Mysore
28
overcast clouds

Social Media

ಭಾನುವಾರ, 19 ಜುಲೈ 2026
Light
Dark

 ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು

ಲಕ್ಷ್ಮೀಕಾಂತ್ ಕೊಮಾರಪ್ಪ

ಸೋಮವಾರಪೇಟೆ: ಪಶ್ಚಿಮ ಘಟ್ಟದ ಸಕಲೇಶಪುರ ರೈಲು ಮಾರ್ಗದಲ್ಲಿ ಶೀಘ್ರವೇ ವಂದೇ ಭಾರತ್ ಪ್ರಯಾಣಿಕರ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಆ ಮೂಲಕ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಕಾಲ ಸನ್ನಿಹಿತವಾಗಿದ್ದು, ಇದರಿಂದ ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರುವ ನಿರೀಕ್ಷೆ ಮೂಡಿದೆ.

ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ೫೫ ಕಿ.ಮೀ. ಉದ್ದದ ಕಠಿಣ ಘಾಟ್ ವಿಭಾಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರಕ್ಕೆ ಇಲಾಖೆ ಸಿದ್ಧತೆ ಕೈಗೊಂಡಿದೆ. ಈ ಮೂಲಕ ಮಲೆನಾಡು ಹಾಗೂ ಕರಾವಳಿ ನಗರಗಳು ಮತ್ತು ರಾಜಧಾನಿ ಬೆಂಗಳೂರು ನಡುವಿನ ವೇಗದ ರೈಲು ಸಂಚಾರದ ಕನಸು ನನಸಾಗಲಿದ್ದು, ಮಲೆನಾಡು ಮತ್ತು ಕರಾವಳಿ ಭಾಗದ ಪ್ರವಾಸೋದ್ಯಮ, ವ್ಯಾಪಾರ ಹಾಗೂ ದೈನಂದಿನ ಪ್ರಯಾಣಕ್ಕೆ ಹೊಸ ವೇಗವನ್ನು ನೀಡಲಿದೆ.

ಈ ರೈಲು ತುಮಕೂರು, ಅರಸೀಕೆರೆ, ಹಾಸನ ಮತ್ತು ಸಕಲೇಶಪುರ ಮೂಲಕ ಮಂಗಳೂರನ್ನು ಸಂಪರ್ಕಿಸಲಿದೆ. ಇದು ಆರಂಭವಾದರೆ ರಾಜಧಾನಿಯಿಂದ ಕರಾವಳಿಗೆ ಪ್ರಯಾಣಿಸುವ ಸಮಯ ಗಣನೀಯವಾಗಿ (ಸುಮಾರು ೫ ಗಂಟೆಗಳಿಗೆ) ಇಳಿಕೆಯಾಗಲಿದೆ.

ಕಳೆದ ವರ್ಷ ಪಶ್ಚಿಮಘಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ ೫೫ ಕಿ.ಮೀ. ಮಾರ್ಗವನ್ನು ೯೩.೫೫ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಇಲಾಖೆ ವಿದ್ಯುದೀಕರಣಗೊಳಿಸಿತ್ತು. ಪ್ರಸ್ತುತ ಈ ಮಾರ್ಗದಲ್ಲಿ ೭ ಗೂಡ್ಸ್ ರೈಲು ಹಾಗೂ ಪ್ರಯಾಣಿಕರ ನಾಲ್ಕು ರೈಲು ಸಂಚರಿಸುತ್ತಿವೆ.

