Mysore
23
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯ ನಡುವೆ ಮಕ್ಕಳ ಕ್ರೀಡಾಭ್ಯಾಸ

ಎಂ.ಬಿ.ರಂಗಸ್ವಾಮಿ

ಮೂಗೂರು: ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆಯಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರ ಕೊರತೆಯ ನಡುವೆಯೇ ಕ್ರೀಡಾಸಕ್ತ ವಿದ್ಯಾರ್ಥಿಗಳು ಸಾಧನೆ ಮಾಡುವ ವಿಶ್ವಾಸದೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದಾರೆ.

ಮೂಗೂರಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆಯಲ್ಲಿ ೩೦೦ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಪ್ರಭಾರವಾಗಿ ನಿಯೋಜನೆಗೊಂಡಿದ್ದ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರು ವರ್ಗಾವಣೆಗೊಂಡು ವರ್ಷ ಕಳೆದರೂ ಈ ಸ್ಥಾನಕ್ಕೆ ಇದುವರೆಗೂ ಯಾರೂ ನೇಮಕವಾಗಿಲ್ಲ.

ಹೋಬಳಿ ಕೇಂದ್ರ ಸ್ಥಾನವಾಗಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಿರಿಯ ಪ್ರಾಥಮಿಕ ಶಾಲೆಗೆ ಓರ್ವ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗದಿರುವುದು ವಿಷಾದನೀಯ.

ಆದರೆ, ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರೂ ಎಂದಿನಂತೆ ಬೆಳಿಗ್ಗೆ ತರಗತಿಗಳು ಆರಂಭವಾಗುವ ಮುನ್ನವೇ ಶಾಲೆಯ ಮಕ್ಕಳು ಸ್ವತಃ ತಾವೇ ಆಟೋಟದ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಇದೇ ತಿಂಗಳಲ್ಲಿ ನಡೆಯಲಿರುವ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ಆಟೋಟಗಳಲ್ಲಿ ಭಾಗವಹಿಸಿ ಸಾಧನೆ ಮಾಡುವ ಹುಮ್ಮಸ್ಸು ಮಕ್ಕಳಲ್ಲಿ ಕಾಣ ತೊಡಗಿದೆ. ಗ್ರಾಮದ ಕೆಪಿಎಸ್ ದೊಡ್ಡ ಶಾಲೆಯಾಗಿದ್ದು, ಅಗತ್ಯವಿರುವ ಚಿತ್ರಕಲೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳಿಗೆ ಶಾಲಾಭಿವೃದ್ಧಿ ಸಮಿತಿ ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎಂ. ಕೆ.ಬಾಲಶಂಕರ್ ತಿಳಿಸಿದರು.

” ತಿ.ನರಸೀಪುರ ತಾಲ್ಲೂಕಿನಲ್ಲೇ ದೈಹಿಕ ಶಿಕ್ಷಕರ ಕೊರತೆಯಿದ್ದು, ಈ ಶಾಲೆಯಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರ ಹುದ್ದೆ ಖಾಲಿ ಉಳಿದಿದೆ. ಖಾಯಂ ಶಿಕ್ಷಕರು ಇನ್ನೂ ನೇಮಕವಾಗಿಲ್ಲ. ಸದ್ಯದಲ್ಲೇ ಇಲಾಖೆ ವತಿಯಿಂದ ನೇಮಕ ಆಗುವ ಸಾಧ್ಯತೆ ಇದೆ.”

-ಶಿವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಿ.ನರಸಿಪುರ

 

 

Tags:
error: Content is protected !!