ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿದ ಕಟ್ಟಡ: ಆರು ತಿಂಗಳಿಂದ ಕಟ್ಟಡಕ್ಕೆ ಬೀಗ; ದುರಸ್ತಿ ಕಾರ್ಯ ಯಾವಾಗ?
ಮೈಸೂರು: ತತ್ವಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಾಸವಿದ್ದ ಮೈಸೂರು ವಿಶ್ವವಿದ್ಯಾನಿಲಯದ ಶತಮಾನದಷ್ಟು ಹಳೆಯ ಪಾರಂಪರಿಕ ಕಟ್ಟಡಕ್ಕೆ ಮರುಜೀವ ನೀಡಲು ಪುರಾತತ್ವ ಇಲಾಖೆ ಮತ್ತು ವಿವಿಯ ಆಡಳಿತ ಮಂಡಳಿ ಮುಂದಾಗಿದ್ದು, ಕಾಮಗಾರಿ ಆರಂಭ ಯಾವಾಗ ಎಂಬ ಪ್ರಶ್ನೆ ಎದ್ದಿದೆ.
ನಗರದ ಸರಸ್ವತಿಪುರಂನಲ್ಲಿರುವ ಡಾ.ಎಸ್. ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ಮೇಲ್ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆಯಲ್ಲಿ ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡು ನಿವಾಸಕ್ಕೆ ಮರುಜೀವ ನೀಡಲು ಪುರಾತತ್ವ ಇಲಾಖೆ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಅನುದಾನ ನೀಡಲು ಮುಂದಾಗಿವೆ. ಆದರೆ, ಕಟ್ಟಡಕ್ಕೆ ಬೀಗ ಜಡಿದು ಆರು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಯಾವಾಗ ದುರಸ್ತಿ ಕಾರ್ಯ ಆರಂಭವಾಗ ಲಿದೆ ಎಂಬ ಪ್ರಶ್ನೆ ಮೂಡಿದೆ.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ೧೯೧೮ರಿಂದ ೧೯೨೧ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಇದೇ ಕಟ್ಟಡದಲ್ಲಿ ವಾಸವಿದ್ದರು. ಹೀಗಾಗಿ ಈ ಕಟ್ಟಡವನ್ನು ‘ಡಾ.ರಾಧಾಕೃಷ್ಣನ್ ಬಂಗಲೆ’ ಎಂದೇ ಗುರುತಿಸಲಾಗುತ್ತದೆ. ಇಂತಹವೊಂದು ಮಹತ್ವ ಹೊಂದಿರುವ ಕಟ್ಟಡ ನಿರ್ವಹಣೆ ಕೊರತೆಯಿಂದ ವರ್ಷಾನು ಗಟ್ಟಲೆಯಿಂದ ಶಿಥಿಲಾವಸ್ಥೆಯಿಂದ ಬಳಲುತ್ತಿದೆ.
ಆರೇಳು ತಿಂಗಳ ಹಿಂದೆ ಕಟ್ಟಡದ ಮೇಲ್ಚಾವಣಿ ಕುಸಿದು ಕಟ್ಟಡಕ್ಕೆ ಬೀಗ ಜಡಿಯಲಾಯಿತು. ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಸುತ್ತಮುತ್ತ ಯಾರೂ ಪ್ರವೇಶದಂತೆ ಗೇಟ್ಗೆ ಬೀಗ ಕೂಡ ಹಾಕಲಾ ಯಿತು. ಆದರೆ, ಇಲ್ಲಿಯವರೆಗೆ ಕಟ್ಟಡದ ದುರಸ್ತಿಗೊಳಿಸುವ ಕೆಲಸಕ್ಕೆ ಯಾರೂ ಮುಂದಾಗಿಲ್ಲ. ಇದೀಗ ೪೦ ಲಕ್ಷ ರೂ. ವೆಚ್ಚದಲ್ಲಿ ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡು ಕಟ್ಟದ ಮೇಲ್ಚಾವಣಿ ಕಾಮಗಾರಿ ನಡೆಸಲು ಮೈಸೂರು ವಿವಿ ಮತ್ತು ಪುರಾತತ್ವ ಇಲಾಖೆ ತೀರ್ಮಾನಿಸಿವೆ. ಆದರೆ ಕಾಮಗಾರಿ ಆರಂಭವಾಗುವ ಸೂಚನೆ ಕಾಣುತ್ತಿಲ್ಲ.
ಕಟ್ಟಡದ ಶಿಥಿಲಾವಸ್ಥೆಯನ್ನು ಪರಿಶೀಲಿಸಿರುವ ಪಾರಂಪರಿಕ ಮತ್ತು ಪುರಾತತ್ವ ಇಲಾಖೆ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಅನುದಾನದಲ್ಲಿ ಅರ್ಧಾರ್ಧ ಹಣವನ್ನು ವ್ಯಯಿಸಲು ನಿರ್ಧರಿಸಿದ್ದಾರೆ. ಅಂದರೆ ತಲಾ ೨೦ ಲಕ್ಷ ರೂ. ವೆಚ್ಚ ಭರಿಸಲು ಸಮ್ಮತಿಸಿದ್ದು, ಕಾಮಗಾರಿಗೆ ಅಗತ್ಯವಾದ ಅಂದಾಜು ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ.
೭೫ ಲಕ್ಷ ರೂ. ವೆಚ್ಚದಲ್ಲಿ ನವೀಕರಣ: ಸುಮಾರು ದಶಕದ ಹಿಂದೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರ ಅನುಯಾಯಿ, ವಿಧಾನ ಪರಿಷತ್ ಸದಸ್ಯ ಹಾಗೂ ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಂ.ಆರ್.ದೊರೆಸ್ವಾಮಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಕಟ್ಟಡ ನವೀಕರಿಸಲು ೭೫ ಲಕ್ಷ ರೂ.ಹಣವನ್ನು ನೀಡಿದ್ದರು. ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಇಂಜಿನಿಯರ್ಗಳ ತಂಡ ಸುಮಾರು ಒಂದು ವರ್ಷಕಾಲ ಶ್ರಮಿಸಿ ಕಟ್ಟಡದ ಪಾರಂಪರಿಕ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನವೀಕರಣ ಮಾಡಿದ್ದರು.
ನವೀಕರಣಗೊಂಡ ಬಳಿಕವೂ ಕಟ್ಟಡದ ನಿರ್ವಹಣೆಗೆ ಅಗತ್ಯ ಗಮನ ನೀಡದ ಪರಿಣಾಮ ಮತ್ತೆ ಶಿಥಿಲಾವಸ್ಥೆ ತಲುಪಿದೆ. ಚಾವಣಿಯಲ್ಲಿ ಗಿಡಗಂಟಿಗಳು ಬೆಳೆದು ಮಳೆ ನೀರು ಸಂಗ್ರಹವಾಗಿದ್ದರಿಂದ ಕಟ್ಟಡದ ಗೋಡೆಗಳು ತೇವಗೊಂಡು ಒಂದು ಭಾಗ ಕುಸಿದಿದೆ. ಉಳಿದ ಕಟ್ಟಡದ ಸುರಕ್ಷತೆಯ ಬಗ್ಗೆಯೂ ಆತಂಕ ಎದುರಾದ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಕೇಂದ್ರವನ್ನು ಖಾಲಿ ಮಾಡಿಸಿ ಕಟ್ಟಡಕ್ಕೆ ಬೀಗ ಹಾಕಿದೆ.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಒಟ್ಟು ೨೪ ಪಾರಂಪರಿಕ ಕಟ್ಟಡಗಳಿದ್ದು, ಅವುಗಳ ಸಂರಕ್ಷಣೆ ಸವಾಲಾಗಿದೆ. ಇದೀಗ ಡಾ.ರಾಧಾಕೃಷ್ಣನ್ ಅವರ ನೆನಪಿನ ಕಟ್ಟಡದ ದುರಸ್ತಿಗೆ ವಿವಿ ಹಾಗೂ ಪುರಾತತ್ವ ಇಲಾಖೆ ಜಂಟಿಯಾಗಿ ಅನುದಾನ ನೀಡಲು ಮುಂದಾಗಿರುವುದು ಮಹತ್ವ ಪಡೆದಿದೆ. ಆದರೆ, ದುರಸ್ತಿ ನಂತರವೂ ಕಟ್ಟಡದ ನಿರಂತರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ.
” ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಕಟ್ಟಡವು ಪಾರಂಪರಿಕ ಕಟ್ಟಡವಾಗಿರುವುದರಿಂದ ಮೈಸೂರು ವಿವಿಯ ಆಡಳಿತ ಮಂಡಳಿಯೊಂದೇ ದುರಸ್ತಿಗೊಳಿಸಲು ಬರುವುದಿಲ್ಲ. ಹೀಗಾಗಿ ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಅನುದಾನ ಒದಗಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಪ್ರಯತ್ನಿಸಲಾಗುತ್ತಿದ್ದು, ನನ್ನ ಅವಧಿಯಲ್ಲೇ ಕಟ್ಟಡವನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಸಂರಕ್ಷಿಸಲಾಗುವುದು.”
ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ
೨ ಸಾವಿರ ಪುಸ್ತಕಗಳ ಸಂಗ್ರಹ: ೨೦೧೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಈ ಕಟ್ಟಡಕ್ಕೆ ‘ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರ’ ಎಂದು ನಾಮಕರಣ ಮಾಡಿತ್ತು. ಇಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸಿ, ರಾಧಾಕೃಷ್ಣನ್ ಅವರಿಗೆ ಸಂಬಂಧಿಸಿದ ಪುಸ್ತಕಗಳು, ಕಲಾಕೃತಿಗಳು, ಅವರು ಬಳಸುತ್ತಿದ್ದ ವಸ್ತುಗಳು ಹಾಗೂ ಬರಹಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸುಮಾರು ಎರಡು ಸಾವಿರ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಸಂಗ್ರಹಿಸಲಾಗಿತ್ತು. ತತ್ವಶಾಸ್ತ್ರದ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜನರು ಭೇಟಿ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಸ್ಥಗಿತವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.