ತುರ್ತು ಬ್ರೇಕಿಂಗ್ ತಂತ್ರಜ್ಞಾನ: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವಿನ ಕಡಿದಾದ ಪಶ್ಚಿಮ ಘಟ್ಟದ ಹಾದಿಯಲ್ಲಿ ಸುರಕ್ಷತೆಗಾಗಿ ವಿಶೇಷ ಸ್ವಯಂಚಾಲಿತ ತುರ್ತು ಬ್ರೇಕಿಂಗ್ (ಎಇಬಿ) ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಇಲ್ಲಿ ಗರಿಷ್ಟ ೩೦ ಕಿ.ಮೀ. ವೇಗದಲ್ಲಿ ಚಲಿಸುವುದು ಕಡ್ಡಾಯವಾಗಿದೆ. ರೈಲು ನಿಗದಿತ ವೇಗಮಿತಿಯನ್ನು ಮೀರಿದರೆ ಎಇಬಿ ವ್ಯವಸ್ಥೆಯು ಸ್ವಯಂ ಚಾಲಿತವಾಗಿ ರೈಲಿನ ವೇಗವನ್ನು ಕನಿಷ್ಠ ಮಟ್ಟಕ್ಕೆ ಇಳಿಸುತ್ತದೆ. ಇದಕ್ಕಾಗಿ ರೈಲ್ವೆ ಮಾರ್ಗದಲ್ಲಿ ರೇಕ್ ನಿರ್ಮಿಸುತ್ತಿದ್ದು ಚೆನ್ನೈ ಕೇಂದ್ರ ರೈಲ್ವೆ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ಎಇಬಿ ವ್ಯವಸ್ಥೆಯೊಂದಿಗೆ ಅಳವಡಿಸಲಾ ಗುತ್ತಿದೆ. ನಂತರ ಆರ್‌ಡಿಎಸ್ ಪ್ರಯೋಗಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕೆಲವು ತಜ್ಞ ಎಂಜಿನಿಯರುಗಳ ತಂಡ ಈಗಾಗಲೇ ಕೆಲಸ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯೋಗ ಯಶಸ್ವಿ: ಐದು ದಿನಗಳಲ್ಲಿ ಆರ್‌ಡಿಎಸ್‌ಒ (ರಿಸರ್ಚ್ ಡಿಸೈನ್ಸ್ ಸ್ಟ್ಯಾಂಡರ್ಡ್ ಆರ್ಗನೈಜೇಷನ್) ಪಶ್ಚಿಮಘಟ್ಟ ಘಾಟ್ ವಿಭಾಗದ ಮೂಲಕ ಒಟ್ಟು ಐದು ಟ್ರಿಪ್‌ಗಳ ಪ್ರಾಯೋಗಿಕ ಸಂಚಾರ ನಡೆಸಿದೆ. ಮತ್ತಷ್ಟು ಪ್ರಯೋಗದ ಅಗತ್ಯವಿದ್ದು, ಚೆನ್ನೈನಿಂದ ಬಂದಿರುವ ಎಲ್ ಎಚ್‌ಬಿ ಬ್ರೇಕಿಂಗ್ ಸಿಸ್ಟಮ್ ಬಳಸಿ ಮತ್ತಷ್ಟು ಪ್ರಯೋಗ ನಡೆಸಲಾಗುವುದು. ಇಲ್ಲಿಯವರೆಗೆ ನಡೆದಿರುವ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಪ್ರಕೃತಿ ನಡುವೆ ಪ್ರಯಾಣ: ಈ ಭಾಗದಲ್ಲಿ ವಂದೇ ಭಾರತ ರೈಲು ಸಂಚಾರದಿಂದ ಬೆಂಗಳೂರು-ಮಂಗಳೂರು-ಹಾಸನ-ಮೈಸೂರು-ಸಕಲೇಶಪುರ ಭಾಗದ ಪ್ರಯಾಣಿಕರಿಗೆ ಕರಾವಳಿ ಹಾಗೂ ರಾಜಧಾನಿ ತಲುಪಲು ಅನುಕೂಲವಾಗುತ್ತದೆ. ಅಲ್ಲದೆ ಈ ಮಾರ್ಗದಲ್ಲಿ ಒಟ್ಟು ೫೭ ಸುರಂಗ ಮಾರ್ಗಗಳು ಹಾಗೂ ೧೧೩ ಸೇತುವೆಗಳಿದ್ದು, ಸುಂದರ ಪ್ರಕೃತಿ ಸೊಬಗನ್ನು ಸವಿಯುವ ಅವಕಾಶವೂ ಸಿಗಲಿದೆ.

