ದಾಸೇಗೌಡ ಸರಗೂರು
ಮುಜರಾಯಿ ಇಲಾಖೆ ವಿರುದ್ಧ ಭಕ್ತಾದಿಗಳ ಆಕ್ರೋಶ
ಸರಗೂರು: ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಭಕ್ತಾದಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ದೇವಾಲಯದಲ್ಲಿ ದಾಸೋಹ ಸೇವಾ ಸಮಿತಿ, ಚೆನ್ನಗುಂಡಿ ಯುವಕರ ದಾಸೋಹ ಬಳಗ ಇವರುಗಳ ಆಶ್ರಯದಲ್ಲಿ ಪ್ರತಿ ಅಮಾವಾಸ್ಯೆಯಂದು ಅನ್ನದಾನ ಏರ್ಪಡಿಸಲಾಗುತ್ತಿದೆ. ದೇಗುಲಕ್ಕೆ ಆಗಮಿಸುವ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸುತ್ತಾರೆ.
ಈ ಕಾರ್ಯಕ್ರಮದ ನೇತೃತ್ವವನ್ನು ಚೆನ್ನಗುಂಡಿಯ ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನದ ಸಹಯೋಗದಲ್ಲಿ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ಸಮಿತಿಯ ಅಧ್ಯಕ್ಷರಾದ ಉಮೇಶ್, ಕಾರ್ಯದರ್ಶಿ ನಂದೀಶ್, ಸದಸ್ಯರುಗಳಾದ ರಾಜಶೇಖರ್, ಮಹೇಶ್, ಸಿ.ಎಂ.ಮಂಜುನಾಥ್, ಸಿ.ಎಸ್.ಮಂಜು, ಜಯಪ್ಪ, ವಾಟರ್ಮನ್ ಮಲ್ಲು, ಪರಶಿವಮೂರ್ತಿ, ಉಮೇಶ್, ಮನು, ರಮೇಶ್, ಮಾದೇವಸ್ವಾಮಿ, ಶ್ರೀಧರ, ನಂಜುಂಡ ಸ್ವಾಮಿ, ಬೆಳ್ಳಪ್ಪ, ನಂದೀಶ್, ಗಿರೀಶ್, ಸೋಮಣ್ಣ, ಲಿಂಗರಾಜು, ಸಿ.ಎಸ್.ರವಿ, ಮಲ್ಲಪ್ಪ, ಬಸವರಾಜಪ್ಪ, ಸೋಮಣ್ಣ, ಸಿದ್ದರಾಜು, ಪುಟ್ಟ, ಕಲ್ಲೇಶ, ಪರಶಿವ, ವಿರೂಪಾಕ್ಷ, ಅಪ್ಪು, ನಂಜುಂಡಿ, ಮುಂತಾದ ವರು ಅನ್ನದಾನ ನಡೆಸಿಕೊಂಡು ಬರುತ್ತಿದ್ದಾರೆ.
ಈ ಹಿಂದೆ ಕಾಡಿನ ಒಳಗಡೆ ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ, ಜಾತ್ರೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನದ ಸಮಿತಿಯಿಂದ ನಡೆಸಿಕೊಂಡು ಬರಲಾಗುತ್ತಿತ್ತು. ಭಕ್ತರಿಗೆ ತಿಂಡಿ, ಊಟವನ್ನು ಅವರೇ ಏರ್ಪಡಿಸುತ್ತಿದ್ದರು. ಬರುವ ಆದಾಯದಲ್ಲಿ ಜಾತ್ರೆ ಸಂದರ್ಭದಲ್ಲಿ ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನದಾನ ಮಾಡಿ ಎಲ್ಲಾ ಖರ್ಚನ್ನು ಕಳೆದು ಲಕ್ಷಾಂತರ ರೂ. ಉಳಿಸಿ ಬ್ಯಾಂಕ್ನಲ್ಲಿ ಇಡುತ್ತಿದ್ದರು. ಆದರೆ, ಇತ್ತೀಚೆಗೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿದ್ದಾರೆ. ಜಾತ್ರಾ ಸಂದರ್ಭಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಭಕ್ತಾದಿಗಳಿಗೆ ಯಾವುದೇ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
” ಮುಜರಾಯಿ ಇಲಾಖೆ ವತಿಯಿಂದ ನಿರ್ಮಿಸಿರುವ ಎರಡು ನೀರಿನ ತೊಂಬೆಗಳು ಇದ್ದು, ವರ್ಷಗಳಾದರೂ ಇದಕ್ಕೆ ಮುಚ್ಚಳವನ್ನು ಇನ್ನೂ ಅಳವಡಿಸಿಲ್ಲ. ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಇದರಿಂದ ಮಹಿಳೆಯರಿಗೆ ತೀವ್ರ ಸಮಸ್ಯೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಇದೆ. ವಾರದಲ್ಲಿ ಎರಡು ದಿನಗಳು ದೇವಸ್ಥಾನಕ್ಕೆ ಭಕ್ತರು ಹೋಗುವುದಕ್ಕೆ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. ದೇವಸ್ಥಾನ ಕೇವಲ ೭ ಕಿ.ಮೀ. ಅಂತರವಿದ್ದು, ಅಲ್ಲಿಗೆ ೫೦ ರೂ. ಟಿಕೆಟ್ ದರ ನಿಗದಿಪಡಿಸಿದ್ದಾರೆ. ಈ ಎಲ್ಲ ಸಮಸ್ಯೆಗಳ ಕುರಿತು ಮುಜರಾಯಿ ಇಲಾಖೆಯ ಇಒ ರಾಕೇಶ್ ಅವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.”




