ನವೀನ್ ಡಿಸೋಜ
ಕೊಡಗು ಜಿಲ್ಲೆಯಲ್ಲಿ ೨೯ ಡೆಂಗ್ಯು ಪ್ರಕರಣಗಳು ದೃಢ; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸಲಹೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣದೊಂದಿಗೆ ಮಳೆಯೂ ಆಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದ್ದು, ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ಕೆಲ ದಿನಗಳಲ್ಲಿ ಬಿಸಿಲಿನ ವಾತಾವರಣ ಮತ್ತೆ ಕೆಲ ದಿನ ಮಳೆಯ ವಾತಾವರಣ ಕಂಡುಬರುತ್ತಿದೆ. ಮಳೆಯಿಂದ ಅಲ್ಲಲ್ಲಿ ನೀರು ಸಂಗ್ರಹ ವಾಗುವುದರಿಂದ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಂದೇ ಕಡೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ.
ಆದ್ದರಿಂದ ನೀರು ನಿಲ್ಲದಂತೆ ಗಮನ ಹರಿಸಬೇಕು. ತೆಂಗಿನ ಚಿಪ್ಪು, ಟೈಯರ್, ಒಡೆದ ಬಕೆಟ್ಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮನವಿ ಮಾಡಿದ್ದಾರೆ.
ಸೊಳ್ಳೆಗಳಿಂದ ಡೆಂಗ್ಯು , ಮಲೇರಿಯಾ, ಚಿಕೂನ್ ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಸದ್ಯ ಜಿಲ್ಲೆಯಲ್ಲಿ ಮಲೇರಿಯಾ, ಚಿಕೂನ್ ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ವರದಿಯಾಗಿಲ್ಲ. ಆದರೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರನ್ನು ಕುದಿಸಿ ಅಥವಾ ಶುದ್ಧೀಕರಿಸಿ ಬಳಸಬೇಕು. ಆಹಾರವನ್ನು ಸ್ವಚ್ಛವಾಗಿ ತಯಾರಿಸಿ, ಬಿಸಿ ಆಹಾರವನ್ನೇ ಸೇವಿಸಬೇಕು. ತೆರೆದ ಸ್ಥಳದಲ್ಲಿ ಮಾರಾಟವಾಗುವ ಆಹಾರ ಹಾಗೂ ಕಲುಷಿತ ನೀರನ್ನು ಸೇವಿಸುವುದನ್ನು ತಪ್ಪಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಟ್ಯಾಂಕ್ಗಳು ಮತ್ತು ಪಾತ್ರೆಗಳನ್ನು ಮುಚ್ಚಿಡಬೇಕು. ಸೊಳ್ಳೆ ಪರದೆ, ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸೊಳ್ಳೆ ಪರದೆ ಬಳಸುವುದು ಸೂಕ್ತ.
ಸಾರ್ವಜನಿಕರು ಆಗಾಗ್ಗೆ ಕೈಗಳನ್ನು ಸಾಬೂನು ಬಳಸಿ ತೊಳೆಯಬೇಕು. ಜ್ವರ, ಕೆಮ್ಮು, ಶೀತ, ವಾಂತಿ, ಭೇದಿ, ಮೈಕೈ ನೋವು ಅಥವಾ ಇತರೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧ ಸೇವನೆ ಮಾಡದೆ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು.
” ಸೊಳ್ಳೆಗಳಿಂದ ಡೆಂಗ್ಯು , ಮಲೇರಿಯಾ, ಚಿಕೂನ್ ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ, ೧,೬೩೪ ಡೆಂಗ್ಯು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೨೯ ಡೆಂಗ್ಯು ಪ್ರಕರಣಗಳು ದೃಢಪಟ್ಟಿದ್ದು, ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.”
-ಡಾ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಮುನ್ನೆಚ್ಚರಿಕಾ ಕ್ರಮಗಳು:
* ಸದಾ ಕಾಯಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಿರಿ
* ಬಿಸಿ ಮತ್ತು ತಾಜಾ ಆಹಾರ ಸೇವಿಸಿ
* ಆಗಾಗ್ಗೆ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ
* ಟೈಯರ್, ತೆಂಗಿನ ಚಿಪ್ಪು ಮತ್ತು ಹೂಕುಂಡಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ
* ಮಲಗುವಾಗ ಸೊಳ್ಳೆಪರದೆ ಬಳಸಿ
* ಮನೆಯ ಸುತ್ತಮುತ್ತ ಗಿಡಗಂಟಿಗಳನ್ನು ಕಡಿದು ಶುಚಿಯಾಗಿಟ್ಟುಕೊಳ್ಳಿ