” ಈ ಭಾಗದಲ್ಲಿ ವಂದೇ ಭಾರತ್ ಅನುಕೂಲವಾಗಲಿದೆ. ರೈಲು ಚಲಿಸುವುದು ಸಂತಸದ ವಿಷಯ. ಆದರೆ ರೈಲ್ವೆ ಇಲಾಖೆ ಸ್ಥಳೀಯ ಎಡಕುಮಾರಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಎಲ್ಲಾ ಪ್ರಯಾಣಿಕ ರೈಲುಗಳ ನಿಲುಗಡೆ ವ್ಯವಸ್ಥೆ ಮಾಡಿದರೆ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ.”

-ಚಿದನ್, ಸ್ಥಳೀಯರು, ಹೊಂಗಡಹಳ್ಳ ಗ್ರಾಮ

” ಪ್ರಯಾಣಿಕರು ಮತ್ತು ವನ್ಯಪ್ರಾಣಿಗಳ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ವ್ಯವಸ್ಥಿತವಾಗಿ ಸ್ವಯಂ ಚಾಲಿತ ತುರ್ತು ಬ್ರೇಕಿಂಗ್ ಸಿಸ್ಟಮ್ ವ್ಯವಸ್ಥೆಯನ್ನು ಪಶ್ಚಿಮಘಟ್ಟ ರೈಲ್ವೆ ಮಾರ್ಗದಲ್ಲಿ ಅಳವಡಿಸಲಾಗುತ್ತಿದೆ

. -ಪೃಥ್ವಿ ಎಸ್.ಹುಲ್ಲತ್ತಿ, ವಿಭಾಗೀಯ ಹಣಕಾಸು ವ್ಯವಸ್ಥಾಪಕ”  ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೈಸೂರು ರೈಲ್ವೆ ವಿಭಾಗ 

ಕೊಡಗು ಜಿಲ್ಲೆಗೆ ಅನುಕೂಲ..!: 

ಪಶ್ಚಿಮಘಟ್ಟ ರೈಲು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾದರೆ ಮಲೆನಾಡು ಭಾಗದ ಉತ್ತರ ಕೊಡಗು ಹಾಗೂ ಸಕಲೇಶಪುರ ಭಾಗದ ಪ್ರಯಾಣಿಕರಿಗೆ ಬೆಂಗಳೂರು ಮತ್ತು ಮಂಗಳೂರಿಗೆ ವೇಗವಾಗಿ ಹಾಗೂ ಆರಾಮದಾಯಕವಾಗಿ ಪ್ರಯಾಣಿಸಲು ಹೆಚ್ಚಿನ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ ಸಾವಿರಾರು ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ವಂದೇ ಭಾರತ್ ರೈಲು ಉತ್ತಮ ಸಂಪರ್ಕ ಒದಗಿಸುವ ನಿರೀಕ್ಷೆಯಿದ್ದು, ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಉತ್ತರ ಕೊಡಗು, ಸಕಲೇಶಪುರ ಗಡಿಭಾಗದಲ್ಲಿ ಈ ಮಾರ್ಗ ಹಾದುಹೋಗಲಿದ್ದು, ಎಡಕುಮಾರಿ ಬಳಿ ನಿಲ್ದಾಣ ಮಾಡಿದಲ್ಲಿ ಕೊಡಗಿಗೆ ಮತ್ತಷ್ಟು ಈ ಭಾಗದಲ್ಲಿ ವಂದೇ ಭಾರತ್ ಅನುಕೂಲವಾಗಲಿದೆ.

 

 

Tags:
error: Content is protected !!