Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ದೂರುಗಳ ರಿಂಗಣ; ಅಕ್ರಮಗಳಿಗೆ ಬೀಳಲಿ ಕಡಿವಾಣ

  • ಅಕ್ರಮ ಮದ್ಯ ಮಾರಾಟ, ಹೆಚ್ಚಾದ ಜೂಜಾಟ, ಪುಂಡರ ಕಾಟ
  • ಆಂದೋಲನ ಕಚೇರಿಯಲ್ಲಿ ಆಯೋಜಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎಸ್‌ಪಿ ವಿಷ್ಣುವರ್ಧನ
  • ಅವರ ಬಳಿ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು

 

ಮೈಸೂರು: ‘ಸರ್. . . ನಮ್ಮೂರಿನಲ್ಲಿ ಅಕ್ರಮ ಮದ್ಯ ಮಾರಾಟ, ಗೋ ಹತ್ಯೆ, ಜೂಜಾಟ ಹೆಚ್ಚಿದೆ. ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದಲ್ಲಿ ಪೊಲೀಸರೇ ಶಾಮೀಲಾಗಿದ್ದು, ಅವರಿಗೆ ಬಾರ್ ಮತ್ತು ಹೋಟೆಲ್‌ನವರು ಉಚಿತವಾಗಿ ಮದ್ಯ ನೀಡುತ್ತಿದ್ದಾರೆ.

ಬೀಟ್ ಪೊಲೀಸರು ಗಸ್ತು ತಿರುಗುತ್ತಿಲ್ಲ. ಪೊಲೀಸರು ಸಾರ್ವಜನಿಕರಿಗೆ ಗೌರವ ನೀಡದೇ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸಿ. . ! ’ ‘

ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ನೇರ -ನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಅವರಿಗೆ ಸಾರ್ವಜನಿಕರು ಹೇಳಿಕೊಂಡ ಸಮಸ್ಯೆಗಳಿವು.

ಹಲೋ. . . ನಾನು ಮೈಸೂರು ಎಸ್‌ಪಿ ಮಾತಾಡ್ತೀದ್ದೀನಿ, ನಿಮ್ಮ ಸಮಸ್ಯೆ ಹೇಳಿ. . . ಹೀಗೆ, ‘ಆಂದೋಲನ’ ದಿನಪತ್ರಿಕೆಯ ಕಚೇರಿಯಲ್ಲಿ ಗುರುವಾರ ಎಸ್‌ಪಿ ಎನ್. ವಿಷ್ಣುವರ್ಧನ ಅವರು ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸಿ ಕೇಳುತ್ತಿದ್ದಂತೆ, ಸಾರ್ವಜನಿಕರು ಕುಂದು ಕೊರತೆ ಹೇಳಿಕೊಂಡರು. ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ೨೪ ಕರೆಗಳನ್ನು ಸ್ವೀಕರಿಸಿದ ಎಸ್‌ಪಿ, ಶೀಘ್ರವೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಭರವಸೆ ನೀಡಿದರು.

ಕಳ್ಳತನ, ಅಕ್ರಮ ಮದ್ಯ ಮಾರಾಟ, ಗೋ ಹತ್ಯೆ, ರ‍್ಯಾಗಿಂಗ್ ವರೆಗಿನ ಎಲ್ಲ ರೀತಿಯ ದೂರುಗಳಿಗೆ ಎಸ್‌ಪಿ ಅವರು ಧ್ವನಿಯಾದರು. ಹೆಣ್ಣು ಮಕ್ಕಳನ್ನು ಚುಡಾಯಿಸುವ ಬಗ್ಗೆಯೂ ದೂರು ಕೇಳಿಬಂತು. ಜಿಲ್ಲೆಯ ವಿವಿಧ ಭಾಗಗಳ ನಾಗರಿಕರು ಎಡೆಬಿಡದೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಎಲ್ಲದಕ್ಕೂ ಸಮಾಧಾನಚಿತ್ತರಾಗಿ ಉತ್ತರಿಸಿದ ಎಸ್‌ಪಿ ಅವರು ಸಾರ್ವಜನಿಕರಿಗೆ ಸಮಸ್ಯೆ ಪರಿಹರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಭರವಸೆ ನೀಡಿದರು. ಪೊಲೀಸ್ ಠಾಣೆಗೆ ಹೋದರೆ ವ್ಯವಹರಿಸುವುದೇ ಕಷ್ಟ ಎಂದು ತಿಳಿದುಕೊಂಡಿದ್ದ ಜನ ಸಾಮಾನ್ಯರಿಗೆ ಸ್ವತಃ ಎಸ್‌ಪಿ ಮಾತನಾಡಿದ್ದು ಸಮಾಧಾನ ತಂದಿತು.

