿದ್ದೇವೆ. ಗಾಂಜಾ ಮತ್ತಿತರ ಮಾದಕ ಪದಾರ್ಥಗಳ ವಿರುದ್ಧ ಜಾಗೃತಿ ಮೂಡಿಸುವುದರೊಂದಿಗೆ ಅದನ್ನು ತಡೆಗಟ್ಟುವುದಕ್ಕೆ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ.

ಆಂದೋಲನ: ಕಾನೂನು ಸುವ್ಯವಸ್ಥೆ, ಸಂಚಾರ ನಿರ್ವಹಣೆಗೆ ನಿಮ್ಮ ಯೋಜನೆಗಳೇನು?

ಸೀಮಾ ಲಾಟ್ಕರ್: ಮೈಸೂರಿಗೆ ಹೆಚ್ಚು ವಿಷುಯಲ್ ಬೋರ್ಡ್‌ಗಳನ್ನು ಅಳವಡಿಸುತ್ತಿದ್ದೇವೆ. ೭ ರಿಂದ ೮ ಹೊಸ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ್ದೆವು. ಅದಕ್ಕೂ ಅನುಮೋದನೆ ಸಿಕ್ಕಿದೆ. ಅವುಗಳೊಂದಿಗೆ ಇನ್ನೂ ಹೆಚ್ಚಿನ ಕ್ಯಾಮೆರಾಗಳು, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಎಂಸಿ) ನಡೆಯುತ್ತಿದೆ. ಅದರೊಂದಿಗೆ ಇವೆಲ್ಲವನ್ನೂ ಕಾರ್ಯರೂಪಕ್ಕೆ ತಂದರೆ ಮೈಸೂರು ನಗರದಲ್ಲಿ ಸಂಚಾರ ನಿರ್ವಹಣೆಯನ್ನು ಸರಾಗವಾಗಿ ನಿರ್ವಹಿಸಬಹುದು. ಮೈಸೂರಿನಲ್ಲಿ ಹೆಲ್ಮೆಟ್ ಇಲ್ಲದೆ, ಸ್ಕಿಡ್ ಆಗಿ ಅಥವಾ ಕುಡಿದು ಗಾಡಿ ಓಡಿಸಿ ಆಗಿರುವ ಅಪಘಾತಗಳಿಂದಲೇ ಸಾವು ಉಂಟಾಗಿರುವ ಪ್ರಕರಣಗಳು ಹೆಚ್ಚಾಗಿ ಸಂಭವಿಸಿವೆ. ಪ್ರತಿದಿನ ನಾವು ಡ್ರಂಕ್ ಡ್ರೈವ್ ತಪಾಸಣೆಯನ್ನು ಮಾಡುತ್ತಿರುವುದರಿಂದ ನಾಗರಿಕರು ಎಚ್ಚೆತ್ತು ಕೊಂಡಿದ್ದಾರೆ.

” ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವುದಕ್ಕಾಗಿಯೇ ಮೈಸೂರಿನಲ್ಲಿ ೧೧ ವಾಹನಗಳಿವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ೧೧೨ಕ್ಕೆ ಕರೆ ಮಾಡ ಬಹುದು. ಕೇವಲ ಐದು ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಹಾಜರಾಗುತ್ತಾರೆ.”

– ಸೀಮಾ ಲಾಟ್ಕರ್

Tags: