Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ಕೋಟೆಗೆ ೨ ವರ್ಷಗಳಲ್ಲಿ ೪ನೇ ಬಾರಿ ಸಿಎಂ ಸಿದ್ದರಾಮಯ್ಯ ಭೇಟಿ

ಮಂಜು ಕೋಟೆ

ಹಿಂದುಳಿದ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹಲವು ಘೋಷಣೆಗಳ ನಿರೀಕ್ಷೆ 

ಎಚ್.ಡಿ.ಕೋಟೆ: ಹಿಂದುಳಿದ ತಾಲ್ಲೂಕು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಸಾಗಬೇಕಾದರೆ ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಪರಿಶ್ರಮ, ಕಾಳಜಿ ಅಗತ್ಯ ವಾಗಿದ್ದು, ಜಿಲ್ಲೆಯವರೇ ಆದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಾಲ್ಲೂಕಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕಳೆದ ಎರಡು ವರ್ಷಗಳಲ್ಲಿ ೪ ಬಾರಿ ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲು ಕಳೆದ ಬಾರಿ ೫೭೫ ಕೋಟಿ ರೂ. ಈ ಬಾರಿ ೧೭೫ ಕೋಟಿ ರೂ. ಸೇರಿ ಒಟ್ಟು ೭೫೦ ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಅಲ್ಲದೆ ಕೆಲವು ಕಾಮಗಾರಿಗಳಿಗೆ ಚಾಲನೆಯನ್ನೂ ನೀಡಿದ್ದಾರೆ.

ಕೋಟೆ ಕ್ಷೇತ್ರ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ಅಭಯಾರಣ್ಯ, ಜಲಾಶಯಗಳನ್ನು, ಉತ್ತಮ ಪರಿಸರವನ್ನು  ಹೊಂದಿದ್ದು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಬೇಕಾಗಿದೆ. ರೈತಾಪಿ ವರ್ಗದವರು, ಕೂಲಿ ಕಾರ್ಮಿಕರು, ನಿರುದ್ಯೋಗಿಗಳು, ದಲಿತರು, ಗಿರಿಜನರು, ಬಡವರು ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ವಾಸಿಸುತ್ತಿದ್ದರೂ ಯಾವುದೇ ಒಂದು ಕಾರ್ಖಾನೆ ನಿರ್ಮಾಣವಾಗದೇ ಇರುವುದು ವಿಪರ್ಯಾಸ.

ಹಿಂದೆಲ್ಲ ತಾಲ್ಲೂಕಿಗೆ ಸಚಿವರು, ಸಂಸದರು, ಮುಖ್ಯಮಂತ್ರಿಗಳು ಭೇಟಿ ನೀಡಿ ಅಭಿವೃದ್ಧಿ ಕೆಲಸಗಳು, ಜಯಂತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದುದು ವಿರಳವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಪ್ರಮುಖ ನಾಯಕರು ತಾಲ್ಲೂಕಿಗೆ ಭೇಟಿ ನೀಡುತ್ತಿರುವುದರಿಂದ ಜನಸಾಮಾನ್ಯರಲ್ಲಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂಬ ಆಶಾಭಾವನೆ ಮೂಡಿಸಿದೆ.

ಕ್ಷೇತ್ರದಲ್ಲಿ ಎರಡು ತಾಲ್ಲೂಕುಗಳಿರುವುದರಿಂದ ಹೊಸ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳು ಭಾರೀ ಪ್ರಮಾಣದಲ್ಲಿ ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ವಿಧಾನಸಭೆ ಅಧಿವೇಶನಗಳಲ್ಲಿ ಕ್ಷೇತ್ರದ ಸಮಸ್ಯೆಗಳು ಮತ್ತು ಅನುದಾನಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ ಹಿನ್ನೆಲೆಯಲ್ಲಿ ಸಚಿವರು ಕ್ಷೇತ್ರದ ಕೆಲವೊಂದು ಅಭಿವೃದ್ಧಿ ವಿಚಾರವಾಗಿ ಗಮನ ಹರಿಸುತ್ತಿದ್ದರು.

ಆದರೆ, ವಿವಿಧ ಕಾರ್ಯಕ್ರಮಗಳು, ಮಹನೀಯರ ಜಯಂತಿ ಕಾರ್ಯ ಕ್ರಮಗಳು, ಅಭಿವೃದ್ಧಿ ಕೆಲಸಗಳ ವಿಚಾರವಾಗಿ ತಾಲ್ಲೂಕಿಗೆ ಮುಖ್ಯಮಂತ್ರಿ, ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ವೇದಿಕೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಘೋಷಣೆಗಳನ್ನು ಮಾಡುವುದರಿಂದ ಕ್ಷೇತ್ರದ ಅಭಿವೃದ್ಧಿ ಆಗಲಿದೆಯೇ ಎಂಬುದು ಗೊತ್ತಾಗಲಿದೆ. ಸೋಮವಾರ ನಡೆಯುವ ವಿವಿಧ ಕಾಮಗಾರಿಗಳ ಭೂಮಿಪೂಜೆ ಮತ್ತು ಅಂಬೇಡ್ಕರ್ ಜಯಂತಿ, ಅಂಬೇಡ್ಕರ್ ಪ್ರತಿಮೆಯ ಅನಾವರಣ ಕಾರ್ಯ ಕ್ರಮವು ಜನಸಾಮಾನ್ಯರಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ.

” ಮುಖ್ಯಮಂತ್ರಿಗಳು ಮತ್ತು ಸಚಿವರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಮತ್ತು ಮಹನೀಯರ ಜಯಂತಿಯ ಕಾರ್ಯಕ್ರಮಗಳು ನಡೆದಾಗ ತಾಲ್ಲೂಕು ಅಭಿವೃದ್ಧಿಗೆ ಪೂರಕವಾಗಲಿದೆ. ಸಿದ್ದರಾಮಯ್ಯ ಅವರು ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ನಾಲ್ಕು ಬಾರಿ, ಕಳೆದ ಬಾರಿ ವಿರೋಧಪಕ್ಷದ ನಾಯಕರಾಗಿದ್ದಾಗ ೧೨ ಬಾರಿ ತಾಲ್ಲೂಕಿಗೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿ, ನನ್ನ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಕಳೆದ ಬಾರಿ ಭೇಟಿ ನೀಡಿದ್ದಾಗ ೫೭೫ ಕೋಟಿ ರೂ., ಈ ಬಾರಿ ೧೭೫ ಕೋಟಿ ರೂ. ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿ ವಿರೋಧ ಪಕ್ಷದವರಿಗೆ ಪ್ರತ್ಯುತ್ತರ ನೀಡಿದ್ದಾರೆ.”

-ಅನಿಲ್ ಚಿಕ್ಕಮಾದು, ಶಾಸಕರು

Tags:
error: Content is protected !!