ಸಮಸ್ಯೆ ಎದುರಾದರೆ ೧೧೨ ಸಂಪರ್ಕಿಸಿ: ಯಾವುದೇ ರೀತಿಯ ಸಮಸ್ಯೆ ಕಂಡು ಬಂದರೆ ತಕ್ಷಣವೇ ೧೧೨ ಸಂಖ್ಯೆಗೆ ಕರೆ ಮಾಡಿ. ಪೊಲೀಸರು ತಕ್ಷಣ ಸ್ಥಳಕ್ಕೆ ಬರುತ್ತಾರೆ. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಉಚಿತ ಸಹಾಯವಾಣಿ ೧೧೨ಅನ್ನು ಸಾರ್ವಜನಿಕರು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಎಸ್ಪಿ ಸಲಹೆ ನೀಡಿದರು.

ಕರೆ ಮಾಡಿದವರು. . . : ಕಡಕೋಳ ಕುಮಾರಸ್ವಾಮಿ, ಕೆಂಡಗಣ್ಣಸ್ವಾಮಿ, ಸರಗೂರು ಕೃಷ್ಣ, ಎಚ್. ಡಿ. ಕೋಟೆ ಪ್ರದೀಪ್, ಹುಣಸೂರು ಪುಟ್ಟರಾಜು, ಕ್ರಾಂತಿ ಕುಮಾರ್, ಮಲೆಯೂರು ಶಿವಕುಮಾರ್, ಬೀಚನಹಳ್ಳಿ ಗಂಗಾಧರ್, ಮೈಸೂರು ಉಷಾ ಪ್ರಕಾಶ್, ಅಂತರಸಂತೆ ದೀಕ್ಷಿತ್, ಎಚ್. ಡಿ. ಕೋಟೆ ಸಿದ್ದರಾಜು, ನಗರ್ಲೆ ವಿಜಯಕುಮಾರ್, ಉಪ್ಪಿನಹಳ್ಳಿ ಚೆಲುವಸ್ವಾಮಿ, ಅಂತರಸಂತೆ ಮೋಹನ್ ಕುಮಾರ್, ಮೈಸೂರು ಬಸವಣ್ಣ, ಕಮ್ಮಾರಹಳ್ಳಿ ಸಂತೋಷ್, ಜೆ. ಪಿ. ನಗರದ ಅಲ್ವಿನ್ ಡಿ’ಸೋಜಾ, ಹುಲ್ಲಹಳ್ಳಿ ಜಗದೀಶ್, ಸೋಸಲೆ ಮಹದೇವ ಶೆಟ್ಟಿ, ಮಾದು, ಮೈಸೂರು ಗ್ರಾಹಕರ ಪರಿಷತ್‌ನ ಭಾನು ಪ್ರಕಾಶ್, ಕಾಳಿಹುಂಡಿ ಶಿವಕುಮಾರ್, ವಿಜಯನಗರ ವೆಂಕಟೇಶ್, ಹೆಗ್ಗಡಹಳ್ಳಿ ಜವರಶೆಟ್ಟಿ.

ಸೈಬರ್ ಕ್ರೈಂ ನಿರ್ಲಕ್ಷ್ಯ ಬೇಡ, ೧೯೩೦ಗೆ ಕರೆ ಮಾಡಿ. . .
ಸೈಬರ್ ಕ್ರೈಂ ಎನ್ನುವುದು ವೈಟ್ ಕಾಲರ್ ಕ್ರೈಂ ಆಗಿದೆ. ಕುಳಿತಲ್ಲಿಯೇ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ. ರಾಜಾರೋಷವಾಗಿ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ಹಣಗಳಿಸುತ್ತಿದ್ದಾರೆ. ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ತಕ್ಷಣವೇ ಪೊಲೀಸರಿಗೆ ದೂರು ನೀಡಿದರೆ ಹಣವನ್ನು ಮರಳಿ ಪಡೆಯಲು ಅವಕಾಶವಿದೆ. ಹೀಗಾಗಿ, ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣ ಉಚಿತ ದೂರವಾಣಿ ಸಂಖ್ಯೆ ೧೯೩೦ ಕರೆ ಮಾಡಬಹುದು. ಇಲ್ಲವೇ ದೂರಗಳನ್ನು ಆನ್‌ಲೈನ್ ಮೂಲಕ ಸೈಬರ್ ಕ್ರೈಂ ರಿಪೊರ್ಟಿಂಗ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು. ಯಾವುದೇ ರೀತಿಯ ಸೈಬರ್ ಅಪರಾಧಗಳು ನಡೆದರೆ ಮುಂಚೆ ಸೆನ್ ಠಾಣೆಯಲ್ಲಿ ಮಾತ್ರ ದೂರು ನೀಡಬೇಕಾಗಿತ್ತು. ಈಗ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲೂ ದೂರ ನೀಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಮಾಹಿತಿ ನೀಡಿದರು.

ಗೋ ಹತ್ಯೆ ಮಾಡುವ ಹಾಗಿಲ್ಲ
ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಗೋ ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ದನ, ಕರುಗಳನ್ನು ಕೃಷಿ ಸೇರಿದಂತೆ ಇತರ ಚಟುವಟಿಕೆಗಳಿಗೆ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಬೇಕಾದರೆ ಪಶು ವೈದ್ಯರು, ಗ್ರಾಮ ಪಂಚಾಯಿತಿಯಿಂದ ಪ್ರಮಾಣ ಪತ್ರವನ್ನು, ವಾಹನದ ಪತ್ರ ತೆಗೆದುಕೊಳ್ಳುವುದು ಸೇರಿದಂತೆ ಅನೇಕ ಪ್ರಕ್ರಿಯೆ ಇದೆ ಎಂದು ಎಸ್‌ಪಿ ಎನ್. ವಿಷ್ಣುವರ್ಧನ ತಿಳಿಸಿದರು.

ಸಿಬ್ಬಂದಿ ಕೊರತೆ
ಜನಸಂಖ್ಯೆ ಹೆಚ್ಚಳದಿಂದ ಈಗಿನ ಸಿಬ್ಬಂದಿ ಸಾಲುತ್ತಿಲ್ಲ. ಇದರಿಂದಾಗಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಪೊಲೀಸ್ ಠಾಣೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು ಎಂದು ಕರೆ ಮಾಡಿದ ಕೆಲವರು ಎಸ್‌ಪಿ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಎಸ್‌ಪಿ ಜಿಲ್ಲೆಯಲ್ಲಿನ ಪೊಲೀಸ್ ಠಾಣೆಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪೊಲೀಸ್ ಠಾಣೆಗಳಿಗೆ ಸಿಬ್ಬಂದಿಯನ್ನು ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಕ್ರಮ ಮದ್ಯ ಮಾರಾಟದಲ್ಲಿ ಪೊಲೀಸರು ಶಾಮೀಲು!
ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಜಗದೀಶ್ ಎಂಬವರು ಕರೆ ಮಾಡಿ, ಹುಲ್ಲಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ನಡೆಯುತ್ತಿವೆ. ಅಕ್ರಮ ಮದ್ಯ ಮಾರಾಟದಲ್ಲಿ ಪೊಲೀಸರೆ ಶಾಮೀಲಾಗಿದ್ದು, ಪೇದೆಯೊಬ್ಬರು ಕುಡಿದ ಮತ್ತಿನಲ್ಲಿ ಕೆಲಸ ಮಾಡುತ್ತಾರೆ. ಸಾರ್ವಜನಿಕರೊಂದಿಗೆ ದುವರ್ತನೆ ತೋರುತ್ತಾರೆ. ಅವರಿಗೆ ಬಾರ್‌ನವರು ಮದ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಯೊಂದಿಗೆ ಚರ್ಚಿಸಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮದ್ಯಮಾರಾಟದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಅಕ್ರಮ ಮದ್ಯ ಮಾರಾಟದ ದೂರುಗಳೇ ಹೆಚ್ಚು
ಅಕ್ರಮ ಮದ್ಯ ಮಾರಾಟ ವಿಚಾರವಾಗಿ ಹೆಚ್ಚು ಕರೆಗಳು ಬಂದವು. ಮಲೆಯೂರು ಶಿವಕುಮಾರ್, ಕಮ್ಮಾರಹಳ್ಳಿ ಸಂತೋಷ್, ಹುಲ್ಲಹಳ್ಳಿ ಜಗದೀಶ್, ಹೆಗ್ಗಡಹಳ್ಳಿ ಜವರಶೆಟ್ಟಿ ಅವರು ಗ್ರಾಮದ ಹಲವು ಕಡೆ ಅಕ್ರಮ ಮದ್ಯಮಾರಾಟ ನಡೆಯುತ್ತಿವೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಎನ್. ವಿಷ್ಣುವರ್ಧನ, ಮದ್ಯ ಅಕ್ರಮ ಮರಾಟ ಮತ್ತು ಸಾಗಣೆ ತಡೆಗೆ ಇಲಾಖೆ ಸಜ್ಜಾಗಿದೆ. ಆದರೆ, ನಿಗದಿತ ಗ್ರಾಮ, ಸ್ಥಳದ ಮಾಹಿತಿ ನೀಡಬೇಕು. ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಜಪ್ತಿ ಮಾಡಿ, ಮಾರಾಟದಲ್ಲಿ ಭಾಗಿಯಾದವರ ವಿರುದ್ಧ ಕೇಸು ದಾಖಲಿಸಲಿದ್ದಾರೆ ಎಂದರು.

ಫೋನ್ ಇನ್ ಕಾರ್ಯಕ್ರಮ ಆಯೋಜನೆ, ಎಸ್ಪಿ ಕೆಲಸದ ಬಗೆ ಮೆಚ್ಚುಗೆ
‘ಆಂದೋಲನ’ ದಿನಪತ್ರಿಕೆಯು ನೇರ ಫೋನ್ ಇನ್ ಕಾರ್ಯಕ್ರಮ ಆಯೋ ಜಿಸಿದ್ದ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು. ದೂರುಗಳನ್ನು ನೇರವಾಗಿ ಹೇಳಲು ಇದರಿಂದ ಅನುಕೂಲವಾಗಿದೆ ಎಂದು ತಿಳಿಸಿದರು. ಎಸ್‌ಪಿಯನ್ನು ಉದ್ದೇಶಿಸಿ ‘ನಿಮ್ಮಿಂದ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬಂದಿದೆ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಎಂದು ಕೆಲವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘

Tags: