ಕೆ.ಬಿ.ರಮೇಶನಾಯಕ
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ೯.೫೦ ಲಕ್ಷ ಲೀಟರ್; ಈ ವರ್ಷ ೧೧ ಲಕ್ಷ ಲೀ.ಹಾಲು ಸಂಗ್ರಹ
ಮೈಸೂರು: ತೀವ್ರ ಬರಗಾಲ, ಮೇವಿನ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ರೈತರ ಪ್ರಮಾಣ ಹೆಚ್ಚಾಗುತ್ತಿರುವ ಪರಿಣಾಮವಾಗಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ(ಮೈಮುಲ್) ದಾಖಲೆ ಪ್ರಮಾಣದಲ್ಲಿ ಹಾಲು ಶೇಖರಣೆ ಆಗುತ್ತಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ೯.೫೦ ಲಕ್ಷ ಲೀಟರ್ ಶೇಖರಣೆಯಾಗಿದ್ದರೆ, ಈ ವರ್ಷ ಬರಗಾಲವನ್ನು ಮೀರಿಸಿ ನವೆಂಬರ್ ತಿಂಗಳಲ್ಲಿ ಈ ವರೆಗೆ ೧೧ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ಮಾಸಾಂತ್ಯಕ್ಕೆ ೧೧.೫೦ ಲಕ್ಷ ಲೀಟರ್ ಹಾಲು ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಪ್ರತಿ ದಿನದ ಹಾಲಿನ ಸಂಗ್ರಹ ಶೇ.೧೫ರಿಂದ ೧೬ರಷ್ಟು ಹೆಚ್ಚಾಗುತ್ತಿರುವುದರಿಂದ ಮೈಮುಲ್ಗೆ ದೊಡ್ಡ ಆರ್ಥಿಕ ಹೊಡೆತ ಶುರುವಾಗಿದೆ.
ಬೇಸಿಗೆ ಕಾಲವೆಂದು ಕರೆಯಿಸಿಕೊಳ್ಳುವ ಜೂನ್ ತಿಂಗಳಲ್ಲಿ ೧೧.೩೧ ಲಕ್ಷ ಲೀಟರ್ ಹಾಲು ಸಂಗ್ರಹವಾಗಿದ್ದು ದಾಖಲೆಯಾದರೆ, ಈಗ ಅದನ್ನು ಮೀರಿ ದಾಖಲೆ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿದೆ. ಪಶು ಆಹಾರಗಳ ಬೆಲೆ ಏರಿಕೆ, ಸಕಾಲಕ್ಕೆ ಮೇವು ದೊರೆಯದೆ ಇರುವುದು, ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ಸವಾಲು ಗಳ ನಡುವೆಯೂ ಹಾಲು ಶೇಖರಣೆ ಈ ಪ್ರಮಾಣದಲ್ಲಿ ಜಾಸ್ತಿಯಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಬರಗಾಲ, ಅಂತರ್ಜಲ ಕುಸಿತ, ಆದಾಯಕ್ಕಿಂತ ಖರ್ಚು ಹೆಚ್ಚಳ ಮುಂತಾದ ಕಾರಣಗಳಿಂದಾಗಿ ರೈತರು ಕೃಷಿ ಚಟುವಟಿಕೆ ಕಡಿಮೆ ಮಾಡಿ ಹೈನುಗಾರಿಕೆ ಆಶ್ರಯಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಬಹುದು. ಸದ್ಯ
ಮೈಮುಲ್ನಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ಗೆ ೪೪.೭೦ ರೂ. ನೀಡಿದರೆ, ಸಂಘಗಳು ಉತ್ಪಾದಕರಿಗೆ ಲೀಟರ್ಗೆ ೪೩.೧೦ ರೂ. ನೀಡುತ್ತಿವೆ. ೧.೬೦ ರೂ.ಗಳನ್ನು ಸಂಘಗಳ ನಿರ್ವಹಣೆಗೆ ಬಳಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಮೈಮುಲ್ ವ್ಯಾಪ್ತಿಯಲ್ಲಿ ಸುಮಾರು ೩ ಲಕ್ಷ ಲೀಟರ್ ಹಾಲು, ೮೭ ಸಾವಿರ ಲೀಟರ್ ಮೊಸರು ಮಾರಾಟವಾಗುತ್ತಿದೆ. ನೆರೆಯ ಜಿಲ್ಲೆಗಳ ಡೇರಿಗಳಿಗೆ ಸಗಟು ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ಕೇರಳ ರಾಜ್ಯಕ್ಕೆ ೨೮ ಸಾವಿರ ಲೀಟರ್, ಚೆನ್ನೈಗೆ ೭೫ ಸಾವಿರ ಲೀಟರ್ ಹಾಲನ್ನು ಸರಬರಾಜು ಮಾಡಲಾಗುತ್ತಿದೆ.
ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದರಿಂದ ಮೈಮುಲ್ಗೆ ಆರ್ಥಿಕ ಹೊಡೆತ ಬೀಳಲು ಶುರುವಾಗಿದೆ. ಉತ್ಪಾದನೆಯಾದಷ್ಟು ಹಾಲು ಮಾರಾಟವಾಗದೇ ಉಳಿಯುತ್ತಿರುವುದರಿಂದ ಹಾಲನ್ನು ಪೌಡರ್ ಆಗಿ ಪರಿವರ್ತನೆ ಮಾಡಬೇಕಾಗಿರುವುದರಿಂದ ಬಂಡವಾಳ ಮತ್ತು ಆರ್ಥಿಕ ವೆಚ್ಚ ಸರಿದೂಗಿಸುವುದು ದೊಡ್ಡ ಚಿಂತೆಯಾಗಿದೆ.
ಉತ್ಪಾದಕರು ಸಂಘಗಳಿಗೆ ಮಾರಾಟ ಮಾಡುವ ಹಾಲಿಗೆ ಮಿತಿ ಹೇರುವಂತಿಲ್ಲ. ಹಾಲಿನ ದರವನ್ನು ಕಡಿಮೆ ಮಾಡಿದರೆ ರೈತ ಸಮುದಾಯದಿಂದ ದೊಡ್ಡ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ, ಮೈಮುಲ್ಗೆ ಸರಬರಾಜಾಗುತ್ತಿರುವ ಹಾಲಿನಲ್ಲಿ ೩ ಲಕ್ಷ ಲೀಟರ್ನಷ್ಟು ಹಾಲನ್ನು ಪೌಡರ್ ಆಗಿ ಪರಿವರ್ತನೆ ಮಾಡಬೇಕಿರುವುದರಿಂದ ಆರ್ಥಿಕ ಹೊರೆ ಬೀಳಲಿದೆ.
ಮಾರಾಟ ಪ್ರಮಾಣ ಚೇತರಿಕೆ ನಿರೀಕ್ಷೆ: ಗ್ರಾಹಕರ ಹಾಲಿನ ಬೆಲೆ ಹೆಚ್ಚಳ ಮಾಡಿದ್ದರಿಂದಾಗಿ ೧೨ ಸಾವಿರ ಲೀಟರ್ಗಳಷ್ಟು ಹಾಲಿನ ಮಾರಾಟ ಕಡಿಮೆಯಾಗಿದ್ದರೂ ಈಗ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಮುಂದೆ ಸರಿಯಾಗಬಹುದು ಎಂದು ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
” ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಲಿನ ಶೇಖರಣೆಯಲ್ಲಿ ದಾಖಲೆ ನಿರ್ಮಾಣವಾಗುವ ಲಕ್ಷಣಗಳು ಕಾಣಿಸುತ್ತಿವೆ. ಭೀಕರ ಬರಗಾಲ, ಉತ್ಪನ್ನಗಳ ಬೆಲೆ ಹೆಚ್ಚಳದ ನಡುವೆಯೂ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಳವಾಗುತ್ತಿದೆ. ನಾವು ಡೇರಿಗೆ ವಾರಕ್ಕೆ ಒಂದು ದಿನ ಬಟವಾಡೆ ಮಾಡಿದರೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಉತ್ಪಾದಕರಿಗೆ ೧೦ರಿಂದ ೧೨ ದಿನಗಳಲ್ಲಿ ಪಾವತಿ ಮಾಡುತ್ತಾರೆ.”
-ಕರಿಬಸವರಾಜು, ವ್ಯವಸ್ಥಾಪಕರು, ಮೈಮುಲ್




