ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಜಂಬೂ ಸವಾರಿ ಸಾಗುವ ರಸ್ತೆಗಳನ್ನು ಡಾಂಬರೀಕರಣ ಮಾಡುತ್ತದೆ. ದಸರಾ ಮಹೋತ್ಸವವನ್ನು ಕಣ್ಣುಂಬಿಕೊಳ್ಳಲು ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಬಂದು ತಿಂಗಳುಗಟ್ಟಲೆ ವಾಸ್ತವ್ಯ ಹೂಡುತ್ತಾರೆ. ದಸರಾಗೂ ಮುನ್ನ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಎಲ್ಲ ಪ್ರದೇಶಗಳನ್ನು ಅಭಿವೃದ್ಧಿ ಮಾಡಬೇಕಾದದ್ದು ಜಿಲ್ಲಾಡಳಿತದ ಕರ್ತವ್ಯ. ಆದರೆ ದಸರಾ ಜಂಜೂ ಸವಾರಿ ಸಾಗುವ ಮಾರ್ಗದ ಹೊರತಾಗಿ ಉಳಿದ ಬಡಾವಣೆಗಳ ರಸ್ತೆಗಳೂ ಹಳ್ಳಕೊಳ್ಳದಿಂದ ಕೂಡಿದ್ದರೂ, ಅಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿ ಮಳೆನೀರು ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದರೂ ಅದನ್ನು ಅಭಿವೃದ್ಧಿಪಡಿಸುವ ಗೋಜಿಗೇ ಹೋಗುವುದಿಲ್ಲ. ಅಲ್ಲದೆ ನಗರದ ಅನೇಕ ಉದ್ಯಾನವನಗಳಲ್ಲಿ ಕಸದ ರಾಶಿಯೇ ಸಂಗ್ರಹವಾಗಿದ್ದು, ಅನೈರ್ಮಲ್ಯದ ವಾತಾವರಣ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟವರು ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳನ್ನು ಮಾತ್ರ ಅಭಿವೃದ್ಧಿಪಡಿಸದೆ ಇನ್ನಿತರ ಕಡೆಗಳಲ್ಲಿಯೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕಿದೆ.
-ನಾಗೇಶ್, ಮಾನಸಗಂಗೋತಿ ಮೈಸೂರು.